ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧವನ್ನು ಖಂಡಿಸಿ ಜಾಗತಿಕವಾಗಿ ನಡೆಯುತ್ತಿರುವ ಸೈಲೆನ್ಸ್ ಫಾರ್ ಗಾಝಾ (Silence for Gaza)’ಡಿಜಿಟಲ್ ಸತ್ಯಾಗ್ರಹ’ವನ್ನು ಬೆಂಬಲಿಸುವಂತೆ ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಕರೆಕೊಟ್ಟಿದೆ.
ಪ್ರತಿದಿನ 30 ನಿಮಿಷಗಳ ಕಾಲ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡುವುದು. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವುದು, ಲೈಕ್ ಒತ್ತುವುದು, ಕಾಮೆಂಟ್, ಶೇರ್ ಮಾಡುವುದರಿಂದ ದೂರ ಉಳಿಯುವುದೇ ಈ ಡಿಜಿಟಲ್ ಸತ್ಯಾಗ್ರಹ.
ಜಗತ್ತಿನ ವಿವಿದೆಡೆ ಈ ಪ್ರಯೋಗಗಳು ನಡೆದಿದೆ ಎಂದು ವರದಿಗಳು ಹೇಳಿವೆ. ಭಾರತದಲ್ಲಿ ಮೊದಲ ಬಾರಿಗೆ ಸಿಪಿಐ(ಎಂ) ಈ ಸತ್ಯಾಗ್ರಹಕ್ಕೆ ಕರೆಕೊಟ್ಟಿದೆ. ಈ ಮೂಲಕ ಜಾಗತಿಕ ಪ್ರತಿಭಟನೆಯನ್ನು ಬೆಂಬಲಿಸಿದೆ.
ಪ್ರತಿದಿನ ರಾತ್ರಿ 9.00 ಗಂಟೆಯಿಂದ 9.30ರವರೆಗೆ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಅಫ್ ಮಾಡಿ ‘ಸೈಲೆನ್ಸ್ ಫಾರ್ ಗಾಝಾ’ ಡಿಜಿಟಲ್ ಸತ್ಯಾಗ್ರಹವನ್ನು ಬೆಂಬಲಿಸುವಂತೆ ಸಿಪಿಐ(ಎಂ) ಪಾಲಿಟ್ ಬ್ಯೂರೋ ಜುಲೈ 5ರಂದು ಕರೆ ಕೊಟ್ಟಿದೆ.
ಇತ್ತೀಚೆಗೆ ಬಿಡುಗಡೆಯಾದ ವಿಶ್ವಸಂಸ್ಥೆಯ ವರದಿ “ಆಕ್ಯುಪೇಶನ್ ಆರ್ಥಿಕತೆಯಿಂದ ಜನಾಂಗೀಯ ಹತ್ಯೆಯ ಆರ್ಥಿಕತೆಗೆ”, ಗಾಜಾದ ಮೇಲಿನ ಇಸ್ರೇಲ್ ದಾಳಿಯಲ್ಲಿ ವಿವಿಧ ಬಹುರಾಷ್ಟ್ರೀಯ ಸಂಸ್ಥೆಗಳು ಹೇಗೆ ಭಾಗಿಯಾಗಿವೆ ಎಂಬುದನ್ನು ವಿವರಿಸುತ್ತದೆ ಎಂದು ಸಿಪಿಐ(ಎಂ) ಹೇಳಿದೆ.
ಇತ್ತೀಚೆಗೆ ಬಿಡುಗಡೆಯಾದ ‘From Economy of Occupation to Economy of Genocide’ಗಾಝಾದ ಮೇಲಿನ ಇಸ್ರೇಲ್ ದಾಳಿಯಲ್ಲಿ ವಿವಿಧ ಬಹುರಾಷ್ಟ್ರೀಯ ಸಂಸ್ಥೆಗಳು ಹೇಗೆ ಭಾಗಿಯಾಗಿವೆ ಎಂಬುದನ್ನು ವಿವರಿಸುತ್ತದೆ. ಹಾಗಾಗಿ, ಈ ಸಂಸ್ಥೆಗಳ ದುಷ್ಟ ಪಾತ್ರವನ್ನು ಬಹಿರಂಗಪಡಿಸಬೇಕು. ಅವುಗಳನ್ನು ಹೊಣೆಗಾರರನ್ನಾಗಿ ಮಾಡಬೇಕು” ಎಂದು ಸಿಪಿಐ(ಎಂ) ಹೇಳಿಕೆಯಲ್ಲಿ ತಿಳಿಸಿದೆ.
ಈ ಸಂಸ್ಥೆಗಳು ನರಮೇಧಕ್ಕೆ ಕಾರಣವಾದರೂ ಕೂಡ, ನಮ್ಮ ಡಿಜಿಟಲ್ ಹೆಜ್ಜೆಗುರುತುಗಳನ್ನು ಪೋಷಿಸುತ್ತವೆ. ನಿಗದಿತ ಸಮಯದಲ್ಲಿ ಪ್ರತಿದಿನ ಅರ್ಧ ಗಂಟೆ ನಮ್ಮ ಮೊಬೈಲ್ ಫೋನ್‌ಗಳನ್ನು ಸ್ಥಗಿತಗೊಳಿಸುವುದು ಸಣ್ಣ ವಿಷಯ. ಆದರೆ, ಡಿಜಿಟಲ್ ಅಡ್ಡಿಪಡಿಸುವಿಕೆಯ ಶಕ್ತಿಯುತವಾದ ಕ್ರಿಯೆಯಾಗಿದೆ. ಇಸ್ರೇಲ್‌ನ ನರಮೇಧ ಮತ್ತು ವರ್ಣಭೇದ ನೀತಿಯನ್ನು ಬೆಂಬಲಿಸುವ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧದ ಮುಷ್ಕರ ಎಂದಿದೆ.
ಸಿಪಿಐ(ಎಂ) ದೇಶಾದ್ಯಂತ ಜನರು ಈ ಡಿಜಿಟಲ್ ಪ್ರತಿರೋಧದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮನವಿ ಮಾಡಿದೆ. ಪ್ರತಿಭಟನೆಯ ಅವಧಿಯಲ್ಲಿ ನಿಮ್ಮ ಮೊಬೈಲ್ ಫೋನ್‌ಗಳನ್ನು ಆಫ್ ಮಾಡಿ ಮತ್ತು ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪೋಸ್ಟ್ ಮಾಡುವುದು, ಲೈಕ್ ಮಾಡುವುದು ಅಥವಾ ಕಾಮೆಂಟ್ ಮಾಡುವುದನ್ನು ತಪ್ಪಿಸಿ ಎಂದು ಕೋರಿದೆ.
‘ಸೈಲೆನ್ಸ್ ಫಾರ್ ಗಾಝ’ ಎಂಬ ಜಾಗತಿಕ ಪ್ರತಿರೋಧದಲ್ಲಿ ಭಾಗವಹಿಸುವ ಮೂಲಕ, ಸಿಪಿಐ(ಎಂ) ಪ್ಯಾಲೆಸ್ತೀನ್ ಜನರೊಂದಿಗೆ ಮತ್ತು ಇಸ್ರೇಲ್ ನಡೆಸಿದ ಕ್ರೂರ, ನರಮೇಧದ ವಿರುದ್ಧ ನಿಲ್ಲುತ್ತದೆ. ಈ ಸಾಮೂಹಿಕ ಮೌನವು ನರಮೇಧದ ವಿರುದ್ದದ ಧಿಕ್ಕಾರದ ಕೂಗಾಗಲಿ. ಯುದ್ಧ ಅಪರಾಧಗಳ ವಿರುದ್ಧದ ಧ್ವನಿಯನ್ನು ಅಡಗಿಸಲಾಗುವುದಿಲ್ಲ ಎಂಬ ಪ್ರಬಲ ಪ್ರತಿಪಾದನೆಯಾಗಿರಲಿ ಎಂದು ಸಿಪಿಐ(ಎಂ) ಹೇಳಿದೆ.