Ashraf ಕಮ್ಮಾಜೆ Updated : Jun 23 2025, 10:49 PM
ಇಸ್ರೇಲ್ ಜೊತೆಗಿನ ಯುದ್ಧದಲ್ಲಿ ಅಮೆರಿಕ ಭಾಗಿಯಾಗಿರುವುದಕ್ಕೆ ಪ್ರತೀಕಾರವಾಗಿ ಇರಾನ್, ಕತಾರ್ ಮತ್ತು ಇರಾಕ್‌ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ದೋಹಾದಲ್ಲಿ ಸ್ಫೋಟದ ಶಬ್ದಗಳು ಕೇಳಿಬಂದಿವೆ. ಅಮೆರಿಕ ತನ್ನ ನೆಲೆಗಳಿಂದ ವಿಮಾನಗಳನ್ನು ತೆಗೆದುಹಾಕಿದೆ.
ನವದೆಹಲಿ (ಜೂ.23): ಇಸ್ರೇಲ್ ಜೊತೆಗಿನ ಯುದ್ಧದಲ್ಲಿ ಅಮೆರಿಕ ಭಾಗಿಯಾಗಿದ್ದು ಮಾತ್ರವಲ್ಲದೆ, ತನ್ನ ಪರಮಾಣು ಕೇಂದ್ರಗಳ ಮೇಲೆ ದಾಳಿ ಮಾಡಿದ್ದರಿಂದ ಸಿಟ್ಟಾಗಿರುವ ಇರಾನ್, ಅಮೆರಿಕದ ವಿರುದ್ಧವೂ ಮುಗಿಬಿದ್ದಿದೆ. ಅಮೆರಿಕದ ದಾಳಿಗೆ ಪ್ರತೀಕಾರವಾಗಿ ಇರಾನ್ ಕತಾರ್‌ನಲ್ಲಿರುವ ನೆಲೆಗಳ ಮೇಲೆ 6 ಕ್ಷಿಪಣಿಗಳನ್ನು ಹಾರಿಸಿದೆ ಎಂದು ಅಮೆರಿಕದ ಮಾಧ್ಯಮಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಕತಾರ್ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಅತಿದೊಡ್ಡ ನೆಲೆಯಾದ ಅಲ್ ಉದೈದ್ ವಾಯುನೆಲೆಯನ್ನು ಹೊಂದಿದೆ, ಇದು ಅಮೆರಿಕದ ಕೇಂದ್ರ ಕಮಾಂಡ್‌ನ ಮುಂಚೂಣಿ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಸುಮಾರು 10,000 ಸೈನಿಕರು ಈ ಸೇನಾ ನೆಲೆಯಲ್ಲಿ ಇದ್ದಾರೆ. ಇರಾನ್ ಈ ನೆಲೆಯನ್ನು ಗುರಿಯಾಗಿ ಗುರುತಿಸಿದೆ ಎಂದು ಪಾಶ್ಚಿಮಾತ್ಯ ರಾಜತಾಂತ್ರಿಕರೊಬ್ಬರು ರಾಯಿಟರ್ಸ್‌ಗೆ ತಿಳಿಸಿದ್ದಾರೆ.
ಪಶ್ಚಿಮದಲ್ಲಿ ಈಜಿಪ್ಟ್‌ನಿಂದ ಪೂರ್ವದಲ್ಲಿ ಕಝಾಕಿಸ್ತಾನ್‌ವರೆಗೆ ವಿಸ್ತರಿಸಿರುವ ವಿಶಾಲವಾದ ಭೂಪ್ರದೇಶದಲ್ಲಿ ಅಮೆರಿಕದ ಮಿಲಿಟರಿ ಕಾರ್ಯಾಚರಣೆಗಳನ್ನು ಅದು ನಿರ್ದೇಶಿಸುತ್ತದೆ. ಸಂಭಾವ್ಯ ಇರಾನಿನ ದಾಳಿಗಳಿಗೆ ಇದು ಗುರಿಯಾಗಬಹುದಾದ್ದರಿಂದ ಪೆಂಟಗನ್ ಈ ವಾಯುನೆಲೆಯಿಂದ ವಿಮಾನಗಳನ್ನು ತೆಗೆದುಹಾಕಿದೆ ಎಂದು ರಾಯಿಟರ್ಸ್ ಕಳೆದ ವಾರ ವರದಿ ಮಾಡಿದೆ. ಇರಾನ್‌ನ ಕ್ಷಿಪಣಿ ದಾಳಿಯ ಬೆನ್ನಲ್ಲಿಯೇ ಕತಾರ್ ರಾಜಧಾನಿ ದೋಹಾದಲ್ಲಿ ಭಾರೀ ಪ್ರಮಾಣದ ಸ್ಫೋಟದ ಶಬ್ದಗಳು ಕೇಳಿ ಬಂದಿವೆ. ದೋಹಾದಲ್ಲಿ ಹಲವಾರು ಕಡೆಗಳಲ್ಲಿ ಸ್ಫೋಟಗಳ ಶಬ್ದಗಳು ಕೇಳಿಬಂದವು ಎಂದು ರಾಯಿಟರ್ಸ್‌ಗೆ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಕತಾರ್‌ನಲ್ಲಿರುವ ಅಲ್ ಉದೈದ್ ವಾಯುನೆಲೆಗೆ ಇರುವ ಸಂಭಾವ್ಯ ಬೆದರಿಕೆಗಳ ಬಗ್ಗೆ ಶ್ವೇತಭವನ ಮತ್ತು ಅಮೆರಿಕದ ರಕ್ಷಣಾ ಇಲಾಖೆಗೆ ತಿಳಿದಿದೆ ಮತ್ತು ಅವುಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನೊಂದೆಡೆ ಇರಾಕ್ ಮತ್ತು ಕತಾರ್‌ನಲ್ಲಿರುವ ಅಮೆರಿಕದ ನೆಲೆಗಳ ವಿರುದ್ಧ ‘ವಿಜಯದ ಘೋಷಣೆ’ ಎಂಬ ಕ್ಷಿಪಣಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಇರಾನ್‌ನ ತಸ್ನಿಮ್ ಸುದ್ದಿ ಸಂಸ್ಥೆ ತಿಳಿಸಿದೆ. ಅಮೆರಿಕದ ಸೇನಾ ನೆಲೆ ಅಲ್ ಉದೈದ್ ಮೇಲಿನ ಕ್ಷಿಪಣಿ ದಾಳಿಯನ್ನು ಕತಾರ್ ವಾಯು ರಕ್ಷಣಾ ಪಡೆಗಳು ತಡೆದಿವೆ ಎಂದು ರಕ್ಷಣಾ ಸಚಿವರನ್ನು ಉಲ್ಲೇಖಿಸಿ ಅಲ್ ಜಜೀರಾ ಟಿವಿ ವರದಿ ಮಾಡಿದೆ.