ಬೆಂಗಳೂರು: ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರಿಗೆ ನೀಡಲಾಗಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಮುಂದುವರಿಸಿದ್ದರೂ, ಇದೇ ವೇಳೆ ಕಠಿಣವಾದ ಷರತ್ತುಗಳನ್ನು ವಿಧಿಸಿದೆ. ಇನ್ನು ಮುಂದೆ ಯಾವುದೇ ದ್ವೇಷಪೂರಿತ ಭಾಷಣ ಮಾಡುವಂತಿಲ್ಲ ಅಥವಾ ಈ ಹಿಂದೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿನ ಅಪರಾಧಗಳನ್ನು ಪುನರಾವರ್ತಿಸುವಂತಿಲ್ಲ ಎಂದು ನ್ಯಾಯಾಲಯವು ಖಡಾಖಂಡಿತವಾಗಿ ಆದೇಶಿಸಿದೆ.
ಕೋಮು ಸೂಕ್ಷ್ಮ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಹರೀಶ್ ಪೂಂಜಾ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ಈ ಹಿಂದೆ ತಡೆಯಾಜ್ಞೆ ನೀಡಿತ್ತು. ಈ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು ಎಂದು ಕೋರಿ ದೂರುದಾರರಾದ ಇಬ್ರಾಹಿಂ ಅವರು ಹಿರಿಯ ವಕೀಲ ಎಸ್.ಬಾಲನ್ ಮೂಲಕ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣಕುಮಾರ್ ಅವರ ಪೀಠವು ನಡೆಸಿತು. ವಿಚಾರಣೆ ವೇಳೆ, ಪೂಂಜಾ ಪರ ವಕೀಲರು ಹಾಗೂ ಸರ್ಕಾರದ ಪರ ವಕೀಲರು ಕಾಲಾವಕಾಶ ಕೋರಿದರು. ಆದರೆ, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಕೀಲ ಎಸ್.ಬಾಲನ್, “ಹರೀಶ್ ಪೂಂಜಾ ಅವರು ಪದೇ ಪದೇ ಅಪರಾಧ ಎಸಗುವ ಹಿನ್ನೆಲೆ ಹೊಂದಿದ್ದಾರೆ. ಅವರಿಗೆ ನೀಡಲಾದ ತಡೆಯಾಜ್ಞೆಯನ್ನು ದುರ್ಬಳಕೆ ಮಾಡಿಕೊಂಡು ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸುವ ಕೃತ್ಯಗಳನ್ನು ಮುಂದುವರಿಸುತ್ತಿದ್ದಾರೆ. ಇಂತಹ ವ್ಯಕ್ತಿಗಳಿಗೆ ನ್ಯಾಯಾಲಯದ ರಕ್ಷಣೆ ಸಿಗಬಾರದು” ಎಂದು ಬಲವಾಗಿ ವಾದಿಸಿದರು.
“ಇಂತಹ ದ್ವೇಷ ಭಾಷಣಗಳು ಸಮಾಜದಲ್ಲಿ ಸಾಮೂಹಿಕ ಸನ್ನಿಗೆ ಕಾರಣವಾಗಿ, ಮಂಗಳೂರಿನಲ್ಲಿ ನಡೆದ ಹತ್ಯೆಗಳಂತಹ ಘೋರ ಕೃತ್ಯಗಳಿಗೆ ದಾರಿ ಮಾಡಿಕೊಡುತ್ತವೆ. ನ್ಯಾಯಾಲಯದ ತಡೆಯಾಜ್ಞೆಗಳು ಕೋಮುದ್ವೇಷ ಹರಡಲು ಅಸ್ತ್ರವಾಗಿ ಬಳಕೆಯಾಗುತ್ತಿವೆ” ಎಂದು ಅವರು ನ್ಯಾಯಪೀಠದ ಗಮನ ಸೆಳೆದರು.
ಪ್ರಕರಣದ ಹಿನ್ನೆಲೆ:
ಬೆಳ್ತಂಗಡಿಯ ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಹರೀಶ್ ಪೂಂಜಾ, ‘ಕಂತ್ರಿ ಮುಸ್ಲಿಮರನ್ನು ದೇವಸ್ಥಾನದ ಕಾರ್ಯಕ್ರಮಗಳಿಂದ ದೂರ ಇಡಬೇಕು’ ಮತ್ತು ‘ಮುಸ್ಲಿಮರೊಂದಿಗಿನ ಸೌಹಾರ್ದತೆಗಿಂತ ಹಿಂದೂಗಳ ನಡುವಿನ ಏಕತೆ ಮುಖ್ಯ’ ಎಂಬರ್ಥದ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಕುರಿತು ಅವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಈ ಎಫ್‌ಐಆರ್ ರದ್ದು ಕೋರಿ ಪೂಂಜಾ ಹೈಕೋರ್ಟ್ ಮೆಟ್ಟಿಲೇರಿದ್ದು, 2025ರ ಮೇ 22ರಂದು ಪ್ರಕರಣಕ್ಕೆ ಮಧ್ಯಂತರ ತಡೆಯಾಜ್ಞೆ ಪಡೆದಿದ್ದರು.
ಶಾಸಕ ಪೂಂಜಾ ಅವರು ಸರಣಿ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಎಂದು ವಾದಿಸಿದ ವಕೀಲ ಬಾಲನ್, ಅವರ ವಿರುದ್ಧ ಬೆಳ್ತಂಗಡಿ, ಧರ್ಮಸ್ಥಳ, ಬಂಟ್ವಾಳ ಮತ್ತು ಬಜ್ಪೆ ಪೊಲೀಸ್ ಠಾಣೆಗಳಲ್ಲಿ ಐಪಿಸಿ ಸೆಕ್ಷನ್ 153-A (ಕೋಮುದ್ವೇಷಕ್ಕೆ ಪ್ರಚೋದನೆ), 353 (ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ), 505(2) (ಸಮುದಾಯಗಳ ನಡುವೆ ದ್ವೇಷ ಸೃಷ್ಟಿಸುವ ಹೇಳಿಕೆ) ಸೇರಿದಂತೆ ಹಲವು ಗಂಭೀರ ಪ್ರಕರಣಗಳು ದಾಖಲಾಗಿರುವುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠವು, ಅಂತಿಮವಾಗಿ ತಡೆಯಾಜ್ಞೆಯನ್ನು ಆಗಸ್ಟ್ 7, 2025ರವರೆಗೆ ವಿಸ್ತರಿಸಿತು. ಆದರೆ, ಈ ಅವಧಿಯಲ್ಲಿ ಶಾಸಕರು ಯಾವುದೇ ಕಾರಣಕ್ಕೂ ದ್ವೇಷ ಭಾಷಣ ಮಾಡಬಾರದು ಮತ್ತು ಹಳೆಯ ಪ್ರಕರಣಗಳಲ್ಲಿನ ಅಪರಾಧಗಳನ್ನು ಪುನರಾವರ್ತಿಸಬಾರದು ಎಂದು ಕಟ್ಟುನಿಟ್ಟಿನ ಷರತ್ತು ವಿಧಿಸಿ ಆದೇಶ ಹೊರಡಿಸಿದೆ.