ಡ್ರಗ್ಸ್ ಜಾಲದ ವಿರುದ್ಧ ಮಂಗಳೂರು ಪೊಲಿಸರು ನಡೆಸಿದ ಕಾರ್ಯಾಚರಣೆಯಲ್ಲಿ ಬೀದರ್ ಮೂಲದ ವೈದ್ಯ ಪ್ರಜ್ವಲ್ ಪೀಣ್ಯಾಸ್ ಬಂಧನವಾಗಿದೆ. ಡ್ರಗ್ಸ್ ಜಾಲ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಿಂದ ಡ್ರಗ್ಸ್ ಪೂರೈಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರ ವಿಚಾರಣೆಯಿಂದ ಹಲವು ಸ್ಫೋಟಕ ಮಾಹಿತಿಗಳು ಕೂಡ ತಿಳಿದುಬಂದಿವೆ.
ಮಂಗಳೂರು, ಜುಲೈ 12: ಮಂಗಳೂರಿನಲ್ಲಿ ಡ್ರಗ್ಸ್ (Drugs Mafia) ಜಾಲದ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಬೀದರ್ (Bidar) ಮೂಲದ ವೈದ್ಯರೊಬ್ಬರನ್ನು ಬಂಧಿಸಿದ್ದಾರೆ. ವೈದ್ಯರ ಬಂಧನದ ಬೆನ್ನಲ್ಲೇ, ದಕ್ಷಿಣ ಕನ್ನಡ ಜಿಲ್ಲೆಯ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದ ಅನೇಕ ಸ್ಫೋಟಕ ಮಾಹಿತಿಗಳು ಕೂಡ ಬೆಳಕಿಗೆ ಬಂದಿವೆ. ಬೀದರ್ ಮೂಲದ, ಪ್ರಸ್ತುತ ಬೆಂಗಳೂರಿನ ಕೋಡಿಪಾಳ್ಯ ನಿವಾಸಿಯಾಗಿರುವ ಪ್ರಜ್ವಲ್ ಪೀಣ್ಯಾಸ್ (Prajwal Peenyas) ಬಂಧಿತ ವೈದ್ಯ. ಪ್ರಜ್ವಲ್ ಪೀಣ್ಯಾಸ್ ಹಾಗೂ ಇತರ ಪೆಡ್ಲರ್ಗಳು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ
ಮಧ್ಯ ಪ್ರದೇಶ, ಮಹಾರಾಷ್ಟ್ರದಿಂದ ಮಂಗಳೂರಿಗೆ ಡ್ರಗ್ಸ್
ಡ್ರಗ್ಸ್ ಜಾಲದ ಬೆನ್ನುಬಿದ್ದ ಮಂಗಳೂರು ಪೊಲೀಸರಿಗೆ ಸ್ಫೋಟಕ ಮಾಹಿತಿ ದೊರೆತಿದೆ. ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಿಂದ ಮಂಗಳೂರಿಗೆ ಡ್ರಗ್ಸ್ ಪೂರೈಕೆಯಾಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ವಿದ್ಯಾರ್ಥಿಗಳನ್ನೇ ಗುರಿಯಾಗಿಸಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದುದು ಕೂಡ ಗೊತ್ತಾಗಿದೆ.
ವೈದ್ಯನೇ ಡ್ರಗ್ ಪೆಡ್ಲರ್! ಪೊಲೀಸರಿಗೆ ಗೊತ್ತಾಗಿದ್ಹೇಗೆ?
ಡ್ರಗ್ಸ್ ಜಾಲದ ಬೆನ್ನುಬಿದ್ದ ಮಂಗಳೂರು ಪೊಲೀಸರು 6 ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ವೇಳೆ, ವೈದ್ಯ ಪ್ರಜ್ವಲ್ ಪೀಣ್ಯಾಸ್ ಕಿಂಗ್ಪಿನ್ ಎಂಬುದು ಗೊತ್ತಾಗಿದೆ.
ಮಂಗಳೂರಿನಲ್ಲೇ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ಡಾಕ್ಟರ್!
ವೈದ್ಯ ಪ್ರಜ್ವಲ್ ಪೀಣ್ಯಾಸ್ ಈ ಹಿಂದೆ ಮಂಗಳೂರಿನ ಫಾದರ್ ಮುಲ್ಲರ್ಸ್ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ. ಮಂಗಳೂರು ನಗರದ ವಿವಿಧ ಠಾಣೆಗಳಲ್ಲಿ ಡ್ರಗ್ಸ್ ಪೂರೈಕೆ ಹಿನ್ನಲೆ ದಾಖಲಾಗಿದ್ದ ಮೂರು ಪ್ರಕರಣಗಳ ಜಾಡು ಹಿಡಿದಾಗ ಪ್ರಜ್ವಲ್ ಪೀಣ್ಯಾಸ್ ಕರ್ಮಕಾಂಡ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಈವರೆಗೆ ಒಟ್ಟು 9 ಆರೋಪಿಗಳನ್ನು ಬಂಧಿಸಲಾಗಿದೆ.
ಮಂಗಳೂರಿನಲ್ಲಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಆರು ಜನರ ಬಂಧನವಾಗಿತ್ತು. ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಮಂಗಳೂರಿಗೆ ಈ ಜಾಲ ಡ್ರಗ್ಸ್ ಪೂರೈಕೆ ಮಾಡುತ್ತಿತ್ತು. ಮಹಾರಾಷ್ಟ್ರಕ್ಕೆ ಸೇರಿದ ಇಬ್ಬರು ಮಧ್ಯಪ್ರದೇಶಕ್ಕೆ ಸೇರಿದ ಒಬ್ಬರನ್ನ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು.ಬೀದರ್ ಮೂಲದ ವೈದ್ಯನನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಮಕ್ಕಳು ಡ್ರಗ್ಸ್ ಅಡಿಕ್ಷನ್ಗೆ ಒಳಗಾಗಿದ್ದಾರೆ ಎಂದು ಪೋಷಕರೇ ಪೊಲೀಸರಿಗೆ ದೂರು ನೀಡಿದ ಅಚ್ಚರಿಯ ವಿದ್ಯಮಾನ ಮಂಗಳೂರಿನಲ್ಲಿ ನಡೆದಿತ್ತು. ನಂತರ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ನೂರಾರು ವಿದ್ಯಾರ್ಥಿಗಳಿಗೆ, ಮಕ್ಕಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಜಾಲವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.