NEET UG 2025 Results Declared: ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಇತರ ಸಂಬಂಧಿತ ವಿವರಗಳನ್ನು ನಮೂದಿಸುವ ಮೂಲಕ https://neet.nta.nic.in/ ಭೇಟಿ ನೀಡಿ ಅಂಕಪಟ್ಟಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಹೈದರಾಬಾದ್: ರಾಷ್ಟ್ರೀಯ ಪರೀಕ್ಷಾ ಮಂಡಳಿ (NTA) ಮೇ 4 ರಂದು ನಡೆದ ದೇಶದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ NEET UG 2025 ರ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. NEET UG 2025ಗೆ ಹಾಜರಾದ 22.09 ಲಕ್ಷ ಅಭ್ಯರ್ಥಿಗಳಲ್ಲಿ 12,36,531 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ಪರೀಕ್ಷಾ ಮಂಡಳಿ ಘೋಷಿಸಿದೆ.
ಉತ್ತರ ಪ್ರದೇಶದ 1.70 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಹತೆ ಪಡೆದಿದ್ದರೆ, ಮಹಾರಾಷ್ಟ್ರದ 1.25 ಲಕ್ಷಕ್ಕೂ ಹೆಚ್ಚು ಹಾಗೂ ರಾಜಸ್ಥಾನದ 1.19 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಹತೆ ಪಡೆಯುವ ಮೂಲಕ ಮೊದಲ ಮೂರು ಸ್ಥಾನಗಳಲ್ಲಿ ಇದ್ದಾರೆ.
ಅಧಿಕೃತ ಜಾಲತಾಣವಾಗಿರುವ https://neet.nta.nic.in/ ಭೇಟಿ ನೀಡಿ ಅಭ್ಯರ್ಥಿಗಳು ಫಲಿತಾಂಶ ವೀಕ್ಷಿಸಬಹುದಾಗಿದೆ. ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಇತರ ಸಂಬಂಧಿತ ವಿವರಗಳನ್ನು ನಮೂದಿಸುವ ಮೂಲಕ ಅಂಕಪಟ್ಟಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಂಕಪಟ್ಟಿಯಲ್ಲಿ ಅಭ್ಯರ್ಥಿಯ ಶೇಕಡಾವಾರು ಅಂಕ, ಅಖಿಲ ಭಾರತ ಶ್ರೇಣಿ (AIR) ಮತ್ತು ವರ್ಗದ ಶ್ರೇಣಿ ಇರುತ್ತದೆ.
ಅರ್ಹತೆ ಪಡೆದವರ ಸಂಖ್ಯೆ ಕಳೆದ ವರ್ಷದ 13.15 ಲಕ್ಷ ಅಭ್ಯರ್ಥಿಗಳಿಗಿಂತ ಕಡಿಮೆಯಾಗಿದೆ. ಆದಾಗ್ಯೂ ಪರೀಕ್ಷೆ ಬರೆದವರ ಸಂಖ್ಯೆಯೂ ಕಳೆದ ವರ್ಷ 23.33 ಲಕ್ಷಕ್ಕೂ ಹೆಚ್ಚಾಗಿತ್ತು ಎಂಬುದು ಗಮನಾರ್ಹ.
ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ ಕಟ್ಆಫ್: ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಶ್ನೆಪತ್ರಿಕೆ ಸಾಮಾನ್ಯಕ್ಕಿಂತ ಕಠಿಣವಾಗಿರುವುದರಿಂದ ಕಟ್ಆಫ್ ಅಂಕಗಳು ಗಮನಾರ್ಹವಾಗಿ ಕುಸಿದಿವೆ.
NEET UG 2025 ರ ಅರ್ಹತಾ ಕಟ್ಆಫ್ ಮಾರ್ಕ್ಸ್ :
- ಸಾಮಾನ್ಯ ಮತ್ತು EWS: 144
- OBC, SC, ಮತ್ತು ST: 113
- ಸಾಮಾನ್ಯ ಮತ್ತು EWS PwD: 127
- OBC, SC, ಮತ್ತು ST PwD: 113
2024ರಲ್ಲಿ ಸಾಮಾನ್ಯ ಮತ್ತು EWS ವಿಭಾಗಗಳಿಗೆ ಕಟ್ಆಫ್ ಅಂಕ 162 ಆಗಿತ್ತು. OBC, SC, ಮತ್ತು ST ಗಳಿಗೆ ಇದು 127 ಆಗಿತ್ತು. 2025 ರಲ್ಲಿ ಆಯಾ ವಿಭಾಗಗಳಲ್ಲಿ 18 ಮತ್ತು 14 ಅಂಕಗಳ ಕುಸಿತವನ್ನು ಈ ಬಾರಿಯ ಫಲಿತಾಂಶ ತೋರಿಸುತ್ತಿದೆ.
ರಾಜಸ್ಥಾನದ ಅಭ್ಯರ್ಥಿ ಟಾಪರ್: ರಾಜಸ್ಥಾನದ ಮಹೇಶ್ ಕುಮಾರ್ ನೀಟ್ ಯುಜಿಯಲ್ಲಿ ಅಗ್ರಸ್ಥಾನ ಪಡೆದಿದ್ದು, ಎಐಆರ್ 1ರಲ್ಲಿ ಸ್ಥಾನ ಪಡೆದಿದ್ದರೆ, ಮಧ್ಯಪ್ರದೇಶದ ಉತ್ಕರ್ಷ್ ಅವಧಿಯಾ ಎರಡನೇ ಸ್ಥಾನ ಪಡೆದಿದ್ದಾರೆ. ಎಐಆರ್ 5 ರಲ್ಲಿ ದೆಹಲಿಯ ಅವಿಕಾ ಅಗರ್ವಾಲ್ ಮಹಿಳಾ ಟಾಪರ್ ಆಗಿದ್ದಾರೆ.
ಟಾಪ್ 10 ಶ್ರೇಯಾಂಕದ ವಿವರ
1. ಮಹೇಶ್ ಕುಮಾರ್
2. ಉತ್ಕರ್ಷ್ ಅವಧಿಯಾ
3. ಕ್ರಿಶಾಂಗ್ ಜೋಶಿ
4. ಮೃಣಾಲ್ ಕಿಶೋರ್ ಝಾ
5. ಅವಿಕಾ ಅಗರ್ವಾಲ್
6. ಜೆನಿಲ್ ವಿನೋದಭಾಯ್ ಭಯಾನಿ
7. ಕೇಶವ್ ಮಿತ್ತಲ್
8. ಝಾ ಭವ್ಯಾ ಚಿರಾಗ್
9. ಹರ್ಷ ಕೆದಾವತ್
10. ಆರವ್ ಅಗರವಾಲ್
ಸರ್ಕಾರಿ ಕಾಲೇಜುಗಳಲ್ಲಿ ಸೀಟು ಪಡೆಯುವುದು ಅಷ್ಟು ಸುಲಭವಲ್ಲ: 720 ಅಂಕಗಳಲ್ಲಿ 144 ಅಂಕಗಳನ್ನು ಗಳಿಸಿದ ಅಭ್ಯರ್ಥಿಯನ್ನು ಈ ವರ್ಷ ಕೌನ್ಸೆಲಿಂಗ್‌ಗೆ ಅರ್ಹರೆಂದು ಪರಿಗಣಿಸಲಾಗುತ್ತದೆ. ಆದಾಗ್ಯೂ ಈ ಅಂಕದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆಯುವುದು ಸುಲಭವಲ್ಲ ಎಂದು ಶಿಕ್ಷಣ ತಜ್ಞ ದೇವ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
2.40 ಲಕ್ಷ ಸೀಟುಗಳು: ಎಂಬಿಬಿಎಸ್, ಡೆಂಟಲ್, ನರ್ಸಿಂಗ್, ಬಿಎಎಂಎಸ್, ಬಿಯುಎಂಎಸ್, ಬಿಎಚ್ಎಂಎಸ್ ಮತ್ತು ಬಿಎಸ್ಎಂಎಸ್ನ 2.40 ಲಕ್ಷ ಸೀಟುಗಳು ಲಭ್ಯವಿದ್ದು, ಈ ಎಲ್ಲಾ ಕೋರ್ಸಿಗೆ ಪ್ರತ್ಯೇಕ ಕೌನ್ಸೆಲಿಂಗ್ ನಡೆಸಲಾಗುವುದು. ಎಂಬಿಬಿಎಸ್ 1.09 ಲಕ್ಷ ಸೀಟುಗಳು ಲಭ್ಯವಿದ್ದು, 56,000 ಸರ್ಕಾರಿ ಕಾಲೇಜಿನಲ್ಲಿ 52,000 ಖಾಸಗಿ ಕಾಲೇಜಿನಲ್ಲಿ ಸೀಟು ಲಭ್ಯವಿದೆ.