ಇತ್ತೀಚೆಗೆ ಸೈಬರ್ ವಂಚನೆಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ.
ಸುಳ್ಯ (ದಕ್ಷಿಣ ಕನ್ನಡ): ಇತ್ತೀಚೆಗೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಂಗಳೂರು ನಗರ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಹಣ ಹೂಡಿಕೆ ವಂಚನೆ ಮತ್ತು ಇತರ ಸೈಬರ್ ವಂಚನೆಗಳ ಬಲೆಗೆ ಬೀಳಬೇಡಿ ಎಂದು ತಿಳಿಸಿದ್ದಾರೆ.
ಹೂಡಿಕೆ ವಂಚನೆ ಎಂದರೇನು?: ಸೈಬರ್ ಅಪರಾಧಿಗಳು ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ ಪಡೆಯುವ ಭರವಸೆ ನೀಡಿ, ನಕಲಿ ಹೂಡಿಕೆ ಯೋಜನೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವಂತೆ ಮನವೊಲಿಸುತ್ತಾರೆ. ನೀವು ಒಮ್ಮೆ ಹೂಡಿಕೆ ಮಾಡಿದರೆ, ನಿಮ್ಮ ಖಾತೆಯಲ್ಲಿರುವ ಎಲ್ಲಾ ಹಣವನ್ನು ಸೈಬರ್ ವಂಚಕರು ಕ್ಷಣಮಾತ್ರದಲ್ಲಿ ಕಬಳಿಸುತ್ತಾರೆ. ಪ್ರಸ್ತುತ ಇದನ್ನು ವಂಚಕರು ವೃತ್ತಿಪರವಾಗಿ ಮಾಡಿಕೊಂಡಿದ್ದಾರೆ.
ವಂಚನೆಯ ದಾರಿಗಳು: ನಕಲಿ ವೆಬ್‌ಸೈಟ್‌ಗಳ ಮೂಲಕ, ವಾಟ್ಸ್ ಆ್ಯಪ್, ಟೆಲಿಗ್ರಾಮ್ ಗ್ರೂಪ್ಗಳ ಮೂಲಕ ಜನರನ್ನು ಆಕರ್ಷಿಸಲಾಗುತ್ತದೆ. ಕೆಲವು ನಕಲಿ ಅಪ್ಲಿಕೇಶನ್‌ಗಳು ಹಾಗೂ ವೆಬ್‌ಸೈಟ್‌ಗಳ ಬಗ್ಗೆ ಸೋಸಿಯಲ್ ಮೀಡಿಯಾ ಪ್ರಭಾವಿಗಳು ಹಾಗೂ ಸೆಲೆಬ್ರಿಟಿಗಳ ಮೂಲಕ ಸಾಮಾಜಿಕ ಮಾಧ್ಯಮ ಜಾಹೀರಾತುಗಳನ್ನು ನೀಡಿ ವಂಚನೆ ನಡೆಯುತ್ತಿದೆ. ಇಂತಹವುಗಳ ಬಗ್ಗೆ ನಂಬಬೇಡಿ ಎಂದು ಪೊಲೀಸರು ಎಚ್ಚರಿಸಿದ್ದಾರೆ.
ವಂಚಕರ ಮನವೊಲಿಕೆ ದಾರಿಗಳು: ಹೆಚ್ಚಿನ ಆದಾಯ ಬರುವ ಭರವಸೆ, ಹೂಡಿಕೆ ಮಾಡಲು ಒತ್ತಡ ಹೇರುವುದು, ಡಬಲ್/ಟ್ರಿಪಲ್ ರಿಟರ್ನ್ ಭರವಸೆ ನೀಡುವುದು, UPI/ಕ್ರಿಪ್ಟೋ ಪಾವತಿ ಬೇಡಿಕೆಗಳು, ತೆರಿಗೆ ರಿಯಾಯಿತಿ ಇದೆ ಎಂದು ವಂಚನೆ ಮಾಡಲಾಗುತ್ತದೆ. ನಕಲಿ ಲಾಭ ತೋರಿಸುವ ನಕಲಿ ಸ್ಕ್ರೀನ್‌ಶಾಟ್‌ಗಳು ಮಾಡಿ ಪ್ರಚಾರ ಮಾಡಲಾಗುತ್ತದೆ. ಕಾನೂನಾತ್ಮಕವಾಗಿ ನೋಂದಾಯಿಸದ ಕಂಪನಿಗಳು ಅಥವಾ ಏಜೆಂಟ್‌ಗಳು ಇವುಗಳ ಹಿಂದೆ ಇರುತ್ತಾರೆ. ವಂಚಕರ ಈ ಸುಳ್ಳು ಭರವಸೆಗಳ ಬಗ್ಗೆ ಜಾಗರೂಕರಾಗಿರಿ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಇತ್ತೀಚಿನ ವಂಚನೆ ಪ್ರಕರಣಗಳು:
ಸುರತ್ಕಲ್‌ನಲ್ಲಿ ವಾಟ್ಸ್ ಆ್ಯಪ್ ಕ್ರಿಪ್ಟೋ ಗ್ರೂಪ್ ಮೂಲಕ ರೂ. 1.57 ಕೋಟಿ ವಂಚನೆ
ಕೆಪಿಟಿ ಬಲಿ ನಕಲಿ ಷೇರು ಮಾರುಕಟ್ಟೆ ಗ್ರೂಪ್ ಮೂಲಕ ರೂ. 37.49 ಲಕ್ಷ ವಂಚನೆ
ಪಂಜಿಮೊಗರು ಎಂಬಲ್ಲಿ ಇನ್‌ಸ್ಟಾಗ್ರಾಂ ಮೂಲಕ ರೂ. 27.01 ಲಕ್ಷ ವಂಚನೆ
ಕಂಕನಾಡಿಯಲ್ಲಿ ಫೇಸ್‌ಬುಕ್ ಷೇರು ಮಾರುಕಟ್ಟೆ ಜಾಹೀರಾತಿನ ಮೂಲಕ ರೂ. 30.55 ಲಕ್ಷ ವಂಚನೆ
ಉರ್ವಾದಲ್ಲಿ ಟೆಲಿಗ್ರಾಮ್ ಕ್ರಿಪ್ಟೋ ಸಲಹೆಗಳ ಮೂಲಕ ರೂ. 13.57 ಲಕ್ಷ ವಂಚನೆ
ಈ ಎಲ್ಲಾ ಮಾಹಿತಿಗಳನ್ನು ಒಳಗೊಂಡ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿರುವ ಕರಪತ್ರಗಳ ಮೂಲಕ ಎಚ್ಚರವಾಗಿರಿ, ಸುರಕ್ಷಿತವಾಗಿರಿ, ನಿಮ್ಮ ಸುರಕ್ಷತೆ ನಮ್ಮ ಆದ್ಯತೆ ಎಂದು ಮಂಗಳೂರು ನಗರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.