ಮಂಗಳೂರು: ಕೊಳ್ತಮಜಲು ರಹೀಂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತಿರಸ್ಕರಿಸಿದೆ. ಇದರಿಂದಾಗಿ ಆರೋಪಿಗಳ ನ್ಯಾಯಾಂಗ ಬಂಧನ ಮುಂದುವರಿದಿದೆ.
ಮೇ 27ರಂದು ಬಂಟ್ವಾಳ ತಾಲೂಕಿನ ಕೊಳತ್ತ ಮಜಲಿನಲ್ಲಿ ಅಬ್ದುಲ್ ರಹೀಂ ಅವರನ್ನು ತಂಡವೊಂದು ವ್ಯವಸ್ಥಿತ ಸಂಚಿನ ಮೂಲಕ ಕೊಲೆ ನಡೆಸಿತ್ತು. ಈ ಪ್ರಕರಣ ಸಂಬಂಧ ಪೊಲೀಸರು ಹತ್ತು ಮಂದಿಯನ್ನು ಬಂಧಿಸಿದ್ದರು.
ಈ ಪೈಕಿ ಬಂಟ್ವಾಳ ನಿವಾಸಿ ಅಭಿನ್ ರೈ (32) ಮತ್ತು ಶೃಂಗೇರಿ ನಿವಾಸಿ ರವಿ ಸಂಜಯ್ (29) ಎಂಬುವವರನ್ನು ಆರೋಪಿಗಳನ್ನಾಗಿ ಬಂಧಿಸಲಾಗಿತ್ತು. ಬಂಧನದ ಬಳಿಕ ಇವರಿಬ್ಬರೂ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ನ್ಯಾಯಾಲಯವು ಮಂಗಳವಾರ ಅರ್ಜಿಯ ವಿಚಾರಣೆ ನಡೆಸಿ, ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.