ಕರಾವಳಿಯಲ್ಲಿ ನಡೆದ ಮೂರು ಕೊಲೆಗಳನ್ನು SIT ಮೂಲಕ ತನಿಖೆ ನಡೆಸಬೇಕು ::ಅನ್ವರ್ ಸಾದತ್
ಮಂಗಳೂರು:ಜೂ.09 – ನಗರದ ಹೊರವಲಯದ ಕುಡುಪುವಿನಲ್ಲಿ ಬಾಯಾರಿಕೆ ಆದಾಗ ನೀರು ಕೇಳಿದಕ್ಕೆ ಸಂಘಪರಿವಾರದ ಗೂಂಡಾಗಳಿಂದ ಗುಂಪು ದಾಳಿಯ ಮೂಲಕ ಹತ್ಯೆಯಾದ ಕೇರಳದ ವಯನಾಡಿನ ಅಶ್ರಫ್ ಹಾಗೂ ಬಜರಂಗದಳದ ಕಿರಾತಕರ ಪೂರ್ವ ಯೋಜನೆಯ ಮತ್ತು ಸಂಘಟಿತ ಷಡ್ಯಂತ್ರದಿಂದ ತನ್ನ ಗೆಳೆಯ ಬಜರಂಗದಳದ ಕಾರ್ಯಕರ್ತ ದೀಪಕ್ ಮತ್ತು ತಂಡದಿಂದ ವಂಚನೆಯ ಮೂಲಕ ಅಮಾನುಷವಾಗಿ ಕೊಲೆಯಾದ ಬಂಟ್ವಾಳ ತಾಲೂಕಿನ ಕೊಳ್ತಮಜಲು ಅಬ್ದುಲ್ ರಹಿಮಾನ್ ಹತ್ಯೆ ಹಾಗೂ ದಲಿತ ಯುವಕ ಕೀರ್ತಿ ಮತ್ತು ಫಾಝಿಲ್ ಕೊಲೆ ಪ್ರಕರಣದ A1 ಆರೋಪಿಯಾಗಿರುವ ಗ್ಯಾಂಗ್ ವಾರ್ ನಿಂದ ಹತ್ಯೆಯಾದ ಬಿಜೆಪಿ ಸರ್ಕಾರದ ಸಮಯದಲ್ಲೇ ರೌಡಿಶೀಟರ್ ಆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ರೌಡಿಶೀಟರ್ ಒಬ್ಬನ ಜೀವಕ್ಕೆ ಕೊಡುವ ಕಾಳಜಿ ಮತ್ತು ಮಹತ್ವ ಸರಕಾರ ಅಮಾಯಕ ಮುಸ್ಲಿಂ ಯುವಕರ ಜೀವಕ್ಕೆ ಯಾಕೆ ಕೊಡುತ್ತಿಲ್ಲ. ಇದು ಸಂವಿಧಾನದ ಮೂಲಕ ಪ್ರತಿಜ್ಜೆ ಮಾಡಿ ಅಧಿಕಾರ ನಡೆಸುವ ಸರಕಾರ ಅನುಸರಿಸುವ ಧರ್ಮ ತಾರತಮ್ಯವಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮೇಲಿನ ಎರಡೂ ಪ್ರಕರಣ ನಡೆದಾಗ ನಮ್ಮ ಪಕ್ಷ ಸೇರಿದಂತೆ ಹಲವಾರು ಪ್ರಗತಿಪರರು,ಸಾಮಾಜಿಕ, ದಾರ್ಮಿಕ ಸಂಘಟನೆಗಳ ಮುಖಂಡರು ಆರೋಪಿಗಳ ಮೇಲೆ ಕಠಿಣ ಕಾಯ್ದೆ ದಾಖಲಿಸಿ ಉನ್ನತ ಮಟ್ಟದ ತನಿಖೆ ವಹಿಸಬೇಕೆಂದು ಒತ್ತಾಯಿಸಿದ್ದೆವು. ಆದರೆ ರಾಜ್ಯ ಸರ್ಕಾರ ಅದನ್ನು ಕಡೆಗಣಿಸಿತ್ತು. ಮಾತ್ರವಲ್ಲದೆ ಮೊದಲು ಕುಡುಪುವಿನಲ್ಲಿ ಗುಂಪು ಹತ್ಯೆಯಾದ ಅಶ್ರಫ್ ಪ್ರಕರಣದಲ್ಲಂತೂ ಪೋಲಿಸರ ವೈಫಲ್ಯದಿಂದ ಆರೋಪಿಗಳಲ್ಲಿ ಮೂವರಿಗೆ ಬಂಧನವಾಗಿ ಒಂದೇ ತಿಂಗಳಲ್ಲೇ ಜಾಮೀನು ದೊರಕಿತ್ತು. ಇದಕ್ಕೆ ಸ್ಥಳೀಯ ಪೋಲಿಸರು ಆರೋಪಿಗಳನ್ನು ರಕ್ಷಿಸಲು ತನಿಖೆಯಲ್ಲಿನ ಲೋಪ ಕಾರಣವಲ್ಲದೆ ಬೇರೇನೂ ಅಲ್ಲ.
ಬಜ್ಪೆಯ ರೌಡಿಶೀಟರ್ ಸುಹಾಸ್ ಶೆಟ್ಟಿ ಗ್ಯಾಂಗ್ ವಾರ್ ನಿಂದ ಹತ್ಯೆಯಾದಾಗ ಅದಕ್ಕೆ ಭಜರಂಗದಳದ ಮುಖಂಡರಾದ ಭರತ್ ಕುಮ್ಡೇಲ್ ಮತ್ತು ಶ್ರೀಕಾಂತ್ ಶೆಟ್ಟಿ ಸೇರಿದಂತೆ ಹಲವಾರು ಮುಖಂಡರು ಪ್ರತೀಕಾರ ತೀರಿಸುತ್ತೇವೆ ಎಂಬ ಬಹಿರಂಗ ಹೇಳಿಕೆಯನ್ನು ನಿರಂತರವಾಗಿ ನೀಡುತಿದ್ದರು. ಇಂತಹ ಹೇಳಿಕೆಗಳಿಂದ ಪ್ರಚೋದಿತರಾದ ಭರತ್ ಕುಮ್ಟೇಲ್ ನ ಸಹಚರರಾದ ದೀಪಕ್ ಮತ್ತು ತಂಡ ವ್ಯವಸ್ಥಿತವಾಗಿ ಕೊಳ್ತಮಜಲು ನಿವಾಸಿ ಅಮಾಯಕ ಅಬ್ದುಲ್ ರಹಿಮಾನ್ ನನ್ನು ಅಮಾನುಷವಾಗಿ ಕೊಲೆ ಮಾಡುತ್ತಾರೆ. ಇದೀಗ ಅಶ್ರಫ್ ಹಾಗೂ ರಹಿಮಾನ್ ಕೊಲೆಯನ್ನು ಬಿಟ್ಟು ಗ್ಯಾಂಗ್ ವಾರ್ ನಿಂದ ಹತ್ಯೆಯಾದ ಕೀರ್ತಿ ಹಾಗೂ ಫಾಝಿಲ್ ಕೊಲೆಯ A1 ಆರೋಪಿ ಹಾಗೂ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಯ ತನಿಖೆಯನ್ನು ಮಾತ್ರ ಕೇಂದ್ರ ಸರ್ಕಾರ NIA ಗೆ ಒಪ್ಪಿಸಿ ಸಂಘಪರಿವಾರ ಕಾರ್ಯಕರ್ತರನ್ನು ಮೆಚ್ಚಿಸಲು ಹೊರಟಿದೆ. ರಾಜ್ಯ ಸರ್ಕಾರ ಮೊದಲೇ ಈ ಎರಡೂ ಮುಸ್ಲಿಂ ಯುವಕರ ಕೊಲೆಯ ಬಗ್ಗೆ ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆಗೆ ವಹಿಸಿದ್ದರೆ ಪ್ರಕರಣದಲ್ಲಿ ತಾರತಮ್ಯವಾಗುತ್ತಿರಲಿಲ್ಲ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ಕೋಮು ದ್ರುವೀಕರಣದ ಭಾಗವಾಗಿ ಮುಸ್ಲಿಮರನ್ನು ಎರಡನೇ ದರ್ಜೆ ನಾಗರಿಕರಂತೆ ನಡೆಸಿಕೊಂಡು ಬರುತ್ತಿರುವುದಕ್ಕೆ ಈ ಪ್ರಕರಣ ಸೇರಿದಂತೆ ಹಲವಾರು ಘಟನೆಗಳು ಸಾಕ್ಷಿಯಾಗಿದೆ. ಮೂರು ವರ್ಷಗಳ ಹಿಂದೆ ದ.ಕ ಜಿಲ್ಲೆಯಲ್ಲಿ ಬೆಳ್ಳಾರೆಯ ಮಸೂದ್,ಪ್ರವೀಣ್ ನೆಟ್ಟಾರ್, ಸುರತ್ಕಲ್ ನ ಫಾಝಿಲ್ ಹಾಗೂ ಕಾಟಿಪಳ್ಳದ ಜಲೀಲ್ ಹತ್ಯೆ ನಡೆದಾಗಲು ಕೂಡ ಕೇವಲ ಪ್ರವೀಣ್ ನೆಟ್ಟಾರ್ ಹತ್ಯೆ ತನಿಖೆಯನ್ನು ಮಾತ್ರ NIA ಗೆ ವಹಿಸಿತ್ತು. ಇಂತಹ ಸರಕಾರಿ ಪ್ರಾಯೋಜಿತ ತಾರತಮ್ಯಗಳು ಮುಂದುವರೆದರೆ ಸಮಾಜದ ಪರಿಸ್ಥಿತಿ ಏನಾಗಬಹುದು?. ರೌಡಿ ಶೀಟರ್ ಗಳ ಜೀವಕ್ಕೆ ಕೊಡುವ ಮಹತ್ವ ಮತ್ತು ಕಾಳಜಿಯನ್ನು ಸರಕಾರ ಯಾಕೆ ಅಮಾಯಕ ಮುಸ್ಲಿಂ ಯುವಕರ ಜೀವಕ್ಕೆ ಕೊಡುತ್ತಿಲ್ಲ? ಎಂದು ಪ್ರಶ್ನಿಸಿದರು. ಆದ್ದರಿಂದ ಸರ್ಕಾರ ಕೂಡಲೇ ಮೂರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯದ ಪರಿಣಿತ ಹಾಗೂ ಅನುಭವಿ, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ SIT ಮೂಲಕ ತನಿಖೆ ನಡೆಸಬೇಕೆಂದು ಅನ್ವರ್ ಸಾದತ್ ಬಜತ್ತೂರು ಪತ್ರಿಕಾ ಪ್ರಕಟಣೆಯಲ್ಲಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.