ಜುಲೈ 1, 2025ರಿಂದ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ‘ಅವಧಿ ಮುಗಿದ ವಾಹನಗಳಿಗೆ ಇಂಧನವಿಲ್ಲ’ (no fuel for end-of-life vehicles) ನಿಯಮ ಜಾರಿಯಾಗಿದೆ.
ಹೊಸ ನಿಯಮದ ಪ್ರಕಾರ 15 ವರ್ಷ ಹಳೆಯ ಪೆಟ್ರೋಲ್ ವಾಹನಗಳು ಮತ್ತು 10 ವರ್ಷ ಹಳೆಯ ಡೀಸೆಲ್ ವಾಹನಗಳಿಗೆ ಇಂಧನ ಸಿಗುವುದಿಲ್ಲ. ಪರಿಸರ ಮಾಲಿನ್ಯ (ವಾಯು, ಶಬ್ದ ಇತ್ಯಾದಿ) ತಡೆಯಲು ಈ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಸರ್ಕಾರ ಹೇಳಿದೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) 2014 ಆದೇಶ ಮತ್ತು ಸುಪ್ರೀಂ ಕೋರ್ಟ್‌ನ 2018ರ ತೀರ್ಪಿನ ಪ್ರಕಾರ, 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳು ಮತ್ತು 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳನ್ನು ದೆಹಲಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಓಡಿಸುವುದನ್ನು ಮತ್ತು ಪಾರ್ಕಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ
ಅವಧಿ ಮುಗಿದ ವಾಹನಗಳಿಗೆ ಇಂಧನವಿಲ್ಲ’ ನೀತಿಯನ್ನು ಮಾರ್ಚ್ 2025ರಲ್ಲಿ ಘೋಷಣೆ ಮಾಡಲಾಗಿತ್ತು. ಆದರೆ, ಜುಲೈ 1ರಿಂದ ಜಾರಿಗೆ ಬಂದಿದೆ.
.
ಮಾರ್ಚ್ 2025ರ ಆರಂಭದಲ್ಲಿ, ದೆಹಲಿಯ ಪರಿಸರ ಖಾತೆ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಅವರು, 15 ವರ್ಷ ಹಳೆಯ ಪೆಟ್ರೋಲ್ ವಾಹನಗಳು ಮತ್ತು 10 ವರ್ಷ ಹಳೆಯ ಡೀಸೆಲ್ ವಾಹನಗಳಿಗೆ ಏಪ್ರಿಲ್ 1ರಿಂದ ಇಂಧನ ಕೇಂದ್ರಗಳು ಇಂಧನ ಒದಗಿಸುವುದಿಲ್ಲ ಎಂದು ಹೇಳಿದ್ದರು
ಕೊನೆಗೆ ಜುಲೈ 1ರಂದು ‘ಅವಧಿ ಮುಗಿದ ವಾಹನಗಳಿಗೆ ಇಂಧನವಿಲ್ಲ’ ನಿಯಮವನ್ನು ಜಾರಿಗೆ ತರಲಾಗಿದೆ. ಈ ವೇಳೆ ದೆಹಲಿಯ 520 ಇಂಧನ ಕೇಂದ್ರಗಳ ಪೈಕಿ ಸುಮಾರು 500 ಕೇಂದ್ರಗಳಲ್ಲಿ ಎಎನ್‌ಪಿಆರ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸಾರಿಗೆ ಇಲಾಖೆ, ದೆಹಲಿ ಪೊಲೀಸ್, ಸಂಚಾರ ಪೊಲೀಸ್ ಮತ್ತು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಒಳಗೊಂಡ ವಿವರವಾದ ನಿಯಮ ಜಾರಿ ಕಾರ್ಯತಂತ್ರವು ಸಿದ್ದವಾಗಿದೆ ಎಂದು ಸರ್ಕಾರ ಹೇಳಿತ್ತು.
ವಾಯು ಗುಣಮಟ್ಟ ನಿರ್ವಹಣಾ ಆಯೋಗವು (ಸಿಎಕ್ಯೂಎಂ) ನಿಯಮ ಜಾರಿಯನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನಗಳನ್ನು ನೀಡಿತ್ತು. ಅದರಂತೆ, ಜುಲೈ 1, 2025 ರಂದು ಬೆಳಿಗ್ಗೆ 6 ಗಂಟೆಗೆ ಅಧಿಕೃತವಾಗಿ ಅವಧಿ ಮುಗಿದ ವಾಹನಗಳಿಗೆ ಇಂಧನ ಪೂರೈಸುವುದನ್ನು ಸ್ಥಗಿತಗೊಳಿಸಲಾಗಿದೆ.
ಅವಧಿ ಮುಗಿದ ವಾಹನಗಳನ್ನು ಪತ್ತೆ ಹಚ್ಚುವುದು ಹೇಗೆ?
ಇಂಧನ ಕೇಂದ್ರಗಳಲ್ಲಿ ಅಥವಾ ಪೆಟ್ರೋಲ್ ಬಂಕ್‌ಗಳಲ್ಲಿ ಎಐ ಆಧಾರಿತ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ (ಎಎನ್‌ಪಿಆರ್) ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದು ವಾಹನ ಬಂಕ್‌ಗೆ ಬಂದ ತಕ್ಷಣ ಅದರ ನಂಬರ್ ಪ್ಲೇಟ್ ಸ್ಕ್ಯಾನ್ ಮಾಡಿ ‘ವಾಹನ್’ ವ್ಯವಸ್ಥೆಯ ಡೇಟಾಬೇಸ್ ಮೂಲಕ ವಾಹನದ ಅವಧಿಯನ್ನು ಪತ್ತೆ ಹಚ್ಚುತ್ತದೆ.
ವಾಹನ ಮಾಲಕರ ಗತಿಯೇನು?
ಅವಧಿ ಮೀರಿದ ವಾಹನಗಳಿಗೆ ಇಂಧನ ಪೂರೈಕೆ ಮಾಡದಿದ್ದರೆ ವಾಹನ ಮಾಲಕರು ಅವುಗಳನ್ನು ಏನು ಮಾಡುವುದು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಸದ್ಯಕ್ಕೆ ದೆಹಲಿಯಲ್ಲಿ ಮಾತ್ರ ಇಂಧನ ಪೂರೈಕೆ ಮಾಡುತ್ತಿಲ್ಲ. ಹಾಗಾಗಿ, ವಾಹನ ಮಾಲಕರು ದೆಹಲಿ-ಎನ್‌ಸಿಆರ್ ಹೊರಗೆ ವಾಹನವನ್ನು ಮರು ನೋಂದಾಯಿಸಲು ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಪಡೆಯಬಹುದು.
ಖಾಸಗಿ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಬಹುದು (ಸಾರ್ವಜನಿಕ ಪಾರ್ಕಿಂಗ್ ನಿಷೇಧಿಸಲಾಗಿದೆ).
ನೋಂದಾಯಿತ ಸ್ಕ್ರ್ಯಾಪಿಂಗ್ ಸೌಲಭ್ಯದಲ್ಲಿ ವಾಹನವನ್ನು ಸ್ಕ್ರ್ಯಾಪ್ ಮಾಡಬಹುದು ಅಥವಾ ವಾಹವನ್ನು ಗುಜರಿಗೆ ಹಾಕಬಹುದು.
ನಿಯಮ ಉಲ್ಲಂಘಿಸಿದರೆ ಏನಾಗುತ್ತದೆ?
ನಿಯಮ ಉಲ್ಲಂಘಿಸಿದರೆ ಕಾರುಗಳಿಗೆ 10,000 ರೂಪಾಯಿ ಮತ್ತು ದ್ವಿಚಕ್ರ ವಾಹನಗಳಿಗೆ 5,000 ರೂಪಾಯಿ ಜೊತೆಗೆ ಟೋವಿಂಗ್ ಶುಲ್ಕಗಳನ್ನು ವಿಧಿಸಲಾಗುತ್ತದೆ. ಪದೇ ಪದೇ ನಿಯಮ ಉಲ್ಲಂಘಿಸಿದರೆ ಸಂಬಂಧಿತ ಅಧಿಕಾರಿಗಳೇ ವಾಹನವನ್ನು ಮುಟ್ಟುಗೋಲು ಹಾಕಿಕೊಂಡು ಸ್ಕ್ರ್ಯಾಪ್ ಮಾಡುತ್ತಾರೆ.
ಹೊಸ ನಿಯಮದಲ್ಲಿ ಅಂಗವಿಕಲರು ಅಥವಾ ಇತರ ಗುಂಪುಗಳಿಗೆ ಯಾವುದೇ ನಿರ್ದಿಷ್ಟ ವಿನಾಯಿತಿಗಳನ್ನು ನೀಡಲಾಗಿಲ್ಲ. ಅಂದರೆ, ಎಲ್ಲಾ ವಾಹನಗಳು, ಮಾಲೀಕತ್ವವನ್ನು ಲೆಕ್ಕಿಸದೆ, ನಿಯಮಗಳನ್ನು ಪಾಲಿಸಬೇಕಿದೆ.
ದಂಡವನ್ನು ತಪ್ಪಿಸಲು ಜೀವಿತಾವಧಿ ಮುಗಿದ ವಾಹನಗಳ ಮಾಲೀಕರು ಹೊಸ, ತಂತ್ರಜ್ಞಾನಗಳು ಹೊಂದಿರುವ ವಾಹನಗಳು ಅಥವಾ ವಿದ್ಯುತ್ ವಾಹನಗಳಿಗೆ (ಇವಿ) ಬದಲಾಯಿಸಲು ಪ್ರೋತ್ಸಾಹಿಸಲಾಗುತ್ತದೆ.
ದೆಹಲಿ ಇವಿ ನೀತಿ 2.0 (ಭವಿಷ್ಯದ ಪರಿಣಾಮ)
ಆಗಸ್ಟ್ 15,2026 ರಿಂದ ದೆಹಲಿಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ದ್ವಿಚಕ್ರ ವಾಹನಗಳ ಹೊಸ ನೋಂದಣಿಗಳನ್ನು ನಿಷೇಧಿಸಲು ಯೋಜಿಸಲಾಗಿದೆ. ಇದರಿಂದಾಗಿ ವಿದ್ಯುತ್ ಚಾಲಿತ ವಾಹನಗಳಿಗೆ (ಇವಿ) ಬೇಡಿಕೆ ಹೆಚ್ಚಾಗಲಿದೆ. ಆಗಸ್ಟ್ 15,2025 ರಿಂದ ಸಿಎನ್‌ಜಿ ಆಟೋರಿಕ್ಷಾಗಳು ಸಹ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ.