ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದೆ. ನಿರಂತರವಾಗಿ ಸುರಿಯುತ್ತಿದೆ. ವರುಣನ ಆರ್ಭಟದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಗುಡ್ಡ ಕುಸಿದಿವೆ. ಗುಡ್ಡ ಕುಸಿತದಿಂದ ಮನೆಗಳಿಗೆ ಹಾನಿಯಾಗಿದೆ. ಮತ್ತು ಸಾವು-ನೋವು ಸಂಭವಿಸಿವೆ. ಇದೀಗ, ಇಬ್ಬರು ಮೀನುಗಾರರು ನೀರುಪಾಲಾಗಿದ್ದಾರೆ.
ಮಂಗಳೂರು, ಮೇ 30: ದಕ್ಷಿಣ ಕನ್ನಡ (Dakshina kannada) ಜಿಲ್ಲೆಯಲ್ಲಿ ಧಾರಾಕಾರ ಮಳೆಯ ಜೊತೆಗೆ ಕಡಲಬ್ಬರ ಕೂಡ ಜೋರಾಗಿದೆ. ಹೀಗಾಗಿ ಜಿಲ್ಲೆಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಮೀನುಗಾರಿಕೆಗೆ ನಿರ್ಭಂದಿಸಿದೆ. ಆದರೆ, ನಿಯಮ ಮೀರಿ ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರು ನೀರುಪಾಲಾಗಿದ್ದಾರೆ. ಮಂಗಳೂರು ಕಡಲತೀರದ ತೋಟಬೆಂಗ್ರೆ ಅಳಿವೆ ಬಾಗಿಲು ಬಳಿ ಘಟೆನೆ ನಡೆದಿದೆ. ತೋಟಬೆಂಗ್ರೆ ನಿವಾಸಿಗಳಾದ ಯಶವಂತ್ ಮತ್ತು ಕಮಲಾಕ್ಷ ನೀರುಪಾಲಾದವರು
ಈ ಇಬ್ಬರು ಮೀನುಗಾರರು ನಿಯಮ ಮೀರಿ ನಾಡ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ಅವಘಡ ಸಂಭವಿಸಿದೆ. ನಾಡದೋಣಿಯ ಅವಶೇಷಗಳು ಕಡಲತೀರಕ್ಕೆ ತೇಲಿ ಬಂದಿವೆ. ಸಮುದ್ರದಲ್ಲಿ ನಾಪತ್ತೆಯಾಗಿರುವ ಮೀನುಗಾರರಿಗಾಗಿ ಶೋಧ ಕಾರ್ಯ ನಡೆದಿದೆ.
ಮಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಅವಾಂತರ
ಮಂಗಳೂರಿನ ಪಡೀಲ್ ನಿಂದ ಬಜಾಲ್ ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಪಡೀಲ್ ರೈಲ್ವೆ ಅಂಡರ್ ಪಾಸ್. ಅಂಡರ್ ಪಾಸ್ ಮತ್ತೆ ಜಲಾವೃತಗೊಂಡಿದೆ. ಅಂಡರ್ ಪಾಸ್ ಜಲಾವೃತವಾಗಿದ್ದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ಪ್ರತಿ ಮಳೆಗಾಲದಲ್ಲೂ ಪಡೀಲ್ ರೈಲ್ವೆ ಅಂಡರ್ ಪಾಸ್ ಮುಳುಗುತ್ತದೆ. ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆಯಿಲ್ಲದಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಜನರು ಹೇಳಿದ್ದಾರೆ.
ತಡೆಗೋಡೆ ಕುಸಿತ
ಇನ್ನು, ಪುತ್ತೂರು ತಾಲೂಕಿನ ಲಿಂಗದಗುಡ್ಡೆದಲ್ಲಿ ಮಳೆಯ ಆರ್ಭಟಕ್ಕೆ ಮನೆಯೊಂದರ ತಡೆಗೋಡೆ ಕುಸಿತಗೊಂಡಿದೆ. ತಡೆಗೋಡೆ ಕುಸಿತದ ಸಂದರ್ಭ ಯಾರೂ ಇಲ್ಲದ ಪರಿಣಾಮ ದುರಂತ ತಪ್ಪಿದೆ. ತಡೆಗೋಡೆ ಕುಸಿತದಿಂದಾಗಿ ಮೂರು ಮನೆಗಳು ಅಪಾಯದಲ್ಲಿವೆ. ತಡೆಗೋಡೆ ಕುಸಿತ ಪ್ರದೇಶಕ್ಕೆ ನಗರಸಭೆಯ ಸದಸ್ಯ ದಿನೇಶ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಪ್ಪಿನಮೊಗರು ಪ್ರದೇಶ ಜಲಾವೃತ
ಮಳೆಯಿಂದ ಮಂಗಳೂರಿನ ಜಪ್ಪಿನಮೊಗರು ಪ್ರದೇಶಕ್ಕೆ ರಾಜಕಾಲುವೆ ನೀರು ನುಗ್ಗಿ ಮನೆಗಳು ಜಲಾವೃತಗೊಂಡಿವೆ. ಇದರಿಂದ, ಮನೆಯಿಂದ ಹೊರಬರಲು ಸಾಧ್ಯವಾಗದೆ ವೃದ್ಧ ದಂಪತಿ ಪರದಾಡಿದರು. ಪೀಠೋಪಕರಣ, ಎಲೆಕ್ಟ್ರಾನಿಕ್ ವಸ್ತುಗಳು, ದವಸ ಧಾನ್ಯಗಳಿಗೆ ಹಾನಿಯಾಗಿದೆ. ರಾಜಕಾಲುವೆ ಚಿಕ್ಕದಾಗಿ ನಿರ್ಮಿಸಿರುವುದು ಮತ್ತು ಹೂಳು ತೆಗೆಯದಿರುವುದೇ ಘಟನೆಗೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.