ಇಂದು ವಿಧಾನಸೌಧದಲ್ಲಿ ಆರ್ಸಿಬಿ ತಂಡಕ್ಕೆ ಅಭಿನಂದನಾ ಕಾರ್ಯಕ್ರಮ ಹಾಗೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಜಯ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಆದರೆ, ಸಂಭ್ರಮಾಚರಣೆ ಶುರುವಾಗುವದಕ್ಕೂ ಮೊದಲೇ ಸೂತಕದ ಛಾಯೆ ಆವರಿಸಿದೆ. ಆರ್ಸಿಬಿ ತಂಡವನ್ನು ಕಣ್ತುಂಬಿಕೊಳ್ಳಲು ಉತ್ಸಾಹದಿಂದ ಆಗಮಿಸಿದ್ದ 10 ಅಭಿಮಾನಿಗಳು ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ. ಮೆಟ್ರೋ ನಿಲ್ದಾಣಗಳಲ್ಲಿ ಜನಜಾತ್ರೆಯೇ ಸೇರಿದ್ದರಿಂದ ಮುಂಜಾಗ್ರತಾ ಕ್ರಮವಾಗಿ 2 ಮೆಟ್ರೋ ನಿಲ್ದಾಣಗಳಲ್ಲಿ ಮೆಟ್ರೋ ರೈಲುಗಳನ್ನು ನಿಲ್ಲಿಸದಿರಲು ನಮ್ಮ ಮೆಟ್ರೋ ನಿರ್ಧರಿಸಿದೆ.
ಬೆಂಗಳೂರು, ಜೂನ್ 4: 18 ವರ್ಷಗಳಲ್ಲಿ ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ (IPL Champion) ಆಗಿರುವ (RCB) ವಿಜಯಯಾತ್ರೆಗೆ ಬೆಂಗಳೂರಿನಲ್ಲಿ ಸಕಲ ಸಿದ್ಧತೆಗಳು ನಡೆದಿದ್ದವು. ಆದರೆ, ಮಿತಿಮೀರಿದ ಸಂಖ್ಯೆಯಲ್ಲಿ ಅಭಿಮಾನಿಗಳು ನುಗ್ಗಿದ್ದರಿಂದ ಕಾಲ್ತುಳಿತ ಉಂಟಾಗಿ 10 ಜನರು ಸಾವನ್ನಪ್ಪಿದ್ದಾರೆ. ಇನ್ನೂ ಅನೇಕ ಜನರ ಸ್ಥಿತಿ ಗಂಭೀರವಾಗಿದೆ. ನಾಲ್ಕೈದು ಜನರ ಕಾಲುಗಳು ಕಟ್ ಆಗಿವೆ. ಅಪ್ಪ-ಅಮ್ಮನ ಜೊತೆ ಸಂಭ್ರಮಾಚರಣೆಗೆ ಬಂದಿದ್ದ ಮಗು ಕೂಡ ಸಾವನ್ನಪ್ಪಿದೆ. ಇದರ ನಡುವೆ ಮೆಟ್ರೋ ರೈಲುಗಳಲ್ಲಿ ಚಿನ್ನಸ್ವಾಮಿ ಸ್ಟೇಡಿಯಂಗೆ ಆಗಮಿಸಲು ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ನೇರಳೆ ಮಾರ್ಗದ 2 ಮೆಟ್ರೋ ನಿಲ್ದಾಣಗಳಾದ ವಿಧಾನಸೌಧ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ಸ್ಟೇಷನ್ಗಳನ್ನು ಬಂದ್ ಮಾಡಲಾಗಿದೆ
ಆರ್ಸಿಬಿ ತಂಡದ ಗೆಲುವಿನ ಸಂಭ್ರಮದ ವೇಳೆ ಕಾಲ್ತುಳಿತ ಉಂಟಾಗಿದ್ದರಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪರಿಸ್ಥಿತಿ ಕೈಮೀರಿದೆ. ಮೆಟ್ರೋ ರೈಲುಗಳಲ್ಲೂ ಜನಸಾಗರವೇ ಹರಿದುಬರುತ್ತಿರುವುದರಿಂದ ಯಾವುದೇ ಅಪಾಯಗಳು, ಕಾಲ್ತುಳಿತ ಸಂಭವಿಸಬಾರದು ಎಂಬ ಉದ್ದೇಶದಿಂದ 2 ಮೆಟ್ರೋ ನಿಲ್ದಾಣಗಳಲ್ಲಿ ಸೇವೆ ಸ್ಥಗಿತ ಮಾಡಲಾಗಿದೆ. ಕಬ್ಬನ್ ಪಾರ್ಕ್, ವಿಧಾನಸೌಧ ಮೆಟ್ರೋ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ‘ನಮ್ಮ ಮೆಟ್ರೋ’ ನೇರಳೆ ಮಾರ್ಗದಲ್ಲಿರುವ ನಿಲ್ದಾಣಗಳಲ್ಲಿ ಇಂದು ಸಂಜೆ 4.30ರಿಂದಲೇ ಸೇವೆ ಸ್ಥಗಿತ ಮಾಡಲಾಗಿದೆ. ಮುಂದಿನ ಆದೇಶದವರೆಗೂ ಈ ಎರಡು ನಿಲ್ದಾಣಗಳಲ್ಲಿ ಮೆಟ್ರೋ ರೈಲುಗಳು ನಿಲ್ಲುವುದಿಲ್ಲ.