ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಇಂದು (ಗುರುವಾರ) ದಕ್ಷಿಣ ಕನ್ನಡದ ವಿವಿಧ ತಾಲೂಕಿನ ಶಾಲೆಗಳು ಹಾಗು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮಂಗಳೂರು (ದಕ್ಷಿಣ ಕನ್ನಡ): ವ್ಯಾಪಕ ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ, ಉಳ್ಳಾಲ, ಪುತ್ತೂರು, ಕಡಬ, ಮುಲ್ಕಿ ಹಾಗೂ ಮೂಡಬಿದಿರೆ ತಾಲೂಕುಗಳ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ (12ನೇ ತರಗತಿವರೆಗೆ) ಇಂದು ರಜೆ ಘೋಷಣೆ ಮಾಡಿ, ಆಯಾ ತಾಲೂಕುಗಳ ತಹಶೀಲ್ದಾರರು ಆದೇಶ ನೀಡಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ, ಈ ತಾಲೂಕುಗಳಾದ್ಯಂತ ವ್ಯಾಪಕ ಮಳೆ ಮುಂದುವರೆದಿದೆ. ಈ ನಿಟ್ಟಿನಲ್ಲಿ, ಮುಂಜಾಗ್ರತಾ ಕ್ರಮವಾಗಿ ಆಯಾ ತಾಲೂಕುಗಳ ವಿಪತ್ತು ನಿರ್ವಹಣಾ ಪ್ರಾಧಿಕಾರವು ತುರ್ತು ಕ್ರಮಗಳನ್ನು ಕೈಗೊಂಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.