ಕಲ್ಲಡ್ಕ ಪೇಟೆಯಲ್ಲಿರುವ ಮೇಲುರಸ್ತೆ (ಫ್ಲೈಓವರ್)ಯಲ್ಲಿ ಎಡಭಾಗವನ್ನು ವಾಹನಗಳ ಸಂಚಾರಕ್ಕೆ ತೆರವುಗೊಳಿಸಲಾಗಿದೆ.
ಬಂಟ್ವಾಳ(ದಕ್ಷಿಣ ಕನ್ನಡ): ಜಿಲ್ಲೆಯಲ್ಲಿ ನಿರೀಕ್ಷೆಗೂ ಮೊದಲೇ ಮಳೆಗಾಲ ಪ್ರಾರಂಭವಾಗಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ.ರೋಡ್-ಅಡ್ಡಹೊಳೆ ಚತುಷ್ಪಥ ಕಾಮಗಾರಿ ಅಂತಿಮ ಹಂತದಲ್ಲಿದೆ. ಹೀಗಾಗಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಲ್ಲಡ್ಕ ಫ್ಲೈಓವರ್ ಸೇರಿದಂತೆ ಕೆಲವೆಡೆ ವಾಹನಗಳ ಸುಗಮ ಸಂಚಾರಕ್ಕೆ ರಸ್ತೆ ತೆರವುಗೊಳಿಸಿ ಅನುಕೂಲ ಮಾಡಿಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂಸದ ಕ್ಯಾ.ಬ್ರಿಜೇಶ್ ಚೌಟ ನೀಡಿದ ಸೂಚನೆಯಂತೆ ಸೋಮವಾರ (ಜೂನ್ 2) ಕಲ್ಲಡ್ಕ ಫ್ಲೈಓವರ್ ಸಂಚಾರಕ್ಕೆ ತೆರೆದುಕೊಂಡಿದೆ.
ಆದರೆ, ಮೇಲ್ಸೇತುವೆಯಲ್ಲಿ ಬೇಕಾಬಿಟ್ಟಿ ಹೋಗುವಂತಿಲ್ಲ. ಎದುರುಬದುರಾಗಿ ವಾಹನಗಳು ಸಂಚರಿಸುತ್ತಿರುವುದರಿಂದಾಗಿ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಮುಂಗಾರು ಚುರುಕುಗೊಂಡಿರುವುದರಿಂದಾಗಿ ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಬಿ.ಸಿ.ರೋಡ್-ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿಯಿಂದಾಗಿ ವಾಹನಗಳ ಸಂಚಾರಕ್ಕೆ ಅಡ್ಡಿ-ಆತಂಕ ಎದುರಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ.
ಎಲ್ಲೆಲ್ಲಿ ಕಾಮಗಾರಿಯಿಂದ ವಾಹನಗಳ ಸಂಚಾರಕ್ಕೆ ತೊಂದರೆ ಎದುರಾಗಿದೆಯೋ ಅಲ್ಲೆಲ್ಲ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಿ ಜನರ ಓಡಾಟಕ್ಕೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಕ್ಯಾ.ಚೌಟ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಮೇ 29ರಿಂದ ಹೆದ್ದಾರಿ ಪ್ರಾಧಿಕಾರವು ಮಾಣಿ ಬಳಿಯ ವೆಹಿಕಲ್ ಅಂಡರ್ ಪಾಸ್(ವಿಯುಪಿ) ಹಾಗೂ ಉಪ್ಪಿನಂಗಡಿ ಬಳಿಯ ವೆಹಿಕಲ್ ಅಂಡರ್ ಪಾಸ್ ದ್ವಿಪಥವನ್ನು ಸಂಚಾರಕ್ಕೆ ಮುಕ್ತಗೊಳಿಸಿದೆ. ಜೂ.2 ರಿಂದ ಕಲ್ಲಡ್ಕ ಪೇಟೆಯಲ್ಲಿರುವ ಮೇಲುರಸ್ತೆ (ಫ್ಲೈಓವರ್)ಯಲ್ಲಿ ಎಡಭಾಗವನ್ನು ವಾಹನಗಳ ಸಂಚಾರಕ್ಕೆ ತೆರವುಗೊಳಿಸಲಾಗಿದೆ.
2.1 ಕಿ.ಮೀ, ಉದ್ದದ ಫ್ಲೈಓವರ್: ಬಿ.ಸಿ.ರೋಡ್‌ನಿಂದ ಅಡ್ಡಹೊಳೆವರೆಗೆ 64 ಕಿಮೀ ಉದ್ದದ ಹೆದ್ದಾರಿ ಕಾಮಗಾರಿಯನ್ನು 2017ರಲ್ಲಿ ಎಲ್ ಆ್ಯಂಡ್ ಟಿ ಕಂಪನಿಗೆ 821 ಕೋಟಿ ರೂ.ಗೆ ವಹಿಸಲಾಗಿತ್ತು. ಹಲವು ಕಾರಣಕ್ಕೆ ವಿಳಂಬವಾಗಿ ಬಳಿಕ ಅರ್ಧದಲ್ಲೇ ಸ್ಥಗಿತಗೊಂಡಿತ್ತು. 2021ರಲ್ಲಿ 64 ಕಿ.ಮೀ. ಉದ್ದದ ಹೆದ್ದಾರಿಯನ್ನು 49 ಕಿ.ಮೀ ಹಾಗೂ 15 ಕಿ.ಮೀ. ಎಂದು ವಿಭಾಗಿಸಿ ಕೆಎನ್ಆರ್ ಕನ್ಸ್‌ಸ್ಟ್ರಕ್ಷನ್ಸ್ ಹೈದರಾಬಾದ್ ಹಾಗೂ ಎಂ.ಔತಡೆ ಪ್ರೈ.ಲಿ. ಮಹಾರಾಷ್ಟ್ರ ಕಂಪನಿಗಳಿಗೆ ಗುತ್ತಿಗೆ ನೀಡಲಾಯಿತು. ಅಲ್ಲಿಂದ ಕಾಮಗಾರಿಗೆ ವೇಗ ದೊರಕಿತು. ಪಾಣೆಮಂಗಳೂರು, ಮೆಲ್ಕಾರ್, ಮಾಣಿ, ನೆಕ್ಕಿಲಾಡಿ, ಉಪ್ಪಿನಂಗಡಿ ಜಂಕ್ಷನ್, ಉಪ್ಪಿನಂಗಡಿ ಸುಬ್ರಹ್ಮಣ್ಯ ಕ್ರಾಸ್, ನೆಲ್ಯಾಡಿ, ಪೆರಿಯಶಾಂತಿಗಳಲ್ಲಿ ಓವರ್ ಪಾಸ್ ಮೇಲ್ಸೇತುವೆ ಹಾಗೂ ಕಲ್ಲಡ್ಕದಲ್ಲಿ 2.1 ಕಿ.ಮೀ. ಉದ್ದದ ಫ್ಲೈಓವರ್ ನಿರ್ಮಾಣ ಕಾಮಗಾರಿ ಏಕಕಾಲದಲ್ಲಿ ಆರಂಭಗೊಂಡಿತು.
ಕಲ್ಲಡ್ಕದ ಪೂರ್ಲಿಪ್ಪಾಡಿಯಿಂದ ಕೃಷ್ಣಕೋಡಿಯವರೆಗೆ ಒಟ್ಟು 2.1 ಕಿ.ಮೀ. ಉದ್ದದ ಈ ಮೇಲ್ಸೇತುವೆಯಲ್ಲಿ 70 ಪಿಲ್ಲರ್‌ಗಳಿವೆ. ಒಂದರಿಂದ ಇನ್ನೊಂದಕ್ಕೆ 30 ಮೀಟರ್ ಅಂತರವಿದ್ದು, ಒಟ್ಟು 72 ಸ್ಪಾನ್‌ಗಳ ಫ್ಲೈಓವರ್ ಇದಾಗಿದೆ. ಜೂನ್ ಕೊನೆಯೊಳಗೆ ಫ್ಲೈಓವರ್ಗೆ ಸಂಬಂಧಪಟ್ಟ ಎಲ್ಲ ಕಾಮಗಾರಿಗಳು ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.