ಹುಕ್ಕೇರಿ ತಾಲೂಕಿನ ಇಂಗಳಿಯಲ್ಲಿ ಗೋಸಾಗಾಟ ತಡೆದ ಐವರು ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿದೆ. ಸಾರ್ವಜನಿಕರು ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶ್ರೀರಾಮ ಸೇನೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಳಗಾವಿ, ಜೂನ್ 29: ಶ್ರೀರಾಮ ಸೇನೆ (Sri Ram Sene) ಕಾರ್ಯಕರ್ತರನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ (Hukkeri) ತಾಲೂಕಿನ ಇಂಗಳಿಯಲ್ಲಿ ನಡೆದಿದೆ. ಗೋವುಗಳ ಸಾಗಾಟ ತಡೆದ ಐವರು ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿದೆ. ಆರೋಪಿಗಳನ್ನು ಬಂಧಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಶ್ರೀರಾಮ ಸೇನೆ ಸಂಘಟನೆ ಎಚ್ಚರಿಕೆ ನೀಡಿದೆ. ಯಮಕನಮರಡಿ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.
ಇಂಗಳಿಯಲ್ಲಿ ನಡೆದಿದ್ದೇನು?
ಐವರು ಶ್ರೀರಾಮ ಸೇನೆ ಕಾರ್ಯಕರ್ತರು ಎರಡು ದಿನಗಳ ಹಿಂದೆ ವಾಹನದಲ್ಲಿ ಸಾಗಿಸುತ್ತಿದ್ದ ಗೋವುಗಳನ್ನು ತಡೆದಿದ್ದಾರೆ. ಗೋವುಗಳ ತಡೆದದಕ್ಕಾಗಿ ತಂದವೊಂದು ಮಾರಣಾಂತಿಕ ಹಲ್ಲೆ ನಡೆಸಿದೆ. ಇಂಗಳಿ ಗ್ರಾಮದ ಯುವಕರ ಗುಂಪೊಂದು, ಶ್ರೀರಾಮ ಸೇನೆ ಸಂಘಟನೆಯ ಐದು ಜನ ಕಾರ್ಯಕರ್ತರನ್ನು ತೆಂಗಿನ ಮರಕ್ಕೆ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ಮಾಡಿದೆ.
ಗ್ರಾಮದ 20ಕ್ಕೂ ಅಧಿಕ ಯುವಕರ ಗುಂಪು ಹಿಂದೂ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿಹಾಕಿ ಕಟ್ಟಿಗೆ ಮತ್ತು ಕೈಯಿಂದ ಹಲ್ಲೆ ಮಾಡಿದೆ. ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವುದನ್ನು ಅದೇ ಗ್ರಾಮದ ಯುವಕನೋರ್ವ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ. ಸದ್ಯ ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗುತ್ತಿದೆ.
ಗೋವುಗಳನ್ನು ಇಂಗಳಿ ಗ್ರಾಮದ ಗೋ ಶಾಲೆಗೆ ರವಾನಿಸಿದ್ದರು. ಶನಿವಾರ ಮತ್ತೆ ಗೋವುಗಳನ್ನು ತೆಗೆದುಕೊಂಡು ಹೋಗುತ್ತಿರುವ ವಿಚಾರ ಕಾರ್ಯಕರ್ತರಿಗೆ ಗೊತ್ತಾಗಿದೆ. ತಕ್ಷಣವೇ ಅದನ್ನು ತಡೆಯಲು ಗ್ರಾಮಕ್ಕೆ ಬಂದು ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆ ಮಾಡಿದ್ದೇ ತಡ ಗೋವು ಸಾಗಾಟ ಮಾಡುವ ಗುಂಪು, ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದೆ
ಈ ಘಟನೆಯನ್ನು ಶ್ರೀರಾಮ ಸೇನೆ ಸಂಘಟನೆ ಬಲವಾಗಿ ಖಂಡಿಸಿದೆ. ಗೋವುಗಳ ರಕ್ಷಣೆ ಮಾಡಲು ಹೋದವರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಮರಕ್ಕೆ ಕಟ್ಟಿ ನೀರು ಕುಡಿಸಿ ಹೊಡೆದಿದ್ದಾರೆ. ಅತ್ಯಾಚಾರ ಮಾಡಿದ್ದೀರಿ ಅಂತ ಹೇಳಿ ಹಲ್ಲೆ ಮಾಡಿದ್ದಾರೆ. ಮತ್ತೆ ಕೆಲವರು ಪೊಲೀಸ್ ಠಾಣೆಯಲ್ಲೇ ಕಾರ್ಯಕರ್ತರಿಗೆ ಧಮ್ಕಿ ಹಾಕುತ್ತಿದ್ದಾರೆ. ತಕ್ಷಣವೇ ಪೊಲೀಸರು ಆರೋಪಿಗಳನ್ನು ಬಂಧಿಸಬೇಕು. ಇಲ್ಲವಾದರೆ ಬೆಳಗಾವಿಯಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ಕೊಟ್ಟಿದೆ.
ವಿಜಯೇಂದ್ರ ಖಂಡನೆ, ಹೋರಾಟದ ಎಚ್ಚರಿಕೆ
ಘಟನೆಯನ್ನು ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಖಂಡಿಸಿದ್ದಾರೆ. ಆರೋಪಿಗಳನ್ನು ಕೂಡಲೇ ಬಂಧಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಹುಕ್ಕೇರಿ ತಾಲ್ಲೂಕಿನ ಇಂಗಳಿ ಗ್ರಾಮದಲ್ಲಿ ಗೋ ಸಂರಕ್ಷಕರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆದಿರುವ ಘಟನೆ ಅತ್ಯಂತ ಖಂಡನೀಯ, ಹಾಗೂ ಕಳವಳಕಾರಿಯಾಗಿದೆ. ನಾವು ಯಾವ ನೆಲದಲ್ಲಿ ವಾಸಿಸುತ್ತಿದ್ದೇವೆ ಎಂಬ ಆತಂಕ ಸಂಸ್ಕೃತಿ ಕುರಿತ ಕಾಳಜಿಯುಳ್ಳವರನ್ನು ಕಾಡುತ್ತಿದೆ ಎಂದು ಅವರು ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ಎಸ್ಪಿ ಸ್ಪಷ್ಟನೆ
ಘಟನೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ಸ್ಪಷ್ಟನೆ ನೀಡಿದ್ದು, ಘಟನೆಯಾದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಯಾವುದೇ ಹಲ್ಲೆಯಾಗಿಲ್ಲ ಎಂದು ಗೋ ರಕ್ಷಕರು ಬರೆದು ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.