ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಂಚುವವರಿಗೆ ಕರ್ನಾಟಕ ಸರ್ಕಾರ 7 ವರ್ಷ ಜೈಲು ಶಿಕ್ಷೆ ವಿಧಿಸುವ ಹೊಸ ಕಾನೂನು ಜಾರಿಗೆ ತರಲು ಮುಂದಾಗಿದೆ. ಈ ಕಾನೂನು ಡಿಜಿಟಲ್ ಮಾಧ್ಯಮಗಳಿಗೂ ಅನ್ವಯಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ (Fake News ) ಹಾಗೂ ತಪ್ಪು ಮಾಹಿತಿ ಬೇಕಾಬಿಟ್ಟಿ ಹಂಚುವಿಕೆ ಸಾಮಾನ್ಯವಾಗುತ್ತಿದೆ. ಇಂತಹ ಅಪಾಯಕಾರಿಯಾದ ಬೆಳವಣಿಗೆಯನ್ನು ನಿಯಂತ್ರಿಸಲು ಕರ್ನಾಟಕ ಸರ್ಕಾರ ಗಂಭೀರ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಸೋಷಿಯಲ್ ಮೀಡಿಯಾದಲ್ಲಿ ತಪ್ಪು ಮಾಹಿತಿ ಹಂಚಿದರೆ, ಗರಿಷ್ಠ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ₹10 ಲಕ್ಷದವರೆಗೆ ದಂಡ ವಿಧಿಸುವ ಅವಕಾಶವಿರುವ ಹೊಸ ಕಾನೂನು ಜಾರಿಗೆ ಬರಲಿದೆ. ‘ಕರ್ನಾಟಕ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿ (ನಿಷೇಧ) ಮಸೂದೆ’ ಈಗಾಗಲೇ ಸಿದ್ಧವಾಗಿದ್ದು, ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಲಾಗಿದೆ. ಸಾರ್ವಜನಿಕ ಶಾಂತಿ, ಭದ್ರತೆ ಅಥವಾ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡುವ ಯಾವುದೇ ಪೋಸ್ಟ್ ಅಥವಾ ಮಾಹಿತಿ ಹಂಚಿದರೆ, ಸಂಬಂಧಿಸಿದ ವ್ಯಕ್ತಿಗೆ ಕಠಿಣ ಶಿಕ್ಷೆ ವಿಧಿಸಬಹುದು ಎಂಬುದು ಈ ಮಸೂದೆಯ ಮುಖ್ಯ ಅಂಶವಾಗಿದೆ.
ಈ ಹೊಸ ಕಾನೂನಿನಡಿಯಲ್ಲಿ, ಕರ್ನಾಟಕ ಸರ್ಕಾರ ವಿಶೇಷ ನಿಯಂತ್ರಣ ಮಂಡಳಿಯನ್ನು ರಚಿಸಲು ನಿರ್ಧರಿಸಿದೆ. ಇದರ ಅಧ್ಯಕ್ಷತೆಯನ್ನು ಒಬ್ಬ ಸಚಿವರು ವಹಿಸಲಿದ್ದು, ಒಟ್ಟು ಆರು ಮಂದಿ ಸದಸ್ಯರನ್ನೊಳಗೊಂಡ ಸಮಿತಿ ಕಾರ್ಯನಿರ್ವಹಿಸಲಿದೆ. ಈ ಕಾನೂನು ಸಾಮಾಜಿಕ ಮಾಧ್ಯಮಗಳಿಗೆ ಮಾತ್ರವಲ್ಲದೆ, ಎಲ್ಲಾ ಡಿಜಿಟಲ್ ಮಾಧ್ಯಮಗಳಿಗೂ ಅನ್ವಯವಾಗಲಿದೆ. ತಪ್ಪು ಮಾಹಿತಿ ಹಂಚುವವರನ್ನು ಗುರುತಿಸಲು ಹಾಗೂ ತನಿಖೆ ನಡೆಸಲು ಸರ್ಕಾರ ವಿಶೇಷ ಅಧಿಕಾರಿಗಳನ್ನು ನೇಮಕ ಮಾಡಲು ಯೋಜನೆ ರೂಪಿಸಿದೆ. ಇದರಿಂದ ಜನರ ಭದ್ರತೆ ಮತ್ತು ಮಾಹಿತಿ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ನೆರವಾಗುತ್ತದೆ.
ಸಾಮಾನ್ಯ ರೀತಿಯ ತಪ್ಪು ಮಾಹಿತಿಗೆ ಕನಿಷ್ಠ 2 ರಿಂದ ಗರಿಷ್ಠ 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಜೊತೆಗೆ, ಪ್ರತಿದಿನ ₹25,000 ವರೆಗಿನ ದಂಡವನ್ನು ವಿಧಿಸುವ ಯೋಜನೆ ಈ ಮಸೂದೆಯಲ್ಲಿ ಒಳಗೊಂಡಿದೆ. ಈ ಪ್ರಕರಣಗಳನ್ನು ತ್ವರಿತವಾಗಿ ನಿಭಾಯಿಸಲು ಸರ್ಕಾರ ವಿಶೇಷ ನ್ಯಾಯಾಲಯಗಳ ಸ್ಥಾಪನೆಯತ್ತ ಮುಂದಾಗಿದೆ.

ಈ ಮಸೂದೆ cognisable (ವಾರಂಟ್ ಇಲ್ಲದ ಬಂಧನ) ಮತ್ತು non-bailable (ಜಾಮೀನು ರಹಿತ ) ಎಂದು ಗುರುತಿಸಲಾಗಿದ್ದು, ತಪ್ಪಿತಸ್ಥರಿಗೆ ಸುಲಭವಾಗಿ ಜಾಮೀನು ದೊರೆಯುವ ಸಾಧ್ಯತೆ ಇರುವುದಿಲ್ಲ. ಕಂಪನಿಗಳು ಅಥವಾ ಸಂಸ್ಥೆಗಳ ಮೂಲಕ ಕೂಡ ಸುಳ್ಳು ಮಾಹಿತಿ ಹಬ್ಬಿಸಿದರೆ, ಅವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ. ಈ ನೂತನ ಕಾನೂನು ಮೂಲಕ, ಸಮಾಜದಲ್ಲಿ ಖಚಿತ ಮತ್ತು ನಿಖರವಾದ ಮಾಹಿತಿ ಹಂಚಿಕೆಗೆ ಪ್ರೋತ್ಸಾಹ ಸಿಗಲಿದೆ ಎನ್ನುವ ನಿರೀಕ್ಷೆ ಇದೆ. ಇದರಿಂದ ತಪ್ಪು ಸುದ್ದಿಯಿಂದ ಉಂಟಾಗುವ ಗೊಂದಲಗಳು, ಅಪಪ್ರಚಾರ ಮತ್ತು ಭಯಭೀತಿಯನ್ನು ಕಡಿಮೆ ಮಾಡುವಲ್ಲಿ ಸಹಕಾರ ದೊರೆಯಲಿದೆ.
ಈ ಮಸೂದೆಯ ಪ್ರಕಾರ, ಸಾರ್ವಜನಿಕ ಆರೋಗ್ಯ, ಸುರಕ್ಷತೆ, ಶಾಂತಿ ಅಥವಾ ಚುನಾವಣೆಗಳ ಪಾರದರ್ಶಕತೆಗೆ ಹಾನಿಯುಂಟುಮಾಡುವ ನಕಲಿ ಮಾಹಿತಿ ಅಥವಾ ಸುಳ್ಳು ಸುದ್ದಿಯನ್ನು ಉದ್ದೇಶಪೂರ್ವಕವಾಗಿ ಹಂಚಿದರೆ, ಆರೋಪಿಗೆ ಗರಿಷ್ಠ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹10 ಲಕ್ಷದವರೆಗೆ ದಂಡ ಅಥವಾ ಈ ಎರಡೂ ವಿಧಿಸಬಹುದಾಗಿದೆ. ರಾಜ್ಯದ ಪ್ರಜೆಗಳನ್ನು ಗುರಿಯಾಗಿಸಿಕೊಂಡು ನಕಲಿ ಸುದ್ದಿಯನ್ನು ರಾಜ್ಯದ ಹೊರಗಿನಿಂದ ಹಂಚಿದರೂ ಕೂಡ ಈ ಕಾನೂನು ಅನ್ವಯವಾಗುತ್ತದೆ.