Bantwal Abdul Rehman Murder: ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಬಳಿಕ ಉದ್ವಿಗ್ನಗೊಂಡು ಶಾಂತವಾಗಿದ್ದ ಕರಾವಳಿ ಮತ್ತೆ ಕೊತ ಕೊತ ಅಂತಿದೆ. ಯುವಕನ ಬರ್ಬರ ಕೊಲೆಯಿಂದಾಗಿ ಶಾಂತಿ ಕದಡಿದೆ. ನಿನ್ನೆ ಬಂಟ್ವಾಳದಲ್ಲಿ ನಡೆದಿದ್ದ ಕೊಲೆ ಇಡೀ ಕರಾವಳಿ ಕೊತ ಕೊತ ಎಂದಿದೆ. ಹೀಗಾಗಿ ಮುಂಜಾಗ್ರತವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಹಾಗಿದ್ರೆ ಆಗಿದ್ದೇನು? ಸದ್ಯ ಮಂಗಳೂರು ಸ್ಥಿತಿ ಹೇಗಿದೆ? ಪೊಲೀಸರು ಹೇಳಿದ್ದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ
ಮಂಗಳೂರು, (ಮೇ 29): ಸುಹಾಸ್ ಶೆಟ್ಟಿ (Suhas Shetty) ಹತ್ಯೆಯಾಗಿ ತಿಂಗಳು ಕಳೆದಿಲ್ಲ. ಅಷ್ಟರಲ್ಲೇ ಕಡಲನಗರಿ ಮಂಗಳೂರಿನಲ್ಲಿ ಮತ್ತೆ ನೆತ್ತರು ಹರಿದಿದೆ. ನಿನ್(ಮೇ 27) ಮಧ್ಯಾಹ್ನ ಮುಸ್ಲಿಂ ಯುವಕನೊಬ್ಬನನ್ನ ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ. ಅಬ್ದುಲ್ ರಹಿಮಾನ್ (32) (Bantwal Abdul Rehman) ಎಂಬಾತ ದಕ್ಷಿಣ ಕನ್ನಡ (Dakshina Kannada) ಜಿಲ್ಲೆ ಬಂಟ್ವಾಳ ತಾಲೂಕಿನ ಕೂರಿಯಾಳ ಸಮೀಪದ ಈರಕೋಡಿಯ ಕೊಳತ್ತಮಜಲ್ ನಿವಾಸಿ. ಪಿಕಪ್ ವಾಹನ ಓಡಿಸಿ ಜೀವನ ಸಾಗಿಸುತ್ತಿದ್ದ. ನಿನ್ನೆ (ಮೇ 27) ಒಂದು ಲೋಡ್ ಮರಳು ಬೇಕು ಎಂದು ದುಷ್ಕರ್ಮಿಗಳು ಕರೆಸಿಕೊಂಡಿದ್ದು, ಅನ್ಲೋಡ್ ಆಗುತ್ತಿದ್ದಂತೆಯೇ ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಭೀಕರವಾಗಿ ಕೊಂದಿದ್ದಾರೆ. ಇದರಿಂದ ಎಲ್ಲೆಲ್ಲೂ ಆಕ್ರೋಶ ಭುಗಿಲೆದ್ದಿದೆ. ಶಾಂತವಾಗಿದ್ದ ಕರಾವಳಿ ಮತ್ತೆ ಕೊತ ಕೊತ ಅಂತಿದೆ.ಯುವಕನ ಬರ್ಬರ ಕೊಲೆಯಿಂದ ಇಡೀ ಮಂಗಳೂರಿಗೆ ಮಂಗಳೂರೇ ಪ್ರಕ್ಷುಬ್ಧಗೊಂಡಿದೆ.
ರಹಿಮಾನ್ ಹತ್ಯೆ ಸುದ್ದಿ ಕಾಡ್ಗಿಚ್ಚನಂತೆ ಹಬ್ಬುತ್ತಿದ್ದಂತೆಯೇ ದೇರಳಕಟ್ಟೆಯ ಯೆನಪೋಯ ಆಸ್ಪತ್ರೆ ಬಳಿ ರಾತ್ರಿ ಸಾಕಷ್ಟು ಸಂಖ್ಯೆಯಲ್ಲಿ ಜನ ಜಮಾಯಿಸಿದ್ರು. ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಹಿಂದೂ ಮುಖಂಡರ ಪ್ರಚೋದನಕಾರಿ ಹೇಳಿಕೆಯಿಂದಲೇ ಅಮಾಯಕ ಮುಸ್ಲಿಂ ಯುವಕನ ಹತ್ಯೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅಲ್ಲದೇ ಆಸ್ಪತ್ರೆ ಮುಂದೆ ಪ್ರತಿಭಟನೆ ಮಾಡಿ ಪೊಲೀಸರ ವಿರುದ್ಧವೇ ಕಿಡಿಕಾರಿದರು.
ರಹಿಮಾನ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಿದ್ರು. ಬಳಿಕ ಆಸ್ಪತ್ರೆಯಿಂದಲೇ ಅಂತಿಮಯಾತ್ರೆಯನ್ನ ನಡೆಸಲಾಯ್ತು. ಸುರಿಯುವ ಮಳೆಯ ನಡುವೆಯೇ ಆ್ಯಂಬುಲೆನ್ಸ್ ನಲ್ಲಿ ಅಂತಿಮ ಯಾತ್ರೆ ನಡೆಸಲಾಯ್ತು. ಹೀಗಾಗಿ ಫರಂಗಿಪೇಟೆ ಹಾಗೂ ಬಿ.ಸಿ.ರೋಡ್ನಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.
ಇನ್ನು ರಹಿಮಾನ್ ಹತ್ಯೆ ಖಂಡಿಸಿ ದೇರಳಕಟ್ಟೆಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯ್ತು.
ಸಂಚಾರ ಮಾಡುತ್ತಿದ್ದನ್ನು ವಿರೋಧಿಸಿ ಆಟೋದಲ್ಲಿ ಖಾಸಗಿ ಬಸ್ ಗಳನ್ನ ಅಟ್ಟಾಡಿಸಿಕೊಂಡು ಹೋಗಿರುವ ದೃಶ್ಯ ವೈರಲ್ ಆಗಿತ್ತು. ಅಲ್ಲದೇ ಕೆಲ ಅಂಗಡಿಗಳನ್ನು ಬಂದ್ ಮಾಡಿಸಿದ್ದು, ಬಳಿಕ ದೇರಳಕಟ್ಟೆಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯ್ತು.
ರಹಿಮಾನ್ ಮೃತದೇಹ ಇದ್ದ ಆ್ಯಂಬುಲೆನ್ಸ್ ಫರಂಗಿಪೇಟೆಗೆ ಬರುತ್ತಿದ್ದಂತೆಯೇ ವಾಹನವನ್ನ ಅಡ್ಡಹಾಕಿದ ನೂರಾರು ಜನರು ಅಂತಿಮ ದರ್ಶನ ಪಡೆದರು. ಬಳಿಕ ಕುತ್ತಾರು ಮದನಿನಗರದ ಮಸೀದಿಯಲ್ಲಿ ರಹಿಮಾನ್ ಮೃತದೇಹ ಅಂತಿಮದರ್ಶನ ನಡೀತು. ಮಸೀದಿಯಲ್ಲಿ ಅಂತಿಮ ದರ್ಶನದ ಬಳಿಕ ಕೊಲ್ತಮಜಲು ಗ್ರಾಮಕ್ಕೆ ಮೃತದೇಹವನ್ನ ತರಲಾಯ್ತು. ಇದೇ ಮಸೀದಿಯ ಬಳಿ ಖಬರಸ್ತಾನದಲ್ಲಿ ರಹಿಮಾನ್ ಕ್ರಿಯೆ ನಡೆಯಿತು.
ದುಷ್ಕರ್ಮಿಗಳ ಸೆರೆಗೆ 5 ಪೊಲೀಸ್ ತಂಡ ರಚನೆ
ರಹಿಮಾನ್ ಹತ್ಯೆ ಪ್ರಕರಣ ಸಂಬಂಧ, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ 15 ಜನರ ವಿರುದ್ಧ FIR ದಾಖಲಾಗಿದೆ. ನಿಸಾರ್ ಎಂಬುವವರು ನೀಡಿದ ದೂರಿನ ಅನ್ವಯ, ದೀಪಕ್, ಸುಮಿತ್ ಸೇರಿ ರಹಿಮಾನ್ ಪರಿಚಯಸ್ಥರೇ ಆಗಿರುವ ಆಗಿರುವ 15 ಜನರ ವಿರುದ್ಧ FIR ದಾಖಲಾಗಿದೆ. ದುಷ್ಕರ್ಮಿಗಳ ಸೆರೆಗೆ 5 ಪೊಲೀಸ್ ತಂಡ ರಚನೆ ಮಾಡಲಾಗಿದ್ದು, ಡಿವೈಎಸ್ಪಿ ವಿಜಯ್ ಪ್ರಕಾಶ್ ನೇತ್ವದಲ್ಲಿ ತನಿಖೆ ನಡೆಯುತ್ತಿದೆ.
ಸದ್ಯ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮೇ 30ರ ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿ ಇರಲಿದೆ. ಈ ಮಧ್ಯೆ ಇಂದು ಮಂಗಳೂರಿಗೆ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ ಭೇಟಿ ನೀಡಿ ಪರಿಶೀಲಿಸಿದರು.
ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎಡಿಜಿಪಿ
ಇನ್ನು ಈ ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆರ್.ಹಿತೇಂದ್ರ , ನಿನ್ನೆ ಮಧ್ಯಾಹ್ನ 3 ಗಂಟೆಗೆ ಅಬ್ದುಲ್ ರಹಿಮಾನ್ ಮೇಲೆ ದಾಳಿ ಆಗಿದ್ದು, ಅಬ್ದುಲ್ ರಹಿಮಾನ್ ಅಂತ್ಯಕ್ರಿಯೆ ಶಾಂತಿಯುತವಾಗಿ ಮುಗಿದಿದೆ. ಇನ್ನು ಮಂಗಳೂರು ನಗರ, ದಕ್ಷಿಣ ಕನ್ನಡ ಜಿಲ್ಲಾದ್ಯಂತ ನಿಷೇಧಾಜ್ಞೆ ಇದ್ದು, ಕೊಲೆ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುತ್ತೇವೆ. FIRನಲ್ಲಿ ಇಬ್ಬರ ಹೆಸರಿದೆ, ಬಂಧಿಸಿದ ಬಳಿಕ ಮಾಹಿತಿ ನೀಡುತ್ತೇವೆ. ಸದ್ಯ ತನಿಖೆ ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು.
ರಿವೇಂಜ್ ಪೋಸ್ಟ್ ವಿರುದ್ಧ ಕ್ರಮ
ಉತ್ತರ ಕನ್ನಡ , ಉಡುಪಿ, ಚಿಕ್ಕಮಗಳೂರು, ಮೈಸೂರಿನಿಂದ ಪೊಲೀಸರನ್ನ ಕರೆಸಿದ್ದೇವೆ. ಜನ ಶಾಂತಿ ಕಾಪಾಡಬೇಕು, ಯಾವುದೇ ಗಾಳಿ ಸುದ್ದಿಗೆ ಕಿವಿಗೊಡಬೇಡಿ. ಸಾಮಾಜಿಕ ಜಾಲತಾಣಗಳ ರಿವೇಂಜ್ ಪೋಸ್ಟ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಕೆಲವು ಅಪರಿಚಿತ ಅಕೌಂಟ್ ಇದೆ, ವಿದೇಶದಲ್ಲೂ ಕೂತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾರೆ. ಅದೆಲ್ಲಾ ನಿಜ ಎಂದು ನಂಬಬೇಡಿ, ಪೊಲೀಸ್ ಇಲಾಖೆಯನ್ನು ನಂಬಿ. ಇತ್ತೀಚಿನ ದಿನಗಳಲ್ಲಿ ಪ್ರಚೋದನಾಕಾರಿ ಹೇಳಿಕೆಗಳು ಹೆಚ್ಚಾಗುತ್ತಿವೆ. ಅಂಥವರ ವಿರುದ್ಧವೂ ಕೇಸ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ಸಹಜ ಸ್ಥಿತಿಯತ್ತ ಮಂಗಳೂರು
ನಿನ್ನೆ ಬಂಟ್ವಾಳದಲ್ಲಿ ಅಬ್ದುಲ್ ರಹಿಮಾನ್ ಹತ್ಯೆ ಬೆನ್ನಲ್ಲೇ ಮಂಗಳೂರಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣಾಗಿತ್ತು. ಹೀಗಾಗಿ ಪೊಲೀಸರು ಮುಂಜಾಗ್ರಾ ಕ್ರಮವಾಗಿ ಎಲ್ಲೆಡೆ ಬಿಗಿಬಂದೋಬಸ್ತ್ ಕೈಗೊಂಡಿದ್ದರಿಂದ ಯಾವುದೇ ಅಹಿತಕ ಘಟನೆಗಳು ನಡೆದಿಲ್ಲ. ಸದ್ಯ ಮಂಗಳೂರು ನಗರದಲ್ಲಿ ಎಂದಿನಂತೆ ಅಂಗಡಿ ಮುಂಗಟ್ಟು ಓಪನ್ ಆಗಿವೆ. ಮಂಗಳೂರಿನ ಕಂಕನಾಡಿ ಸರ್ಕಲ್ ನಲ್ಲಿ ಎಲ್ಲ ಅಂಗಡಿ ತೆರೆದಿದ್ದು, ಮತ್ತೊಂದೆಡೆ ಎಂದಿನಂತೆ KSRTC ಬಸ್ ಸಂಚರಿಸುತ್ತಿವೆ.
ಸಾಮೂಹಿಕ ರಾಜೀನಾಮೆಗೆ ಮುಸ್ಲಿಂ ಮುಖಂಡರು ತೀರ್ಮಾನ
ಇನ್ನು ಅಬ್ದುಲ್ ರಹಿಮಾ ಹತ್ಯೆ ಖಂಡಿಸಿ ಕಾಂಗ್ರೆಸ್ ಮುಸ್ಲಿಂ ಮುಖಂಡರು ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.ಈ ರಾಜೀನಾಮೆ ನಿರ್ಧಾರದ ಆಡಿಯೋ ವೈರಲ್ ಆಗಿದ್ದು, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ನೇತೃತ್ವದಲ್ಲಿ ನಾಳೆ (ಮೇ 29) ಸಾಮೂಹಿಕ ರಾಜೀನಾಮೆ ನೀಡಲು ಮುಸ್ಲಿಂ ಮುಖಂಡರ ತೀರ್ಮಾನಿಸಿದ್ದಾರೆ.
ಅಬ್ದುಲ್ ಹತ್ಯೆ ಬೆನ್ನಲ್ಲೇ ಮತ್ತೆ ಪ್ರತೀಕಾರದ ಪೋಸ್ಟರ್
ಅಬ್ದುಲ್ ಹತ್ಯೆ ಬೆನ್ನಲ್ಲೇ ಇದೀಗ ಮತ್ತೆ ಕರಾವಳಿ ಭಯ ಬೀಳುವಂತೆ ಮಾಡಿದೆ. ಟಾರ್ಗೆಟ್ ಬಾಯ್ ಪೇಜ್ ನಿಂದ ಮತ್ತೆ ಪ್ರತೀಕಾರದ ಪೋಸ್ಟರ್ ಹಾಕಲಾಗಿದೆ. ಇನ್ಸ್ಟಾಗ್ರಾಮ್ ನಲ್ಲಿ ಪ್ರತೀಕಾರ ಪೋಸ್ಟರ್ ನಲ್ಲಿ ಭಜರಂಗದಳ ಮುಖಂಡ ಭರತ್ ಕುಮ್ಡೇಲ್ ಫೋಟೋ ಹಾಕಲಾಗಿದೆ. ಭರತ್ ಎಸ್‌ಡಿಪಿಐ ಕಾರ್ಯಕರ್ತ ಅಶ್ರಫ್ ಕಲಾಯಿ ಹತ್ಯೆಯ ಪ್ರಮುಖ ಆರೋಪಿ ಆಗಿದ್ದಾನೆ. ಏನೇ ಹೇಳಿ ರಹಿಮಾನ್ ಹತ್ಯೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಯಾವಾಗ ಏನಾಗುತ್ತೆ ಎನ್ನುವ ಆತಂಕ ಎಲ್ಲರನ್ನ ಕಾಡುತ್ತಿದೆ

