ಪೂರ್ವ ಮುಂಗಾರು ಮಳೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಅನಾಹುತ ಸೃಷ್ಟಿಸುತ್ತಿದೆ. ಕೇವಲ ಎರಡು ಗಂಟೆಯ ಮಳೆಗೆ ಹೆದ್ದಾರಿಗಳು ಕೆರೆಯಂತಾಗಿವೆ. ಅತ್ತ ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿ ಮೀನುಗಾರಿಕೆ ನಿಂತಿದೆ. ಬೋಟ್ಗಳು ಬಂದರುನಲ್ಲಿ ಲಂಗರು ಹಾಕುತ್ತಿವೆ. ಉತ್ತರ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಉತ್ತರ ಕನ್ನಡ, ಮೇ 20: ಕಳೆದ ಒಂದು ವಾರದಿಂದ ರಾಜ್ಯದ ಕೆಲವು ಕಡೆ ಅಬ್ಬರಿಸಿ ಅವಾಂತರ ಸೃಷ್ಟಿಸುತ್ತಿದ್ದ ವರುಣ (Rain) ಮಂಗಳವಾರ (ಮೇ.20) ಕರಾವಳಿಗೆ ಎಂಟ್ರಿ ಕೊಟ್ಟಿದ್ದಾನೆ. ಪ್ರತಿ ವರ್ಷ ಜೂನ್ ಅಂತ್ಯ ಮತ್ತು ಜುಲೈ ತಿಂಗಳಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಹೆಚ್ಚಾಗುತಿತ್ತು. ಆದರೆ, ಈ ವರ್ಷ ಮೇ ಮೂರನೇ ವಾರದಲ್ಲೇ ಮಳೆ ಆರಂಭ ಆಗಿದ್ದರಿಂದ ಸಹಜವಾಗಿ ಅರಬ್ಬಿ ಸಮುದ್ರದಲ್ಲಿ ಗಾಳಿಯ ವೇಗ ಹೆಚ್ಚಾಗಿ ಅಲೆಗಳ ಅಬ್ಬರ ಹೆಚ್ಚಾಗಿದೆ.
ಹೀಗಾಗಿ, ಮೀನುಗಾರಿಕೆ ನಿರ್ಬಂಧಿಸಿರುವ ಉತ್ತರ ಕನ್ನಡ ಜಿಲ್ಲಾಡಳಿತ, ಮೀನುಗಾರಿಕೆಗಾಗಿ ಸಮುದ್ರದಾಳಕ್ಕೆ ಹೊದವರನ್ನು ಹಿಂತಿರುಗುವಂತೆ ಸೂಚಿಸಿದೆ. ಅಲ್ಲದೆ, ಮೇ 22 ರ ವರೆಗೆ ದಿನ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಸಮುದ್ರಕ್ಕೆ ಯಾವುದೇ ಬೋಟ್ಗಳು ಇಳಿಯದಂತೆ ಖಡಕ್ ಸೂಚನೆ ನೀಡಲಾಗಿದೆ. ಹಾಗೇ, ಜಿಲ್ಲಾಡಳಿತ ಅಂಗನವಾಡಿ ಕೇಂದ್ರಗಳಿಗೆ ಬುಧವಾರ ರಜೆ ಘೋಷಿಸಿದೆ.
ಫಾಲ್ಸ್ ಹಾಗೂ ಟ್ರಕ್ಕಿಂಗ್ ಸ್ಥಳಗಳಿಗೆ ನಿರ್ಬಂಧ
ಈ ಸಂಬಂಧ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮಾತನಾಡಿ, ಮೇ. 22ರವರೆಗೆ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಸಾರ್ವಜನಿಕರು ಹೊರಗಡೆ ಹೊದಾಗ ಮುನ್ನೆಚ್ಚರಿಕೆ ವಹಿಸಬೇಕು. ತಾಲೂಕು ಮತ್ತು ಜಿಲ್ಲಾ ಕೇಂದ್ರದಲ್ಲಿ ಕಂಟ್ರೋಲ್ ರೂಂ ಪ್ರಾರಂಭ ಮಾಡಲಾಗಿದೆ. 24X7 ಕಂಟ್ರೋಲ್ ರೂಂ ಕಾರ್ಯನಿರ್ವಹಿಸುತ್ತಿದ್ದು ಅವಘಡ ಸಂಭವಿಸಿದಾಗ ಸಂಪರ್ಕಿಸಬಹುದು. ಜಿಲ್ಲೆಯಲ್ಲಿನ 439 ಭೂ ಕುಸಿತ ಸ್ಥಳಕ್ಕೆ ಸ್ಪಾಟರ್ಸ್ ನೇಮಕ ಮಾಡಲಾಗಿದೆ ಎಂದು ಹೇಳಿದರು.
ಜೂನ್ ತಿಂಗಳಿನಿಂದ ಸ್ಪಾಟರ್ಸ್ ನಿಗದಿತ ಸ್ಥಳದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಕಳೆದ ಬಾರಿ ಮರ ಬಿದ್ದು ಕೆಲವು ಕಡೆ ಸಾವು ಆಗಿದ್ದರಿಂದ, ಅಪಾಯದ ಮರಗಳನ್ನು ತೆರವು ಮಾಡುವ ಕೆಲಸ ಅರಣ್ಯ ಇಲಾಖೆ ಮಾಡುತ್ತಿದೆ. ಜಲ ಸಾಹಸ ಕ್ರಿಡೆಗಳನ್ನು ಮಾನ್ಸೂನ ಮುಗಿಯೊವರೆಗೂ ನಿರ್ಬಂಧಿಸಲಾಗಿದೆ. ಮಾನ್ಸೂನ್ ಮುಗಿಯೊವರೆಗೂ ಫಾಲ್ಸ್ ಹಾಗೂ ಟ್ರೆಕ್ಕಿಂಗ್ ಸ್ಥಳಗಳಿಗೆ ನಿರ್ಬಂಧ ವಿಧಿಸಲಾಗುವುದು. ಅರಣ್ಯ ಇಲಾಖೆಯಿಂದ ಸಿಬ್ಬಂಧಿಗಳನ್ನು ನಿಯೋಜಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮೀನುಗಾರಿಕೆ ನಿಂತಿದ್ದರಿಂದ ಕಾರವಾರದ ಬೈಥಕೊಲ್ ಬಂದರು ಮೀನು ಮಾರುಕಟ್ಟೆ ಸಂಪೂರ್ಣವಾಗಿ ಖಾಲಿ ಖಾಲಿ ಹೊಡೆಯುತ್ತಿದ್ದು, ಮೀನುಗಾರರು ಕೈ ಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಇದರ ಜೊತೆಗೆ ಸ್ಕೂಬ್ ಡೈವಿಂಗ್ ಸೇರಿದಂತೆ ಎಲ್ಲ ಜಲಸಾಹಸ ಕ್ರಿಡೆಗಳನ್ನೂ ಕೂಡ ಇಂದಿನಿಂದಲೇ ನಿಲ್ಲಿಸುವಂತೆ ಪ್ರವಾಸೋದ್ಯಮ ಇಲಾಖೆ ಸೂಚಿಸಿದೆ.
ಮಂಗಳವಾರ ಬೆಳಿಗ್ಗೆ 11 ಗಂಟೆಯಿಂದ ಮದ್ಯಾಹ್ನ 1 ಗಂಟೆವರೆಗೆ ಜೋರಾಗಿ ಸುರಿದ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ – ಸಿದ್ಧಾಪುರದ ಹೆದ್ದಾರಿ ಜಲಾವೃತವಾಗಿ ವಾಹನ ಸವಾರರು ಪರದಾಡುವಂತಾಯಿತು. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಸುರಿದು ಸಾವು-ನೋವು ಸಂಭವಿಸಿತ್ತು. ಅಬ್ಬರದ ಮಳೆಯಲ್ಲೇ ಜಿಲ್ಲೆಗೆ ಭೇಟಿ ನೀಡಿದ್ದ ಸಿಎಂ ಸಿದ್ಧರಾಮಯ್ಯ ಹಾಗೂ ಕಂದಾಯ ಸಚಿವ ಕೃಷ್ಣ ಭೈರೆಗೌಡ ಅವರು ಮುಂದಿನ ವರ್ಷ ಈ ಸಮಸ್ಯೆ ಮರುಕಳಿಸದಂತೆ ಹೆಚ್ಚಿನ ಕಾಳಜಿ ವಹಿಸುವ ಭರವಸೆ ನೀಡಿದ್ದರು. ಆದರೆ, ಈ ವರ್ಷಾರಂಭದಲ್ಲಿ ಕೇವಲ ಎರಡು ಗಂಟೆ ಸುರಿದ ಅಬ್ಬರದ ಮಳೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡುವಂತಾಗಿದೆ.