ಕರ್ನಾಟಕದಲ್ಲಿ ಹೃದಯಾಘಾತ ಸಾವಿನ ಸರಣಿ ಮುಂದುವರಿದಿದೆ. ಈಗಾಗಲೇ ಸರ್ಕಾರ ಹೃದಯಾಘಾತ ತಡೆ ಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ತಿದೆ. ಕೆಲ ಸೂಚನೆಗಳನ್ನೂ ಕೊಟ್ಟಿದೆ. ಈ ನಡುವೆ ಇಂದು (ಜುಲೈ 13) ರಾಜ್ಯದಲ್ಲಿ 6 ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಹಾಗಾದ್ರೆ, ಯಾವೆಲ್ಲಾ ಜಿಲ್ಲೆಗಳಲ್ಲಿ ಯಾರ್ಯಾರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಎನ್ನುವ ವಿವರ ಇಲ್ಲಿದೆ.
HAYATH TV Updated By: Ashraf Kammaje
Updated on: Jul 13, 2025 | 3:00 PM
ಬೆಂಗಳೂರು, (ಜುಲೈ 13): ಕರ್ನಾಟಕದಲ್ಲಿ (Karnataka) ದಿನೇ ದಿನೇ ಹೆಚ್ಚುತ್ತಿರುವ ಹೃದಯಾಘಾತ (Heart Attack) ಸಾವಿನ ಸರಣಿ ಮುಂದುವರಿದೆ. ನಿಂತಲ್ಲೇ ಕುಳಿತಲ್ಲೇ, ಕೆಲಸ ಕಾರ್ಯ ಮಾಡುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪುತ್ತಿದ್ದಾರೆ. ಅದರಂತೆ ಇಂದು (ಜುಲೈ 13) ಒಂದೇ ದಿನ ರಾಜ್ಯದಲ್ಲಿ ಆರು ಮಂದಿ ಹಾರ್ಟ್ ಅಟ್ಯಾಕ್ ಗೆ ಬಲಿಯಾಗಿದ್ದಾರೆ. ಆರು ಮಂದಿ ಪೈಕಿ ಬಹುತೇಕರು 45 ವರ್ಷದೊಳಗಿನವರು ಎನ್ನುವುದು ಮತ್ತೆ ಆತಂಕ ಹೆಚ್ಚುವಂತೆ ಮಾಡಿದೆ. ಮೈಸೂರಿನಲ್ಲಿ ಇಬ್ಬರು, ಗದಗ, ಬೆಂಗಳೂರಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇಬ್ಬರು ಡ್ಯಾನ್ಸ್ ಮಾಡುತ್ತಿರುವಾಗ ಕುಸಿದುಬಿದ್ದು ಸಾವನ್ನಪ್ಪಿದ್ದರೆ, ಇನ್ನೊಬ್ಬರು ವಾಕಿಂಗ್ ಮಾಡುತ್ತಿರುವಾಗಲೇ ಹೃದಯಘಾತದಿಮದ ಸಾವನ್ನಪ್ಪಿದ್ದಾರೆ.
ಡ್ಯಾನ್ಸ್ ಮಾಡುತ್ತಿರುವಾಗಲೇ ಹೃದಯಾಘಾತ
46 ವರ್ಷದ ಬಸವರಾಜ ಎನ್ನುವಾತ ಡ್ಯಾನ್ಸ್ ಮಾಡುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಸರ್ಜಾಪುರ ನಿವಾಸಿಯಾಗಿರುವ ಬಸವರಾಜ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು. ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ 4 ವರ್ಷದಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ರು. ವೀಕೆಂಡ್ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಸ್ನೇಹಿತರೊಂದಿಗೆ ರೆಸಾರ್ಟ್ಗೆ ಹೋಗಿದ್ರು. ಈ ವೇಳೆ ಖುಷಿಯಿಂದ ಮಾರಿಕಣ್ಣು ಹೋರಿ ಮ್ಯಾಲೆ ಹಾಡಿಗೆ ನೃತ್ಯ ಮಾಡುತ್ತಿದ್ದಾಗಲೇ ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ರೂ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಸ್ನೇಹಿತರ ಮೊಬೈಲ್ನಲ್ಲಿ ಬಸವರಾಜ್ ಕುಸಿದು ಬಿದ್ದ ದೃಶ್ಯ ಸೆರೆಯಾಗಿದೆ.
ವಾಕಿಂಗ್ ಮಾಡ್ತಿದ್ದಾಗಲೇ ಉದ್ಯಮಿಗೆ ಹಾರ್ಟ್ ಅಟ್ಯಾಕ್
ದಾವಣಗೆರೆ ಶಕ್ತಿ ನಗರದ ನಿವಾಸಿ 40 ವರ್ಷದ ಅನಿಲ್ ಇಂದು ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಹೃದಯಾಘಾತಕ್ಕೆ ಅನಿಲ್ ಮೃತಪಟ್ಟಿದ್ದಾರೆ. ಅನಿಲ್ ಕುಸಿದು ಬೀಳುವ ದೃಶ್ಯ ಅಂಗಡಿಯೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದಕ್ಕಿಂತ ಆಘಾತಕಾರಿ ಸಂಗತಿ ಅಂದ್ರೆ, ಕಳೆದ ಮೂರು ತಿಂಗಳಲ್ಲಿ ದಾವಣಗೆರೆಯಲ್ಲಿ ಹೃದಯಾಘಾತಕ್ಕೆ ಮೃತಪಟ್ಟವರ ಸಂಖ್ಯೆ 80ರ ಗಡಿ ದಾಟಿದೆ.
ಮೈಸೂರಿನಲ್ಲಿಂದು ಇಬ್ಬರು ಬಲಿ
ಮೈಸೂರಿನಲ್ಲಿಂದು ಇಬ್ಬರು ಹೃದಯಾಘಾತಕ್ಕೆ ಮೃತಪಟ್ಟಿದ್ದಾರೆ. ಟಿ.ನರಸೀಪುರ ತಾಲೂಕು ಕಚೇರಿಯಲ್ಲಿ ಎಸ್ಡಿಎ ಆಗಿದ್ದ 44 ವರ್ಷದ ಅರುಣ್, ಮೈಸೂರಿನಿಂದ ಬೆಂಗಳೂರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅರುಣ್ ಮಂಡ್ಯ ಜಿಲ್ಲೆ ಕಿಲಾರೆ ಗ್ರಾಮದವರು ಅನ್ನೋದು ಗೊತ್ತಾಗಿದೆ. ಇನ್ನು ಟೀ.ನರಸೀಪುರ ಗುಂಜಾನರಸಿಂಹಸ್ವಾಮಿ ದೇಗುಲದ ಪ್ರಧಾನ ಅರ್ಚಕ 66 ವರ್ಷದ ಸಂಪತ್ ಕುಮಾರ್ ಸಹ, ತಡರಾತ್ರಿ ಹೃದಯಾಘಾತದಿಂದ ಬಲಿಯಾಗಿದ್ದಾರೆ.
ಇನ್ನು ಗದಗ ಜಿಲ್ಲೆ ಲಕ್ಷ್ಮೇಶ್ವರ ನಿವಾಸಿ 42 ವರ್ಷದ ಶೋಭಾ ವಡಕಣ್ಣವರ ಎನ್ನುವರು ಸಹ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆರೋಗ್ಯವಾಗಿದ್ದ ಶೋಭಾಗೆ ನಿನ್ನೆ (ಜುಲೈ 12) ಎದೆ ನೋವು ಕಾಣಿಸಿತ್ತು.ತಕ್ಷಣ ಲಕ್ಷ್ಮೇಶ್ವರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಚಿಕ್ಕಮಗಳೂರಿನಲ್ಲಿ 50 ವರ್ಷದ ದಾಕ್ಷಾಯಿಣಿ ಎನ್ನುವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ವಾರದ ಹಿಂದೆ ದಾಕ್ಷಾಯಿಣಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ರು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು. ಚೇತರಿಸಿಕೊಂಡಿದ್ರು. ಇಂದು ಜಿಲ್ಲಾಸ್ಪತ್ರೆಯ ವಾರ್ಡ್ನಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ದಾಕ್ಷಾಯಿಣಿ ಸಾವನ್ನು ಕಣ್ಣಾರೆ ಕಂಡ ರೋಗಿಗಳು, ಸಂಬಂಧಿಕರಿಗೆ ಶಾಕ್ ಆಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.