ಮಂಗಳೂರು: ಕೊಳತ್ತಮಜಲು ಅಬ್ದುಲ್ ರಹೀಂ ಹತ್ಯೆ ಖಂಡನೀಯ. ವಿಶ್ವಾಸ ದ್ರೋಹ ಹತ್ಯೆಯನ್ನು ಯಾವುದೇ ಧರ್ಮ ಒಪ್ಪದು. ಹತ್ಯೆ ಮಾಡಿದವರಿಗೂ, ಹತ್ಯೆಗೆ ಪ್ರಚೋದನೆ ನೀಡಿದವರಿಗೂ ಶಿಕ್ಷೆ ಆಗಬೇಕು. ಕೇಸರಿ ಬಣ್ಣದ ವಸ್ತ್ರ ಧರಿಸಿದ ತಕ್ಷಣ ಆತ ಹಿಂದೂ ನಾಯಕ ಆಗಲ್ಲ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಗುಡುಗಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋಮು ವಿಷ ಬೀಜವನ್ನು ಬಿತ್ತುವುದು ಮಾತ್ರ ಬಿಜೆಪಿ ಕೆಲಸ ಆಗಿದೆ. ಹಿಂದೂ ನಾಯಕನ ಹತ್ಯೆ ಎನ್ನುವುದನ್ನು ಬಿಡಲಿ. ಗಡಿಪಾರು ಆದವರು, ಕೇಸ್ ಗಳಿರುವವರಿಗೆ ಹಿಂದೂ ನಾಯಕನ ಪಟ್ಟ ಕಟ್ಟುವುದು ಬೇಡ ಎಂದು ಭಂಡಾರಿ ಹೇಳಿದರು.
ಇವತ್ತು ಕರಾವಳಿಯಲ್ಲಿ ಗಲಭೆ ನಡೆಯುತ್ತಿದೆ ಎನ್ನುವುದು ತಪ್ಪು. ದ.ಕ. ಜಿಲ್ಲೆಯ ತಾಲೂಕು ಒಂದರ ಕೇವಲ 10 ಕಿ.ಮಿ ವ್ಯಾಪ್ತಿಯಲ್ಲಿ ಹತ್ಯೆ ನಡೆಯುತ್ತಿದೆ. ಕೋಮು ಗಲಭೆ, ಕೋಮು ಹತ್ಯೆ ಬೇರೆ. ಇದನ್ನು ನಾವು ಹತ್ತಿಕ್ಕಬೇಕಿದೆ. ಕರಾವಳಿ ಹೆಸರಿಗೆ ಯಾವುದೇ ಮಸಿ ಬೆಳೆಯುವ ಯತ್ನ ಬೇಡ ಎಂದರು.
ಸಾಮಾಜಿಕವಾಗಿ , ಆರ್ಥಿಕವಾಗಿ ಸಾಂಸ್ಕ್ರತಿಕವಾಗಿ ಕರಾವಳಿ ಮೂರು ದಶಕಗಳ ಹಿಂದೆ ಹೇಗಿತ್ತು ಎಂದು ಅಧ್ಯಯನ ಮಾಡಲು ಕಾಂಗ್ರೆಸ್ ಪಕ್ಷದಿಂದ ಅಧ್ಯಯನ ಸಮಿತಿಯನ್ನು ಮಾಡಲಾಗಿದೆ. ಈ ಸಮಿತಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಜ್ಯಸಭಾ ಸದಸ್ಯ ಸೈಯ್ಯದ್ ನಾಸೀರ್ ಹುಸೈನ್, ಎಐಸಿಸಿ ಕಾರ್ಯದರ್ಶಿ ಕೇರಳದ ರೋಜಿಜಾನ್, ಶಾಂತಿನಗರದ ಶಾಸಕ ಎನ್ ಎ ಹಾರೀಸ್, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಮತ್ತು ನನ್ನನ್ನು ಸಮಿತಿಗೆ ಸೇರಿಸಿದ್ದಾರೆ. ಸಮಿತಿಯು ಗುರುವಾರ ಪಕ್ಷದ ಮುಂಚೂಣಿ ಘಟಕದ ಮುಖಂಡರ ಜತೆ ಚರ್ಚೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.