
ಅಹಮದಾಬಾದ್ ಬಳಿ ಏರ್ ಇಂಡಿಯಾ ವಿಮಾನ ಪತನಗೊಂಡ ನಂತರ ಹೆಜ್ಜೆ ಹೆಜ್ಜೆಗೂ ವಿಮಾನ ತಪಾಸಣೆ ಚುರುಕುಗೊಂಡಿದೆ. 270 ಪ್ರಯಾಣಿಕರು ವಿಮಾನ ಪತನದಲ್ಲಿ ಕೊನೆಯುಸಿರೆಳೆದ ಬಳಿಕ ಏರ್ ಇಂಡಿಯಾ 787 ಡ್ರೀಮ್ ಲೈನರ್ಗಳಿಗೆ ಸುರಕ್ಷತೆ ದೃಷ್ಟಿಯಿಂದ ಕಡ್ಡಾಯವಾಗಿ ಪರಿಶೀಲನೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೂನ್ 20ರಂದು ಒಂದೇ ದಿನ ಒಟ್ಟು 9 ಏರ್ ಇಂಡಿಯಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.
100 ಪ್ರಯಾಣಿಕರು ಇರುವ ಏರ್ ಇಂಡಿಯಾ AI-2469 ವಿಮಾನವು ಜೂನ್ 20ರ ಬೆಳಗ್ಗೆ ದೆಹಲಿಯಿಂದ ಹೊರಟು ಮಹಾರಾಷ್ಟ್ರದ ಪುಣೆಗೆ ಬರುತ್ತಿತ್ತು. ಈ ವೇಳೆ ಆಕಾಶದಲ್ಲಿ ವಿಮಾನಕ್ಕೆ ಪಕ್ಷಿ ಒಂದು ಡಿಕ್ಕಿ ಹೊಡೆದಿದೆ. ಪರಿಣಾಮ ಸಣ್ಣ ಮಟ್ಟದಲ್ಲಿ ವಿಮಾನಕ್ಕೆ ಹಾನಿಯಾಗಿದ್ದು ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ವಿಮಾನವೂ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಇದಾದ ಮೇಲೆ ಇಂಜಿನಿಯರಿಂಗ್ ತಂಡವೂ ವಿಮಾನವನ್ನು ತಪಸಾಣೆ ನಡೆಸುತ್ತಿದೆ. ಹೀಗಾಗಿ ವಾಪಸ್ ದೆಹಲಿ ಪ್ರಯಾಣವನ್ನು ರದ್ದು ಮಾಡಲಾಗಿದೆ ಎಂದು ಹೇಳಲಾಗಿದೆ.

ಇನ್ನುಳಿದ 8 ವಿಮಾನಗಳು ವರ್ಧಿತ ನಿರ್ವಹಣೆ ಮತ್ತು ಕಾರ್ಯಾಚರಣೆಯ ಕಾರಣಗಳಿಂದಾಗಿ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಈ ಎಂಟು ವಿಮಾನಗಳಲ್ಲಿ 4 ಅಂತರರಾಷ್ಟ್ರೀಯ ವಿಮಾನಗಳು ಆದ್ರೆ ಇನ್ನುಳಿದ 4 ವಿಮಾನಗಳು ದೇಶೀಯ ವಿಮಾನಗಳು (Domestic Flights) ಆಗಿವೆ. ದೇಶೀಯ ವಿಮಾನಳು ಎಂದರೆ ಪುಣೆಯಿಂದ ದೆಹಲಿಗೆ ತೆರಳುವ AI874 ವಿಮಾನ, ಅಹಮದಾಬಾದ್ನಿಂದ ದೆಹಲಿ AI456 ವಿಮಾನ, ಹೈದರಾಬಾದ್ನಿಂದ ಮುಂಬೈ AI2872 ವಿಮಾನ ಮತ್ತು ಚೆನ್ನೈಯಿಂದ ಮುಂಬೈಗೆ ತೆರಳುವ AI571 ವಿಮಾನದ ಹಾರಾಟವನ್ನು ರದ್ದು ಮಾಡಲಾಗಿದೆ.
ಏರ್ ಇಂಡಿಯಾ ವಿಮಾನಗಳಲ್ಲಿ ತಾಂತ್ರಿಕ ದೋಷಗಳು ಹೆಚ್ಚಾಗಿ ಕಂಡು ಬರುತ್ತಿರುವ ಕಾರಣ ಜೂನ್ 21 ರಿಂದ ಜುಲೈ 15 ರವರೆಗೆ ವಾರಕ್ಕೆ 38 ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ಕಡಿತ ಮಾಡಲಾಗುವುದು. ಇದರ ಜೊತೆಗೆ ಮೂರು ವಿದೇಶಿ ಮಾರ್ಗಗಳಲ್ಲಿ ಸೇವೆಗಳನ್ನು ಸ್ಥಗಿತ ಮಾಡಲಾಗುವುದು ಎಂದು ಏರ್ ಇಂಡಿಯಾ ಈಗಾಗಲೇ ತಿಳಿಸಿದೆ. ಇನ್ನು ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದೆ.