ಭೋಪಾಲ್: ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಪಾದಗಳಿಗೆ ಇಡೀ ದೇಶ, ಸೇನೆ ಮತ್ತು ಸೈನಿಕರು ನಮಸ್ಕರಿಸುತ್ತಾರೆ ಎಂದು ಮಧ್ಯಪ್ರದೇಶದ ಡಿಸಿಎಂ ಜಗದೀಶ್ ದೇವ್ಡಾ (Jagdish Devda) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ
ಇತ್ತೀಚೆಗಷ್ಟೇ ಮಧ್ಯಪ್ರದೇಶದ ಸಚಿವ ವಿಜಯ್ ಶಾ ಎಂಬಾತ ಕರ್ನಲ್ ಸೋಫಿಯಾ ಖುರೇಷಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು. ಸುಪ್ರೀಂ ಕೋರ್ಟ್ (Supreme Court) ಸಹ ಅವರಿಗೆ ಛೀಮಾರಿ ಹಾಕಿತ್ತು. ಈ ಬೆನ್ನಲ್ಲೇ ಬಿಜೆಪಿಯ ಡಿಸಿಎಂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜಬಲ್ಪುರದಲ್ಲಿ ನಾಗರಿಕ ರಕ್ಷಣಾ ಸ್ವೈಂಸೇವಕರ ತರಬೇತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಇಡೀ ದೇಶ, ಸೇನೆ, ಸೈನಿಕರು ಮೋದಿಯವರ ಪಾದಗಳಿಗೆ ನಮಸ್ಕರಿಸುತ್ತಾರೆ ಎಂದಿದ್ದಾರೆ.
ಯಶಸ್ವಿ ಪ್ರಧಾನಿಗಳಿಗೆ ಧನ್ಯವಾದ ಹೇಳಲು ಇಡೀ ದೇಶ, ದೇಶದ ಸೈನ್ಯ ಹಾಗೂ ಸೈನಿಕರು ಅವರ ಪಾದಗಳಿಗೆ ನಮಸ್ಕರಿಸುತ್ತಾರೆ ಎಂದು ಹೇಳುತ್ತಾ ಪೇಚಿಗೆ ಸಿಲುಕಿದ್ದಾರೆ.
ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ:
ಇನ್ನೂ ಜಗದೀಶ್ ದೇವ್ಡಾ ಹೇಳಿಯನ್ನ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ, ಇದು ಸೇನೆಗೆ ಮಾಡಿದ ಅಪಮಾನ ಎಂದು ಕಿಡಿ ಕಾರಿದೆ. ದೇವ್ಡಾ ಅವರ ಈ ಹೇಳಿಕೆ ತುಂಬಾ ಕೀಳುಮಟ್ಟದ್ದು. ಇದು ಸೇನೆಯ ಶೌರ್ಯ ಮತ್ತು ಸಾಹಸಕ್ಕೆ ಮಾಡಿದ ಅವಮಾನ. ಇಂದು ಇಡೀ ದೇಶವೇ ಸೇನೆಗೆ ತಲೆಬಾಗುತ್ತಿರುವಾಗ, ಬಿಜೆಪಿ ನಾಯಕರು ನಮ್ಮ ಕೆಚ್ಚೆದೆಯ ಸೇನೆಯ ಬಗ್ಗೆ ತಮ್ಮ ಕಳಪೆ ಮನಸ್ಥಿತಿಯನ್ನು ತೋರಿಸಿದ್ದಾರೆ. ಇದಕ್ಕೆ ಅವರು ಕ್ಷಮೆಯಾಚಿಸಬೇಕು. ಬಿಜೆಪಿ ಅವರನ್ನು ಡಿಸಿಎಂ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದೆ.