ಮಂಗಳೂರು: ಮಂಗಳೂರಿನ ಜೈಲಿನಲ್ಲಿ ವಿಚಾರಣಾಧೀನ ಕೈದಿಯಿಂದ 20 ಸಾವಿರ ರೂ. ಸುಲಿಗೆ ಮಾಡಿದ ಆರೋಪ ಪ್ರಕರಣದಲ್ಲಿ ಇತರ ನಾಲ್ವರು ವಿಚಾರಣಾಧೀನ ಕೈದಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (KCOCA)ಯ ವಿವಿಧ ಸೆಕ್ಷನ್ಗಳನ್ನು ಜಾರಿಗೊಳಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಉಳ್ಳಾಲ ಭಾಗದ ಕ್ರಿಮಿನಲ್ ಗಳಾದ ಧನುಷ್ ಭಂಡಾರಿ ಅಲಿಯಾಸ್ ಧನು, ದಿಲೇಶ್ ಬಂಗೇರ, ಲಾಯ್ ವೇಗಸ್, ಸಚಿನ್ ತಲಪಾಡಿ ಎಂಬ ನಾಲ್ವರು ಕೈದಿಗಳ ವಿರುದ್ಧ ಬಿಎನ್ಎಸ್ ಸೆಕ್ಷನ್ 308(4) ಮತ್ತು 395) ಪ್ರಕಾರ ಜೈಲಿನೊಳಗಡೆ ಹಫ್ತಾ ವಸೂಲಿ ಮಾಡಿದ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು. ಇವರು ಹಲ್ಲೆ ಮಾಡಿದ್ದಲ್ಲದೆ, ವಿಧೇಯ ಕೈದಿಯೊಬ್ಬನಿಗೆ ಒತ್ತಡ ಹೇರಿ ಆತನ ಪತ್ನಿಯ ಮೂಲಕ 20 ಸಾವಿರ ರೂ. ವಸೂಲಿ ಮಾಡಿದ್ದರು. ಕೈದಿ ತನ್ನ ಪತ್ನಿಗೆ ಹೇಳಿ, ಆರೋಪಿತರು ಸೂಚಿಸಿದ್ದ ಗೂಗಲ್ ಪೇ ನಂಬರಿಗೆ 20 ಸಾವಿರ ರೂಪಾಯಿ ಹಾಕಿಸಿದ್ದ.
ಇತ್ತೀಚೆಗೆ ಎಸಿಪಿ ನೇತೃತ್ವದ ಪೊಲೀಸರು ಜೈಲು ತಪಾಸಣೆ ಸಂದರ್ಭದಲ್ಲಿ ಶೋಷಣೆಗೊಳಗಾದ ಕೈದಿ ಸ್ವತಃ ಈ ಬಗ್ಗೆ ದೂರು ಹೇಳಿಕೊಂಡಿದ್ದು, 20 ಸಾವಿರ ರೂ. ಮೊತ್ತವನ್ನು ಪತ್ನಿಯ ಮೂಲಕ ಹಾಕಿಸಿದ್ದಾಗಿಯೂ ತಿಳಿಸಿದ್ದ. ಈ ವಿಚಾರದಲ್ಲಿ ಬರ್ಕೆ ಠಾಣೆಯಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಇದಲ್ಲದೆ, ಆರೋಪಿಗಳು ಈಗಾಗಲೇ ಒಂದು ಕೇಸಿನಲ್ಲಿ ಜೈಲಿನಲ್ಲಿದ್ದು, ಒಂದಕ್ಕಿಂತ ಹೆಚ್ಚು ಕೇಸಿನಲ್ಲಿ ಭಾಗಿಯಾಗಿ ಕೂಟ ಕಟ್ಟಿಕೊಂಡು ಅಪರಾಧ ಎಸಗುತ್ತಿದ್ದರೆ ಅಂತಹವರ ಮೇಲೆ ಕೋಕಾ ಕಾಯ್ದೆ ಹೇರಬಹುದಾಗಿದೆ. ಸಂಘಟಿತ ಅಪರಾಧ ಚಟುವಟಿಕೆ, ಕಾನೂನು ವಿರೋಧಿ ಕೃತ್ಯ ನಡೆಸುತ್ತಿದ್ದಾರೆಂಬ ನೆಲೆಯಲ್ಲಿ ಕೆ.-ಕೋಕಾ ಕಾಯ್ದೆಯಡಿ ನಾಲ್ವರ ವಿರುದ್ಧವೂ ಕೇಸು ದಾಖಲಿಸಲಾಗಿದೆ.