ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ನ ತೈಲ ಚಲನೆ ವಿಭಾಗದಲ್ಲಿ ನಡೆದ ದುರಂತದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.
ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ನ (MRPL) ತೈಲ ಚಲನೆ ವಿಭಾಗದಲ್ಲಿ ನಡೆದ ದುರಂತದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಓರ್ವ ಅಸ್ವಸ್ಥರಾಗಿರುವ ಘಟನೆ ಶನಿವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ನಡೆದಿದೆ. ದೀಪ್ ಚಂದ್ರ ಭಾರತೀಯ ಮತ್ತು ಬಿಜಿಲ್ ಪ್ರಸಾದ್ ಮೃತರು.
ಇಬ್ಬರು ಕಾರ್ಮಿಕರು ತೊಟ್ಟಿಯ (ಟ್ಯಾಂಕ್ FB7029 A – ಡ್ರೈ ಸ್ಲಾಪ್ ಸರ್ವಿಸ್, ಫ್ಲೋಟಿಂಗ್ ರೂಫ್) ಮೇಲ್ಭಾಗದ ಪ್ಲಾಟ್‌ಫಾರ್ಮ್‌ನಲ್ಲಿ ದೋಷ ಪರಿಶೀಲಿಸಲು ತೆರಳಿದ್ದರು. ಬಳಿಕ ಇಬ್ಬರೂ ಕಾರ್ಮಿಕರು ತೊಟ್ಟಿಯ ಮೇಲ್ಭಾಗದ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಅವರನ್ನು ತಕ್ಷಣವೇ ಪ್ರಥಮ ಚಿಕಿತ್ಸೆಗಾಗಿ ಕೊಂಡೊಯ್ಯಲಾಯಿತು ಮತ್ತು ನಂತರ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ದುರದೃಷ್ಟವಶಾತ್ ಇಬ್ಬರೂ ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಈ ಘಟನೆಯಲ್ಲಿ ರಕ್ಷಣೆಗಾಗಿ ತೊಟ್ಟಿಯ ಮೇಲೆ ಏರಿದ ಮೂರನೇ ಕಾರ್ಮಿಕ, ವಿನಾಯಕ ಮ್ಯಾಗೇರಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದ್ದು, ವೈದ್ಯರ ನಿಗಾದಲ್ಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಎಂಆರ್ಪಿಎಲ್ನ ಚೀಫ್ ಜನರಲ್ ಮ್ಯಾನೇಜರ್ ಸಿಬಿ ಮತ್ತು ಸಿಸಿ ಡಾ. ರುಡಾಲ್ಫ್ ವಿಜೆ ನೊರೊನ್ಹಾ ಅವರು, ಈ ಘಟನೆಯ ಕುರಿತು ವಿವರವಾದ ತನಿಖೆ ನಡೆಸಲು ಗ್ರೂಪ್ ಜನರಲ್ ಮ್ಯಾನೇಜರ್ಗಳ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಜೊತೆಗೆ, ಎಲ್ಲ ಸಂಬಂಧಿತ ಕಾನೂನಾತ್ಮಕ ಪ್ರಾಧಿಕಾರಗಳಿಗೆ ಮಾಹಿತಿಯನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.