
242 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ಬೋಯಿಂಗ್- 787 ಡ್ರೀಮ್‌ಲೈನರ್ ವಿಮಾನ ಗುಜರಾತ್‌ನ ಅಹಮದಾಬಾದ್‌ನಲ್ಲಿ ಪತನಗೊಂಡಿತ್ತು. ವಿಮಾನದಲ್ಲಿದ್ದ ಎಲ್ಲರೂ ಉಸಿರು ಚೆಲ್ಲಿದರೂ ಒಬ್ಬರು ಮಾತ್ರ ಭೀಕರ ವಿಮಾನ ದುರಂತದಿಂದ ಬದುಕಿದ್ದರು. ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇಂಗ್ಲೆಂಡ್‌ನ ಕುಟುಂಬದ ಬದುಕು ಕೊನೆ ಆಗಿದೆ.
ಇಂಗ್ಲೆಂಡ್‌ನ ಸೌತ್ವೆಸ್ಟ್ನಲ್ಲಿರುವ ಗ್ಲೌಸೆಸ್ಟರ್ ನಗರದ ಅಕೀಲ್ ನಾನಾಬಾವಾ ಮತ್ತು ಅವರ ಪತ್ನಿ ಹನ್ನಾ ವೊರಾಜಿ ಹಾಗೂ ಇವರ 4 ವರ್ಷದ ಮಗಳು ಸಾರಾ ಕಣ್ಮುಚ್ಚಿದ್ದಾರೆ. ಬ್ರಿಟನ್ ಪ್ರಜೆಗಳಾಗಿದ್ದ ಇವರಿಗೆ ಮಗಳೇ ದೊಡ್ಡ ಪ್ರಪಂಚವಾಗಿದ್ದಳು. ಈ ದಂಪತಿ ಗ್ಲೌಸೆಸ್ಟರ್ ಹಾಗೂ ಅಹಮದಾಬಾದ್ ಈ ಎರಡು ನಗರದಲ್ಲೂ ಐಸ್‌ಬರ್ಗ್ ಎಂಬ ಹೊರಗುತ್ತಿಗೆ ಸೇವೆಗಳ ವ್ಯಾಪಾರವನ್ನು ನಡೆಸುತ್ತಿದ್ದರು.

ಅಕೀಲ್ ನಾನಾಬಾವಾ ಅವರು ಸ್ಪೋರ್ಟ್ಸ್ ಮತ್ತು ಸಾಮಾಜಿಕವಾಗಿರುತ್ತಿದ್ದರು. ಇವರ ಹೆಂಡತಿ ಮಿಡ್‌ವೈಫರಿಯಲ್ಲಿ ಪದವಿ ಪಡೆದ ನಂತರ Rec2go ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ದಂಪತಿ ವ್ಯಾಪಾರ ಹಾಗೂ ಪ್ರವಾಸಕ್ಕೆಂದು ಭಾರತಕ್ಕೆ ಬಂದಿದ್ದರು. ಎಲ್ಲ ಕಾರ್ಯಗಳು ಮುಗಿದ ಮೇಲೆ ಅಹಮದಾಬಾದ್ನಿಂದ ಲಂಡನ್ಗೆ ತೆರಳಲು ಏರ್ ಇಂಡಿಯಾ ವಿಮಾನವನ್ನು ಹತ್ತಿದ್ದರು.
ಆದರೆ ಏರ್ ಇಂಡಿಯಾ ವಿಮಾನ ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು ಅಕೀಲ್ ನಾನಾಬಾವಾ ಕುಟುಂಬ ಅಂತ್ಯ ಕಂಡಿದೆ. ಈ ದಂಪತಿಗಳು ತಮ್ಮ ದಾನ-ಧರ್ಮಗಳಿಂದ ಹೆಸರುವಾಸಿಯಾಗಿದ್ದರು. ಗಾಜಾದಲ್ಲಿ ನಿರಾಶ್ರಿತರಿಗೆ ಹಾಗೂ ಭಾರತದ ಬಡ ವ್ಯಕ್ತಿಗಳಿಗೆ ವೈದ್ಯಕೀಯ ಆರೈಕೆಗಾಗಿ ನಿಧಿಸಂಗ್ರಹಣೆಗೆ ಸಹಾಯ ಮಾಡಿದ್ದರು ಎಂದು ಹೇಳಲಾಗುತ್ತಿದೆ.