ರಹೀಂ ಹತ್ಯೆ ಮನುಷ್ಯತ್ವಕ್ಕೆ ಅತೀ ದೊಡ್ಡ ಸವಾಲು: ಮಾನವೀಯತೆಗೆ ಸವಾಲಾದ ಘಟನೆ’
ಮುಸ್ಲಿಂ ಕಾಂಗ್ರೆಸ್ಪ್ ನಾಯಕರು ತಮ್ಮ ಸಮುದಾಯಕ್ಕೆ ನೋವಾದಾಗ ಆ ಸಮುದಾಯದ ನಾಯಕರಾಗಿ ತಮಗಾದ ನೋವನ್ನು ವ್ಯಕ್ತಪಡಿಸುವುದು, ಆಗಿರುವ ಅನ್ಯಾಯವನ್ನು ಪ್ರಶ್ನಿಸುವುದುನ್ಯಾಯೋಚಿತ ವಾಗಿದೆ ಹಾಗೂ ಸಹಜ. ಇದನ್ನೂ ಮುಂದಿಟ್ಟು ಕೊಂಡು ಅಲ್ಪಸಂಖ್ಯಾತ ಮುಖಂಡರಿಗೆ ಕಾಂಗ್ರೆಸ್ ನೀಡಿರುವ ನೋಟಿಸ್ ಕ್ರಮ ಸರಿಯಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿ.ಸಿ ರೋಡ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಮಾಯಕ ಯುವಕ ರಹೀಂ ಕೊಲೆ ಬಗ್ಗೆ ಪಕ್ಷದ ಕೆಲ ಅಲ್ಪಸಂಖ್ಯಾತ ಮುಖಂಡರು ಅವರ ಸಮುದಾಯಕ್ಕಾದ ಅನ್ಯಾಯ ನೋವನ್ನು ತೋರಿಸಲು ಹಾಗೂ ನ್ಯಾಯಕ್ಕಾಗಿ ಆಗ್ರಹಿಸಲು ಸಭೆ ಕರೆದಿದ್ದರು. ಇದು ಸಹಜ ಪ್ರಕ್ರಿಯೆ. ಇದ್ಯಾವುದೂ ಪಕ್ಷದ ಮೇಲಿನ ದ್ವೇಷದಿಂದಾಗಿ ಅಲ್ಲ. ಬದಲಾಗಿ ತಮ್ಮ ನೋವನ್ನು ತೋರಿಸುವ ಸಲುವಾಗಿ ಆಗಿದೆ. ಆದರೆ ಅಂತಹವರಿಗೆ ಪಕ್ಷದ ವತಿಯಿಂದ ಶೋಕಾಸ್ ನೋಟೀಸು ಜಾರಿ ಮಾಡಿ ಶಿಸ್ತು ಕ್ರಮದ ಎಚ್ಚರಿಕೆ ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸದ್ಯದ ಪರಿಸ್ಥಿತಿಯಲ್ಲಿ ಜಾತ್ಯಾತೀತ ಶಕ್ತಿಗಳು ವಿಘಟನೆ ಆಗಬಾರದು. ಜಾತ್ಯತೀತ ಶಕ್ತಿಗಳು ದುರ್ಬಲವಾದರೆ ಮತೀಯ ಶಕ್ತಿಗಳು ವಿಜೃಂಭಿಸಲು ಅವಕಾಶ ಮಾಡಿದಂತಾಗುತ್ತದೆ. ಪಕ್ಷದೊಳಗಿನ ವಿಚಾರವನ್ನು ನೋವಾದ ಸಮುದಾಯದ ಮಂದಿಗಳನ್ನು ಕರೆದು ವಿಚಾರಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ನಿಜವಾದ ನಾಯಕತ್ವದ ಗುಣ. ಈ ಸಂದರ್ಭದಲ್ಲಿ ನಾಯಕರಾದವರು ಪ್ರಜ್ಞಾವಂತಿಕೆ ಮೆರೆಯಬೇಕು. ಈ ಬಗ್ಗೆ ಪಕ್ಷದ ವರಿಷ್ಠರು ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಂಟ್ವಾಳದಲ್ಲಿ ಧರ್ಮಾಧಾರಿತ ಹತ್ಯೆಗಳು ಮತ್ತೆ ನಡೆದಿರುವುದು ತೀವ್ರ ಖೇದಕರ. ಅಬ್ದುಲ್ ರಹೀಂ ಹತ್ಯೆ ಹಾಗೂ ಖಲಂದರ್ ಶಾಫಿ ಮೇಲಿನ ಹತ್ಯಾ ಯತ್ನ ಘಟನೆ ಎಂಬುದು ಮಾನವೀಯತೆಗೇ ಸವಾಲಾಗಿ ನಡೆದಿರುವುದು ಅತ್ಯಂತ ವಿಷಾದನೀಯ. ಇಂತಹ ಘಟನೆಗಳು ತೀವ್ರ ಖಂಡನೀಯವಾಗಿದೆ. ಇದೊಂದು ನಂಬಿಕೆ ದ್ರೋಹದ ಘಟನೆಯಾಗಿದೆ. ಎಲ್ಲ ಸಂದರ್ಭದಲ್ಲಿ ನಡೆದ ಮತೀಯ ಘಟನೆಗಳಿಗೂ ಭಿನ್ನವಾದ ಘಟನೆ ಇದು. ಕೊಲೆಯಾದ ರಹೀಂ ಮನೆಗೆ ಸ್ಥಳೀಯ ಹಿಂದೂ ಮುಖಂಡರೇ ಭೇಟಿ ನೀಡಿ ಸಾಂತ್ವನ ಹೇಳಿರುವುದೇ ಇದನ್ನು ಸಾಕ್ಷೀಕರಿಸುತ್ತದೆ ಯಾವುದೇ ಕಾರಣಕ್ಕೂ ಇಂತಹ ಕೃತ್ಯಗಳನ್ನು ಒಪ್ಪತಕ್ಕದ್ದಲ್ಲ. ಈ ಬಗ್ಗೆ ಕಠಿಣ ಕ್ರಮಕ್ಕೆ ಈಗಾಗಲೇ ಸರಕಾರ ಕ್ರಮ ಕೈಗೊಳ್ಳುತ್ತಾ ಇದೆ. ಇಂತಹ ಘಟನೆಗಳಲ್ಲಿ ಸೂತ್ರದಾರರ ಬಂಧನವೇ ಇಂತಹ ಕೃತ್ಯಗಳಿಗೆ ಅಂತ್ಯ ಹಾಡಲು ಸೂಕ್ತ ಕ್ರಮ ಎಂದರು.
ಇಂತಹ ಘಟನೆಗಳಲ್ಲಿ ಪೊಲೀಸ್ ಅಧಿಕಾರಿಗಳಲ್ಲಿ ಯಾರೂ ಕೂಡಾ ರಾಜಕೀಯ ಪ್ರಭಾವ ಬೀರುವ ಪ್ರಶ್ನೆಯೇ ಇಲ್ಲ. ಮನುಷ್ಯನ ಪ್ರಾಣ ಬಹಳ ಮುಖ್ಯವಾಗಿದ್ದು, ಅಧಿಕಾರಿಗಳು ಇಂತಹ ಸಂದರ್ಭಗಳಲ್ಲಿ ಕಠಿಣ ನಿಲುವು ತಾಳಬೇಕಾಗಿರುವುದು ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಪೊಲೀಸರು ಸ್ವತಂತ್ರವಾಗಿ ತನಿಖೆ ಮಾಡುವ ವಾತಾವರಣ ನಿರ್ಮಾಣವಾಗಬೇಕು ಎಂದು ಆಗ್ರಹಿಸಿದರು.