Israel-Iran conflict: ಇಸ್ರೇಲ್-ಇರಾನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಪರವಾಗಿ ಕಣಕ್ಕಿಳಿಯಲು ಅಮೆರಿಕ ಪ್ರವೇಶಿಸಲು ಯೋಚಿಸುತ್ತಿದೆ ಎಂದು ವರದಿಗಳು ಸೂಚಿಸಿವೆ. ಆದರೆ, ಇರಾನ್-ಇಸ್ರೇಲ್ ಯುದ್ಧದಲ್ಲಿ ಅಮೆರಿಕದ ಮಿಲಿಟರಿ ಹಸ್ತಕ್ಷೇಪದ ವಿರುದ್ಧ ರಷ್ಯಾ ಇಂದು ಟ್ರಂಪ್ಗೆ ಎಚ್ಚರಿಕೆ ನೀಡಿದೆ. ಇದರಿಂದ ಗಂಭೀರವಾದ ನೆಗೆಟಿವ್ ಪರಿಣಾಮಗಳನ್ನು ಎದುರಿಸಬೇಕಾದೀತು ರಷ್ಯಾ ಅಮೆರಿಕಕ್ಕೆ ಎಚ್ಚರಿಸಿದೆ ಎಂದು ವರದಿಗಳು ತಿಳಿಸಿವೆ.
ನವದೆಹಲಿ, ಜೂನ್ 19: ಇರಾನ್ (Iran) ವಿರುದ್ಧ ಇಸ್ರೇಲ್ ಜೊತೆಗೆ ಸಂಘರ್ಷಕ್ಕೆ ಪ್ರವೇಶಿಸಲು ಅಮೆರಿಕ ಚಿಂತಿಸುತ್ತಿದೆ ಎಂಬ ಊಹಾಪೋಹಗಳ ನಡುವೆ ರಷ್ಯಾ (Russia) ಖಡಕ್ ಎಚ್ಚರಿಕೆಯೊಂದನ್ನು ನೀಡಿದೆ. ಒಂದುವೇಳೆ ಇರಾನ್ ವಿರುದ್ಧ ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಮಿಲಿಟರಿ ಕ್ರಮ ಕೈಗೊಂಡರೆ ಅದು ಅಪಾಯಕಾರಿ ಹೆಜ್ಜೆಯಾಗಲಿದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಇಂದು ಎಚ್ಚರಿಸಿದೆ. “ಈ ಪರಿಸ್ಥಿತಿಯಲ್ಲಿ ಮಿಲಿಟರಿ ಹಸ್ತಕ್ಷೇಪದ ವಿರುದ್ಧ ನಾವು ವಾಷಿಂಗ್ಟನ್‌ಗೆ ನಿರ್ದಿಷ್ಟವಾಗಿ ಎಚ್ಚರಿಕೆ ನೀಡಲು ಬಯಸುತ್ತೇವೆ. ಇದು ನಿಜವಾಗಿಯೂ ಅನಿರೀಕ್ಷಿತ ನೆಗೆಟಿವ್ ಪರಿಣಾಮಗಳನ್ನು ಹೊಂದಿರುವ ಅತ್ಯಂತ ಅಪಾಯಕಾರಿ ಹೆಜ್ಜೆಯಾಗಲಿದೆ” ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಜಖರೋವಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಬುಶೆಹರ್ ಪರಮಾಣು ಸ್ಥಾವರದಲ್ಲಿ ರಷ್ಯಾದ ತಜ್ಞರು ಕೆಲಸ ಮಾಡುತ್ತಿರುವುದರಿಂದ ಅದರ ಮೇಲಿನ ವೈಮಾನಿಕ ದಾಳಿಗಳನ್ನು ನಿಲ್ಲಿಸುವಂತೆ ಮಾಸ್ಕೋ ಇಸ್ರೇಲ್ ಅನ್ನು ಒತ್ತಾಯಿಸಿದೆ. ಬುಶೆಹರ್ ಇರಾನ್‌ನ ಏಕೈಕ ಕಾರ್ಯಾಚರಣಾ ಪರಮಾಣು ವಿದ್ಯುತ್ ಸ್ಥಾವರವಾಗಿದ್ದು, ಇದು ರಷ್ಯಾದ ಇಂಧನವನ್ನು ಬಳಸುತ್ತದೆ. ಬುಧವಾರ ಯುಎಇ ಜೊತೆಗೆ ರಷ್ಯಾ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವನ್ನು ತಕ್ಷಣವೇ ನಿಲ್ಲಿಸುವಂತೆ ಕರೆ ನೀಡಿತ್ತು. ಟೆಹ್ರಾನ್‌ನ ಪರಮಾಣು ಸಮಸ್ಯೆಗೆ ರಾಜತಾಂತ್ರಿಕ ಮತ್ತು ರಾಜಕೀಯ ಪರಿಹಾರವನ್ನು ಸೂಚಿಸಿತ್ತು. ಆದರೂ ಎರಡೂ ದೇಶಗಳು ಇದಕ್ಕೆ ಒಪ್ಪಿರಲಿಲ್ಲ
ಇರಾನಿನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿವಾದಾತ್ಮಕ ಸಮಸ್ಯೆಗಳನ್ನು ಪರಿಹರಿಸುವ ಹಿತಾಸಕ್ತಿಗಳಲ್ಲಿ ಯುದ್ಧವನ್ನು ಬೇಗನೆ ನಿಲ್ಲಿಸುವ ಮತ್ತು ರಾಜಕೀಯ ಮತ್ತು ರಾಜತಾಂತ್ರಿಕ ಪ್ರಯತ್ನಗಳನ್ನು ತೀವ್ರಗೊಳಿಸುವ ಅಗತ್ಯವನ್ನು ಒತ್ತಿಹೇಳಲಾಯಿತು” ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆ ವೇಳೆ ಹೇಳಿದ್ದರು.
ಒಂದು ದಿನದ ಹಿಂದೆ, ಇರಾನ್ ವಿರುದ್ಧದ ದಾಳಿಗಳಲ್ಲಿ ಇಸ್ರೇಲ್ ಜೊತೆ ಕೈ ಜೋಡಿಸುವು ಬಗ್ಗೆ ಚಿಂತಿಸುತ್ತಿರುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. “ನಾನು ಇಸ್ರೇಲ್ ಜೊತೆ ಕಣಕ್ಕಿಳಿಯಬಹುದು ಅಥವಾ ಇಳಿಯದೆಯೂ ಇರಬಹುದು” ಎಂದು ಅವರು ಹೇಳಿದ್ದರು.