
ಪರಶುರಾಮ.. ಥೀಂ ಪಾರ್ಕ್ನಲ್ಲಿ ನಡೆದಿರೋ ಹಗರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಕಾರ್ಕಳ ಪೊಲೀಸರು ಕೋರ್ಟ್ ಮುಂದೆ ಚಾರ್ಜ್ ಶೀಟ್ ಇಟ್ಟಿದ್ದಾರೆ. ಆ ತನಿಖಾ ವರದಿಯಲ್ಲಿ ಅನೇಕ ವಿಚಾರ ಬಹಿರಂಗವಾಗಿದೆ.
ಹಿತ್ತಾಳೆ ಎಂದು ವರದಿಯಲ್ಲಿ ಉಲ್ಲೇಖ
ಆಗಿನ ಸಿಎಂ ಬೊಮ್ಮಾಯಿ.. ಸಚಿವ ಸುನೀಲ್ ಕುಮಾರ್.. ಶೋಭ ಕರಂದ್ಲಾಜೆ.. ಬಿಜೆಪಿ ನಾಯಕರು ಪರುಶುರಾಮನ ವಿಗ್ರಹ ಲೋಕಾರ್ಪಣೆ ಮಾಡಿ.. ವಿಕ್ಟರಿ ಸಂಬಲ್ ತೋರ್ಸಿ.. ಗೆದ್ವಿ ಅಂತ ಬೀಗಿದ್ರು. ಆದ್ರೆ, ಆಗಿನ ಬಿಜೆಪಿ ಸರ್ಕಾರಕ್ಕೆ ಕೇರಳ ದ ಶಿಲ್ಪಿಗಳು ಸರಿಯಾಗಿ ಟೋಪಿ ಹಾಕಿ ಮೂರ್ನಾಮ ಹಾಕಿದ್ದಾರೆ. ಇದನ್ನ ಕೋರ್ಟ್ಗೆ ಸ್ವತಃ ಪೊಲೀಸರೇ ಚಾರ್ಜ್ ಶೀಟ್ ಮೂಲಕ ತಿಳಿಸಿದ್ದಾರೆ.

ವಿಗ್ರಹ ನೋಡಿದ ಕೆಲವರು ಕಂಚಿನ ವಿಗ್ರಹ ಅಂದ್ರು. ಇನ್ನೂ ಕೆಲವರು ರಟ್ಟು.. ಫೈಬರ್.. ಪ್ಲಾಸ್ಟಿಕ್ ಅಂದ್ರು.. ಇನ್ನೂ ಕೆಲವ್ರು ತನಿಖೆ ಅಂದ್ರು.. ಇದೆಕ್ಕೆಲ್ಲಾ ಕಾರ್ಕಳ ಪೊಲೀಸರು ಸ್ಪೀಡ್ ಬ್ರೇಕರ್ ಆಕಿದ್ದಾರೆ. 1231 ಪುಟಗಳ ದೋಷಾರೋಪಣಾ ಪಟ್ಟಿಯನ್ನು ಕಾರ್ಕಳದ ನ್ಯಾಯಾಲಯದ ಮುಂದಿಟ್ಟಿದ್ದಾರೆ.
ಚಾರ್ಜ್ಶೀಟ್ನಲ್ಲಿ ಏನಿದೆ?
- ಪರಶುರಾಮ ಮೂರ್ತಿಯನ್ನು ಹಿತ್ತಾಳೆಯಿಂದ ಮಾಡಲಾಗಿದೆ
- ಕಂಚಿನ ಮೂರ್ತಿಯಲ್ಲ ಎಂದು ತನಿಖಾ ವರದಿಯಲ್ಲಿ ಉಲ್ಲೇಖ
- ರಟ್ಟು, ಫೈಬರ್, ಪ್ಲಾಸ್ಟಿಕ್ ಎಂದು ವಾದ ಮಾಡುತ್ತಿದ್ದ ಕಾಂಗ್ರೆಸ್
- ಪರಶುರಾಮ ಕಂಚಿನ ಮೂರ್ತಿ ಎಂದು ವಾದಿಸುತ್ತಿದ್ದ ಬಿಜೆಪಿ
- ತಜ್ಞರು ಮತ್ತು ಪೊಲೀಸ್ ತನಿಖೆಯಲ್ಲಿ ಹಿತ್ತಾಳೆ ಅಂತ ಸಾಬೀತು
ಏನಿದು ಪ್ರತಿಮೆ ವಿವಾದ?
2023ರ ಜನವರಿ 27 ರಂದು ಪರಶುರಾಮ ಥೀಂ ಪಾರ್ಕ್ ಅನ್ನು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದರು. ಕ್ರಿಶ್ ಆರ್ಟ್ ವರ್ಲ್ಡ್ ಸಂಸ್ಥೆಯು ಕಂಚಿನ ಪರಶುರಾಮ್ ಮೂರ್ತಿಯನ್ನು ಸ್ಥಾಪಿಸಲು ಉಡುಪಿ ನಿರ್ಮಿತಿ ಕೇಂದ್ರದಿಂದ ಹಣ ಪಡೆದಿತ್ತು. ನಂತರದ ದಿನಗಳಲ್ಲಿ ಅಲ್ಲಿ ಸ್ಥಾಪಿಸಲಾಗಿದ್ದ ಪರಶುರಾಮ ಮೂರ್ತಿಯನ್ನ ಫೈಬರ್ನಿಂದ ನಿರ್ಮಿಸಲಾಗಿದೆ ಹೊರತು ಕಂಚಿನ ಪ್ರತಿಮೆ ಅಲ್ಲ ಎಂದು ಕಾಂಗ್ರೆಸ್ ನಾಯಕರು ಮತ್ತು ಸ್ಥಳೀಯರು ಆರೋಪ ಮಾಡಿದ್ದರು.

2024ರ ಜೂನ್ 21ರಂದು ಕಾರ್ಕಳದ ಕೃಷ್ಣ ಶೆಟ್ಟಿಯಿಂದ ನಕಲಿ ಮೂರ್ತಿ ಅಂತ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಅರ್ಧ ಮೂರ್ತಿ ತೆರವು ಮಾಡಿ ಶೆಡ್ನಲ್ಲಿಟ್ಟು, ಬಳಿಕ ಬೆಂಗಳೂರಿಗೆ ರವಾನೆ ಮಾಡಲಾಗಿತ್ತು. ಈ ಬಗ್ಗೆ ಶಿಲ್ಪಿ ಕೃಷ್ಣನಾಯ್ಕ, ನಿರ್ಮಿತಿ ಕೇಂದ್ರದ ಅರುಣ್, ಸಚಿನ್ ವಿರುದ್ಧ ಕಂಚಿನ ಮೂರ್ತಿ ಮಾಡದೇ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿರೋ ಆರೋಪ ಕೇಳಿ ಬಂದಿತ್ತು. ಒಳಸಂಚು, ನಂಬಿಕೆ ದ್ರೋಹ, ವಂಚನೆ, ಸಾಕ್ಷ್ಯ ನಾಶ ಮಾಡಿದ್ದು ಎಂದು ಸಾಬೀತಾಗಿದ್ದು. ಪ್ರಕರಣ ದಾಖಲಾಗಿದೆ.
ಪರಶುರಾಮ ಥೀಂ ಪಾರ್ಕ್ ಹಾಗೂ ಪ್ರತಿಮೆಯ ಬಗ್ಗೆ ಕಾಂಗ್ರೆಸಿಗರು ನಡೆಸುತ್ತಿದ್ದ ನಿರಂತರ ಅಪಮಾನಕ್ಕೆ ಸೋಲಾಗಿದೆ. ಪ್ರತಿಮೆ ಫೈಬರ್ ದು ಎಂದು ನಡೆಸುತ್ತಿದ್ದ ಟೂಲ್ ಕಿಟ್ ಅಪಪ್ರಚಾರ ಸುಳ್ಳು ಎಂಬುದು ಪೊಲೀಸ್ ತನಿಖೆಯಿಂದಲೇ ಸಾಬೀತಾಗಿದೆಪ್ರತಿಮೆಯನ್ನು ಹಿತ್ತಾಳೆಯಿಂದ ನಿರ್ಮಿಸಲಾಗಿದೆ ಎಂದು ಕಾರ್ಕಳ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ಇದರಿಂದ ಪ್ರತಿಮೆ ಫೈಬರ್ನದ್ದುದು ಎಂಬ ವ್ಯವಸ್ಥಿತ ಪಿತೂರಿಗೆ ಸೋಲಾಗಿದೆ-ಸುನೀಲ್ ಕುಮಾರ್, ಮಾಜಿ ಸಚಿವ
ಒಟ್ಟಾರೆ, ರಾಜಕೀಯದ ವಿವಾದಗಳ ಹೋಮಕ್ಕೆ ಬಿಸಿ ತುಪ್ಪವಾಗಿರೋ ಪರಶುರಾಮನ ಥೀಂ ಪಾರ್ಕ್ ವಿಚಾರ ಸದ್ಯ ಕೋರ್ಟ್ ಮೆಟ್ಟಿಲೇರಿದೆ. ನ್ಯಾಯಾಲಯಕ್ಕೆ ವರದಿ ಸಲ್ಲಿಕೆಯಾಗಿದ್ದು ಸತ್ಯಾಸತ್ಯತೆ ಹೊರಬರಬೇಕಿದೆ. ನಮ್ಮ ತೆರಿಗೆ ದುಡ್ಡಿನಲ್ಲಿ ನಕಲಿ ಆಟವಾಡಿ ದುಡ್ಡು ಹೊಡೆದು ತಿಂದವರ ಸತ್ಯ ಹೊರಬರಬೇಕಿದೆ.