ಮಂಡ್ಯದಲ್ಲಿ ಸಂಚಾರಿ ಪೊಲೀಸರ ನಿರ್ಲಕ್ಷ್ಯದಿಂದ ಮೂರೂವರೆ ವರ್ಷದ ಮಗು ಸಾವನ್ನಪ್ಪಿದೆ. ನಾಯಿ ಕಚ್ಚಿದ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಹೆಲ್ಮೆಟ್ ಪರಿಶೀಲನೆಗಾಗಿ ಪೊಲೀಸರು ಬೈಕ್ ನಿಲ್ಲಿಸಿದ್ದರಿಂದ ಅಪಘಾತ ಸಂಭವಿಸಿದೆ. ಮಗುವಿನ ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿದೆ. ಈ ಘಟನೆಗೆ ಸ್ಥಳೀಯರಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಮಂಡ್ಯ, ಮೇ 26: ನಗರದಲ್ಲಿ ಟ್ರಾಫಿಕ್ ಪೊಲೀಸರ ಎಡವಟ್ಟಿಗೆ ಮೂರೂವರೆ ವರ್ಷದ ಮಗು ಬಲಿಯಾಗಿರುವಂತಹ (death) ಘಟನೆ ಸ್ವರ್ಣಸಂದ್ರ ಬಳಿಯ ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ. ಜಿಲ್ಲೆಯ ಮದ್ದೂರು ತಾಲೂಕಿನ ಗೊರವನಹಳ್ಳಿ ನಿವಾಸಿಗಳಾದ ಅಶೋಕ್, ವಾಣಿ ದಂಪತಿಯ ಪುತ್ರಿ ಹೃತೀಕ್ಷಾ ಸ್ಥಳದಲ್ಲೇ ಮೃತಪಟ್ಟ ಮಗು. ಮಂಡ್ಯ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ನಡೆದದ್ದೇನು?
ಮಗು ಹೃತೀಕ್ಷಾಗೆ ನಾಯಿ ಕಚ್ಚಿದ್ದರಿಂದ ತಂದೆ, ತಾಯಿ ಬೈಕ್ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಹೆಲ್ಮೆಟ್ ತಪಾಸಣೆಗಾಗಿ ಸ್ವರ್ಣಸಂದ್ರ ಬಳಿ ಸಂಚಾರಿ ಠಾಣೆ ಪೊಲೀಸರು ಬೈಕ್ ಅಡ್ಡಗಟ್ಟಿದ್ದಾರೆ. ಹೀಗಾಗಿ ಮಗು ಸೇರಿದಂತೆ ದಂಪತಿ ಆಯಾ ತಪ್ಪಿ ಬಿದಿದ್ದಾರೆ. ಈ ವೇಳೆ ಮಗುವಿನ ತಲೆಗೆ ಬಲವಾದ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದೆ.
ಮಗುವನ್ನು ಮಡಿನಲ್ಲಿ ಇಟ್ಟುಕೊಂಡು ರಸ್ತೆಯಲ್ಲೇ ಪೋಷಕರು ಗೋಳಾಡಿದ್ದಾರೆ. ಘಟನೆ ಕಣ್ಣಾರೆ ಕಂಡು ಸಾರ್ವಜನಿಕರು ದಿಗ್ಭ್ರಮೆಗೊಂಡರೆ, ಮಂಡ್ಯ ಸಂಚಾರಿ ಪೊಲೀಸರಿಗೆ ಹೆತ್ತಕರುಳು ಹಿಡಿಶಾಪ ಹಾಕಿದೆ. ಸಂಚಾರಿ ಪೊಲೀಸರ ವಿರುದ್ಧ ಸ್ಥಳೀಯರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರದ್ದು ಅಮಾನೀಯ ವರ್ತನೆ, ಕ್ಷಮಿಸಲು ಸಾಧ್ಯವಿಲ್ಲ ಎಂದ ಶಾಸಕ ರವಿಕುಮಾರ್ ಗಣಿಗ
ಇನ್ನು ಘಟನೆ ಬಗ್ಗೆ ಮಂಡ್ಯ ಕ್ಷೇತ್ರದ ಶಾಸಕ ರವಿಕುಮಾರ್ ಗಣಿಗ ಹೇಳಿಕೆ ನೀಡಿದ್ದು, ‘ಪೊಲೀಸ್ ವರಿಷ್ಠಾಧಿಕಾರಿ ಜೊತೆ ಮಾತಾಡಿದ್ದೇನೆ. ಪೊಲೀಸರದ್ದು ಅಮಾನೀಯ ವರ್ತನೆ, ಕ್ಷಮಿಸಲು ಸಾಧ್ಯವಿಲ್ಲ. ತಕ್ಷಣ ಆ ಪೊಲೀಸ್ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಬೇಕು ಎಂದು ಹೇಳಿದ್ದಾರೆ.
ಮೃತ ಬಾಲಕಿಯ ಕುಟುಂಬದ ಬಳಿ ನಾನು ಕ್ಷಮೆ ಕೇಳುತ್ತೇನೆ. ಸಿಎಂ ಸಿದ್ದರಾಮಯ್ಯ ಜೊತೆ ಮಾತನಾಡಿ ಬಾಲಕಿಯ ಕುಟುಂಬಕ್ಕೆ ಪರಿಹಾರ ನೀಡಲಾಗುವುದು. ವೈಯಕ್ತಿಕವಾಗಿ ನಾನು ಕುಟುಂಬಕ್ಕೆ ನೆರವು ನೀಡುತ್ತೇನೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದ್ದಾರೆ.
ನಾನೇ 10 ಲಕ್ಷ ಪರಿಹಾರ ಕೊಡ್ತೀನಿ, ನನ್ನ ಮಗಳ ತಂದುಕೊಡಿ..’ ಪೊಲೀಸರ ಯಡವಟ್ಟಿಗೆ ತಂದೆ ಕಣ್ಣೀರು..


ಗಾಡಿ ಅಡ್ಡ ಹಾಕಿದಾಗ ಇಲ್ಲ, ನಾವು ಅರ್ಜೆಂಟ್ ಅಲ್ಲಿ ಆಸ್ಪತ್ರೆಗೆ ಹೊರಟಿದ್ವಿ ಎಂದಿದ್ದಾರೆ. ಆಗ ಗಾಡಿ ಮೂವ್ ಮಾಡಲು ಕೊಟ್ಟಿಲ್ಲ. ಅವರ ಗಾಡಿ ಅಡ್ಡ ಹಾಕಿದ ಪರಿಣಾಮ ನಮ್ಮ ಬೈಕ್ ಸ್ಕಿಡ್ ಆಗಿದೆ. ಸ್ಕಿಡ್ ಆಗಿ ಮಗು ಬೀಳುತ್ತಿದ್ದಂತೆಯೇ ಬೇರೆ ವಾಹನ ಬಂದು ಪಾಪು ಮೇಲೆ ಹತ್ತಿದೆ. ನನ್ನ ಮಗಳ ಜೀವ ತಿನ್ನೋಕೆ ಇವರೇ ಕಾರಣ ಸ್ವಾಮಿ. ಅವರಿಗೆ ಬ್ಯಾಂಡೇಜ್ ಹಾಕಿದ್ದೂ ಕಾಣಿಸಿಲ್ವಾ? ಇವರ ದುಡ್ಡನ್ನು ತಿಂದು ಹೋಗ್ತೀವಾ? ನನ್ನ ಮಗಳಿಗೆ ಪರಿಹಾರ ಕೊಡ್ತಾರಂತೆ. ನಾನೇ ಹತ್ತು ಲಕ್ಷ ಕೊಡ್ತೀನಿ ಸ್ವಾಮಿ. ನೀವು ನನ್ನ ಮಗಳ ತಂದು ಕೊಡ್ತೀರಾ? ನೀವು ನನ್ನ ಮಗಳನ್ನು ತಂದು ಕೊಡ್ತೀರಾ ಎಂದು ಕಣ್ಣೀರು ಇಟ್ಟಿದ್ದಾರೆ.