
ಮಳೆ.. ಮಳೆ.. ಮಳೆ.. ಕರುನಾಡಲ್ಲಿ ಸದ್ಯಕ್ಕೆ ಇದೊಂದೇ ರಗಳೆ. ಮಲೆನಾಡು, ಕರಾವಳಿಯಲ್ಲಿ ಮುಂಗಾರಿನ ಆರ್ಭಟ ಮುಂದುವರೆದಿದೆ. ಗಾಳಿಯ ಜೊತೆ ಅಬ್ಬರಿಸ್ತಿರೋ ವರುಣ ರಾಜ್ಯದ ಹಲವೆಡೆ ಅವಾಂತರಗಳ ಸರಮಾಲೆಯನ್ನ ಸೃಷ್ಟಿಸಿದ್ದಾನೆ. ಹಳ್ಳಕೊಳ್ಳಗಳು ಭರ್ತಿಯಾಗಿದ್ದು, ಒಂದು ಕಡೆ ಸಂಪರ್ಕ ಕಡಿತವಾಗಿದ್ರೆ, ಮತ್ತೊಂದೆಡೆ ಮರಗಳು, ಧರೆ ಕುಸಿಯುತ್ತಿದ್ದು, ಆತಂಕವೂ ಮನೆ ಮಾಡಿದೆ.
ರಾಜ್ಯದಲ್ಲಿ ಅವಧಿಗೂ ಮುನ್ನವೇ ಮಳೆರಾಯ ಅಬ್ಬರಿಸುತ್ತಿದ್ದಾನೆ. ಕರವಾಳಿ, ಮಲೆನಾಡು ಭಾಗ ಸೇರಿದಂತೆ ಹಲವೆಡೆ ಅಬ್ಬರ ಮುಂದುವರಿದಿದೆ. ನಿನ್ನೆ ಕರಾವಳಿಯಲ್ಲಿ ಮುಂಗಾರಿನ ಆರ್ಭಟಕ್ಕೆ ಮೂವರು ಸಾವನ್ನಪ್ಪಿದ್ದಾರೆ. ಮನೆ ಮೇಲೆ ಗುಡ್ಡ ಕುಸಿದು ಘೋರ ದುರಂತವೇ ಸಂಭವಿಸಿದ್ದು, ದುರಂತದಲ್ಲಿ ಮಹಿಳೆ, ಇಬ್ಬರು ಮಕ್ಕಳ ದುರ್ಮರಣ ಹೊಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಮಳೆರಾಯನ ಅಬ್ಬರಕ್ಕೆ 7 ಮಂದಿ ಅಸುನೀಗಿದ್ದಾರೆ.


ಮಳೆ ಅಬ್ಬರ, ವಿದ್ಯುತ್ ಶಾಕ್ನಿಂದ ಲೈನ್ಮ್ಯಾನ್ ಕೊನೆಯುಸಿರು
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ಅವಾಂತರಗಳ ಸರಮಾಲೆಯೆ ಸೃಷ್ಟಿಯಾಗಿವೆ. ಈ ಬೆನ್ನಲ್ಲೆ ವಿದ್ಯುತ್ ಶಾಕ್ ಹೊಡೆದು ಪವರ್ ಮ್ಯಾನ್ ಜೀವ ಕಳೆದುಕೊಂಡಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವಿಜೇಶ್ ಜೈನ್ ಎಂಬುವರು, ಭಾರೀ ಮಳೆಯ ನಡುವೆ ಹೈಟೆನ್ಷನ್ ಲೈನ್ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾರೆ.
ಇವತ್ತು ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು ಈ ಹಿನ್ನೆಲೆ ಇವತ್ತು ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಂಗನವಾಡಿಯಿಂದ ಹಿಡಿದು ಪ್ರೌಢಶಾಲೆಯವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಎಲ್ಲಾ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.
ಮಳೆಗೆ ಉರುಳಿ ಬಿದ್ದ ಕಾರು, ತಪ್ಪಿದ ಭಾರಿ ಅನಾಹುತ
ಉಡುಪಿ ಜಿಲ್ಲೆಯಲ್ಲೂ ಮಳೆರಾಯನ ಕಾಟ ಮುಂದುವರಿದಿದೆ. ಆಗುಂಬೆ ಘಾಟಿಯಲ್ಲಿ ಭಾರೀ ಮಳೆಗೆ ಕಾರೊಂದು ಉರುಳಿ ಬಿದ್ದಿದೆ. ಆಗುಂಬೆಯಿಂದ ಉಡುಪಿ ಕಡೆ ಬರುತ್ತಿದ್ದ ಕಾರು, 6ನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದು, ಕಾರಿನಲ್ಲಿ ಸಿಲುಕಿಕೊಂಡಿದ್ದ ತಾಯಿ ಮಗುವನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಇತ್ತ, ಪೂರ್ವ ಮುಂಗಾರು ಅಬ್ಬರಕ್ಕೆ ನಲುಗಿ ಹೋಗಿದ್ದ ಬೆಂಗಳೂರಿನಲ್ಲಿ ಪ್ರವಾಹ ವಾತಾವರಣ ಸೃಷ್ಟಿಯಾದ್ರೆ, ಜನರನ್ನ ಹೇಗೆ ರಕ್ಷಣೆ ಮಾಡಬೇಕು ಅನ್ನೋದ್ರ ಕುರಿತು ಟ್ರಯಲ್ ರನ್ ನಡೆಸಲಾಗಿದೆ. NDRF ಮತ್ತು SDRF ತಂಡ, ಜನರ ರಕ್ಷಣೆಗೆ ತುರ್ತಾಗಿ ಹೇಗೆ ಧಾವಿಸಬೇಕು, ಹೇಗೆ ಸ್ಥಳಾಂತರಿಸಬೇಕು ಎಂದು ಹಲಸೂರು ಕೆರೆ, ಜಯನಗರ ಅಗ್ನಿ ಶಾಮಕ ದಳ ಠಾಣೆಯಲ್ಲಿ ಪೂರ್ವ ತಯಾರಿ ನಡೆಸಿದೆ..

ಕಬಿನಿ ಜಲಾಶಯದ ಒಳಹರಿವು ಭಾರೀ ಹೆಚ್ಚಳ
ಕೇರಳದ ವಯನಾಡಿನಲ್ಲಿ ಮಳೆ ಹೆಚ್ಚಾದ ಹಿನ್ನೆಲೆ ಮೈಸೂರಿನ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಕಬಿನಿ ಜಲಾಶಯಕ್ಕೆ 18,000 ಕ್ಯೂಸೆಕ್ಸ್ ನೀರು ಹರಿದು ಬಂದಿದ್ದು, ನದಿಗೆ 5,000 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯದ ಇಂದಿನ ನೀರಿನ ಮಟ್ಟ 2,274 ಅಡಿ ತಲುಪಿದ್ದು, ಜಲಾಶಯ ಭರ್ತಿಗೆ ಕೇವಲ 10 ಅಡಿ ಮಾತ್ರ ಬಾಕಿ ಉಳಿದಿದೆ.
ಮುಂಗಾರು ಎಷ್ಟು ಬೇಗ ಬಂತೋ ಅಷ್ಟೇ ಬೇಗ ಅವಾಂತರಗಳನ್ನು ಸೃಷ್ಟಿಸಿದೆ. ವರುಣನ ಅಬ್ಬರಕ್ಕೆ ಕರಾವಳಿ ಮತ್ತು ಮಲೆನಾಡಿಗರು ತತ್ತರಿಸಿ ಹೋಗಿದ್ದು, ಇನ್ನೂ ಮಳೆ ಆರ್ಭಟ ಹೆಚ್ಚಾದ್ರೆ ಮುಂದೇ ಹೇಗಪ್ಪ ಅನ್ನೋ ಚಿಂತೆ ಜನರಲ್ಲಿ ಕಾಡ್ತಿದೆ.