
ಸ್ಥಳ ಬೆಂಗಳೂರು, ಮಧ್ಯರಾತ್ರಿ 2 ಗಂಟೆ! ಕಳ್ಳರ ಗ್ಯಾಂಗ್ ಒಂದು Suzuki Hayabusa ಬೈಕ್ಗಳನ್ನು ತುಂಬಿದ್ದ ಟ್ರಕ್ ಒಂದನ್ನ ಅಪಹರಿಸಿತ್ತು! ಟ್ರಕ್ನಲ್ಲಿ ಸೂಪರ್ ಬೈಕ್ಗಳು ಇದ್ದಿರೋದ್ರಿಂದ ಜಾಕ್ಪಾಟ್ ಸಿಕ್ಕಿದೆ ಅನ್ಕೊಂಡಿದ್ದರು ಕಳ್ಳರು. ಆದರೆ, ಕಳ್ಳರ ಅದೃಷ್ಟ ಬದಲಾಗರಲಿಲ್ಲ. ಕೊನೆಯಲ್ಲಿ ರೋಚಕ ಕಾರ್ಯಾಚರಣೆಯ ಸುಳಿಗೆ ಸಿಲುಕಿ ಬೈಕ್ನ ಕೆಲವು ಭಾಗಗಳು, ಚಾಲಕನ ಫೋನ್, ಹಣವನ್ನು ತೆಗೆದುಕೊಂಡು ಹೋಗುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ.
ಅಸಲಿಗೆ ಆಗಿದ್ದೇನು..?
ಹೆಸರು ನಂದಾಲಾಲ್. ವಯಸ್ಸು ಸುಮಾರು 45. ಇವರು ಮೂಲತಃ ರಾಜಸ್ಥಾನದ ದುಂಗರ್ಪುರ. ಟ್ರಕ್ ಡ್ರೈವರ್ ಆಗಿದ್ದ ಇವರು, ಸುಜುಕಿ ಹಯಾಬುಸಾ ಬೈಕ್ಗಳನ್ನು ಹರಿಯಾಣದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದರು. ಬೆಂಗಳೂರಿನ ಎರಡು ಡೀಲರ್ಗಳಿಗೆ ಇವರು ಬೈಕ್ಗಳನ್ನು ತಲುಪಿಸಬೇಕಾಗಿತ್ತು. ಬನಶಂಕರಿಯಲ್ಲಿರುವ ಆ್ಯಪಲ್ ಆಟೋ ಏಜೆನ್ಸಿ (Suzuki Hayabusa) ಮತ್ತು ಬೀದರಹಳ್ಳಿಯಲ್ಲಿರುವ ಆರ್ಯನ್ ಆಟೋ ಏಜಿನ್ಸಿ (Aryan Auto Agency)ಗೆ ಬೈಕ್ಗಳನ್ನು ಡೆಲಿವರಿ ಮಾಡಬೇಕಾಗಿತ್ತು.
ನಂದಾಲಾಲ್ ಜೂನ್ 22 ರಂದು ಅವರು ಬನಶಂಕರಿಯಲ್ಲಿರುವ ಡೀಲರ್ಸ್ಗೆ ಬೈಕ್ಗಳನ್ನು ಡೆಲಿವರಿ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಬಿದಹಳ್ಳಿಯಲ್ಲಿರುವ ಶೋರೂಮ್ಗೆ ಬೈಕ್ಗೆ ತಲುಪಿಸುವಾಗ ಅವರಿಗೆ ದಾರಿ ತಪ್ಪುತ್ತದೆ. ವಿರ್ಗೊನಗರದ ಇಸ್ಟ್ ಪಾಯಿಂಟ್ ಆಸ್ಪತ್ರೆ ಬಳಿ ದಾರಿ ತಪ್ಪಿಸಿಕೊಳ್ತಾರೆ. ಆಗ ಸುಮಾರು ಮಧ್ಯರಾತ್ರಿ 2 ಗಂಟೆ ಆಗಿರುತ್ತದೆ. ರಸ್ತೆಯಲ್ಲೇ ಟ್ರಕ್ನ ಪಾರ್ಕ್ ಮಾಡಿ ಆಸ್ಪತ್ರೆಗೆ ಹೋಗಿ ದಾರಿ ಕೇಳಿಕೊಂಡು ಬರಲು ಮುಂದಾಗುತ್ತಾರೆ. ಈ ವೇಳೆ ಡ್ರೈವರ್ ತಮ್ಮ ಮೊಬೈಲ್ ಮತ್ತು ಪರ್ಸ್ ಅನ್ನು ಟ್ರಕ್ನಲ್ಲಿಯೇ ಬಿಟ್ಟು ಹೋಗಿದ್ದಾರೆ.
ಅಲ್ಲಿಗೆ ಎಂಟ್ರಿಯಾಗಿದ್ದ ಕಳ್ಳರು, ಏಕಾಏಕಿ ಟ್ರಕ್ ಏರಿದ್ದಾರೆ. ಡ್ರೈವ್ ಮಾಡಿಕೊಂಡು ಪರಾರಿ ಆಗಿದ್ದಾರೆ. ರೂಟ್ ಕೇಳಿಕೊಂಡು ಬಂದ ಡ್ರೈವರ್ ನಂದಾಲಾಲ್ಗೆ ಆಘಾತ ಆಗಿದೆ. ಮೊಬೈಲ್ ಮತ್ತು ಪರ್ಸ್ ಎರಡೂ ಲಾರಿಯಲ್ಲಿ ಇದ್ದಿದ್ದರಿಂದ ಜನರ ಸಹಾಯ ಕೇಳಲು ತೊಂದರೆಯಾಗಿದೆ. ರಾತ್ರಿ ಅಲ್ಲೇ ಕಳೆದ ಆತ, ಮಾರನೇಯ ದಿನ ತಾವು ಹೋಗಬೇಕಿದ್ದ ಶೋ ರೂಮ್ಗೆ ನಡೆದುಕೊಂಡು ಹೋಗ್ತಾರೆ. ಅಲ್ಲಿನ ಉದ್ಯೋಗಿ ಜಗದೀಶ್ ಅನ್ನೊರಿಗೆ ನಡೆದ ಘಟನೆ ಬಗ್ಗೆ ತಿಳಿಸುತ್ತಾರೆ. ಅವರಿಂದ ಮೊಬೈಲ್ ಪಡೆದು ತಮ್ಮ ಟ್ರಕ್ ಓನರ್ಗೆ ಮಾಹಿತಿ ತಿಳಿಸಿದ್ದಾರೆ. ಪೊಲೀಸ್ ದೂರು ನೀಡಿದ ಮೇಲೆ ಟ್ರಕ್ನಲ್ಲಿದ್ದ ಜಿಪಿಎಸ್ ಪಡೆದು ಲಾರಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಲಾರಿಯು ಹೊಸಕೋಟೆಯ ಗುಂಡೂರು ಗ್ರಾಮದ ಬಳಿ ಪತ್ತೆಯಾಗಿದೆ. ನಂದಾ ಮತ್ತು ಜಗದೀಶ್ ಸ್ಥಳಕ್ಕೆ ದೌಡಾಯಿಸಿದ್ದರು. ಆಟದ ಮೈದಾನದಲ್ಲಿ ಲಾರಿ ನಿಂತಿತ್ತು. ಲಾರಿಯಲ್ಲಿದ್ದ ಒಂದು ಬೈಕ್ ಅನ್ನು ತೆಗೆಯಲು ಯತ್ನಿಸಿರೋದು ಗೊತ್ತಾಗಿದೆ. ಆದರೆ ಅದನ್ನು ಟ್ರಕ್ನಿಂದ ತೆಗೆಯಲು ಸಾಧ್ಯವಾಗಲಿಲ್ಲ. ಅಲ್ಲಿದ್ದ ಸಣ್ಣಪುಟ್ಟ ವಸ್ತುಗಳನ್ನು ಕದ್ದು ಪರಾರಿ ಆಗಿದ್ದಾರೆ. ಸೈಲೆನ್ಸರ್, ಬ್ಯಾಟರಿಗಳು, ಕೀ ಸೆಟ್ ಹಾಗೂ ಡ್ರೈವರ್ ನಂದಾಲಾಲ್ನ ಮೊಬೈಲ್ ಹಾಗೂ ಪರ್ಸ್ನಲ್ಲಿದ್ದ ಮೂರು ಸಾವಿರ ರೂಪಾಯಿ ಹಣವನ್ನು ಕದ್ದುಕೊಂಡು ಪರಾರಿಯಾಗಿದ್ದರು.
ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಬಿಎನ್ಎಸ್ 303 ಅಡಿಯಲ್ಲಿ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಗುಂಡೂರಿಗೆ ತಲುಪುವ ಮಾರ್ಗದಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡ್ತಿದ್ದಾರೆ. ಬೈಕ್ಗಳನ್ನು ತುಂಬಿದ್ದ ಟ್ರಕ್ ಅಪಹರಿಸಿದ್ದ ಕಳ್ಳರಿಗಾಗಿ ಹುಡುಕಾಟ ನಡೆಸ್ತಿದ್ದೇವೆ. ಒಂದು ಬೈಕ್ನ ಮೌಲ್ಯ ಸುಮಾರು 15 ಲಕ್ಷ ಅನ್ನೋದು ಗೊತ್ತಾಗಿದೆ. ಸದ್ಯದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.