ಮೆಕ್ಸಿಕೊ: ಮೆಕ್ಸಿಕನ್ (Mexico) ರಾಜ್ಯ ಗುವಾನಾಜುವಾಟೊದ ಇರಪುವಾಟೊ ನಗರದಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಗೆ 12 ಮಂದಿ ಸಾವನ್ನಪ್ಪಿದ್ದಾರೆ.
ಧಾರ್ಮಿಕ ಆಚರಣೆಯೊಂದು ನಡೆಯುತ್ತಿತ್ತು. ಜನರು ಬೀದಿಯಲ್ಲಿ ನೃತ್ಯ ಮಾಡುತ್ತಾ, ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿಯಿಂದ ಭಯಭೀತರಾಗಿ ಜನರು ಓಡಿದ ದೃಶ್ಯಗಳಿರುವ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ
ಇರಾಪುವಾಟೊ ಅಧಿಕಾರಿ ರೊಡಾಲ್ಫೊ ಗೊಮೆಜ್ ಸೆರ್ವಾಂಟೆಸ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಲಿಯಾದವರ ಸಂಖ್ಯೆ 12 ಕ್ಕೆ ಏರಿದೆ. ಸುಮಾರು 20 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ದಾಳಿಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಕಳೆದ ತಿಂಗಳು, ಗ್ವಾನಾಜುವಾಟೊದ ಸ್ಯಾನ್ ಬಾರ್ಟೊಲೊ ಡಿ ಬೆರಿಯೊಸ್‌ನಲ್ಲಿ ಕ್ಯಾಥೋಲಿಕ್ ಚರ್ಚ್‌ನಲ್ಲಿ ಪಾರ್ಟಿ ಆಯೋಜಿಸಿದ್ದಾಗಲೂ ಗುಂಡಿನ ದಾಳಿ ನಡೆದಿತ್ತು. ಆಗ 7 ಮಂದಿ ಮೃತಪಟ್ಟಿದ್ದರು.
ವರ್ಷದ ಮೊದಲ ಐದು ತಿಂಗಳುಗಳಲ್ಲಿ ರಾಜ್ಯದಲ್ಲಿ 1,435 ನರಹತ್ಯೆಗಳು ನಡೆದಿವೆ. ಇದು ಇತರ ರಾಜ್ಯಕ್ಕಿಂತ ಎರಡು ಪಟ್ಟು ಹೆಚ್ಚು ಎಂದು ಅಂಕಿಅಂಶಗಳಿಂದ ತಿಳಿದುಬಂದಿದೆ.