ಮಂಗಳೂರಿನಲ್ಲಿ ಸಿಎಂ ಸಿದ್ಧರಾಮಯ್ಯ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಎನ್‌ಐಎ ತನಿಖೆಗೆ ಆಗ್ರಹಿಸಿ ಈ ಪ್ರತಿಭಟನೆ ನಡೆದಿದೆ. ಇದು ಕಳೆದ 20 ದಿನಗಳಲ್ಲಿ ಸಿಎಂಗೆ ಕಪ್ಪು ಬಾವುಟ ಪ್ರದರ್ಶಿಸಿದ ಎರಡನೇ ಘಟನೆಯಾಗಿದೆ.
ಮಂಗಳೂರು (ಮೇ.16): ಸಿಎಂ ಸಿದ್ಧರಾಮಯ್ಯಗೆ ಮತ್ತೊಮ್ಮೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ 20 ದಿನಗಳ ಅವಧಿಯಲ್ಲಿ ಸಿಎಂ ಸಿದ್ಧರಾಮಯ್ಯಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದ 2ನೇ ಘಟನೆ ಇದಾಗಿದೆ.
ದಕ್ಷಿಣ ಕನ್ನಡದ ನೂತನ ಜಿಲ್ಲಾಡಳಿತ ಕೇಂದ್ರ ಪ್ರಜಾ ಸೌಧದ ಉದ್ಘಾಟನಾ ಸಮಾರಂಭಕ್ಕೆ ಮಂಗಳೂರಿಗೆ ಸಿಎಂ ಸಿದ್ಧರಾಮಯ್ಯ ಪ್ರಯಾಣ ಮಾಡುತ್ತಿದ್ದರು. ಮಂಗಳೂರಿನ ಸನಿಹಕ್ಕೆ ಬರುವಾಗ ಬಿಜೆಪಿಯ ಕೆಲವು ಕಾರ್ಯಕರ್ತರು ಅವರ ಕಾರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಿ, ಬೆಂಗಾವಲಿಗೆ ಅಡ್ಡಿಪಡಿಸಿದ ಘಟನೆ ನಡೆದಿದೆ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಸಿಎಂ ಸಿದ್ಧರಾಮಯ್ಯ ಅಲ್ಲಿಂದ ಪಡೀಲ್‌ಗೆ ಕಾರ್‌ನಲ್ಲಿ ಪ್ರಯಾಣ ಮಾಡಿದ್ದರು. ಈ ವೇಳೆ ಯಯ್ಯಾಡಿಯಲ್ಲಿ ದಿಢೀರನೇ ಪ್ರತ್ಯಕ್ಷವಾದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರ ವಿರೋಧಿ ಘೋಷಣೆ ಕೂಗಲು ಆರಂಭ ಮಾಡಿದ್ದರು
ಬಜಪೆಯಲ್ಲಿ ನಡೆದ ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆಯ. ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕು. ಅದರೊಂದಿಗೆ ಸುಹಾಸ್ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಘೋಷಣೆ ಮಾಡಬೇಕು ಎಂದು ಅಗ್ರಹಿಸಿ ಬಿಜೆಪಿ ಮಂಗಳೂರು ಉತ್ತರ ಮಂಡಲ ಯುವ ಮೋರ್ಚಾ ಕಾರ್ಯಕರ್ತರು ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದರು. ಈ ವೇಳೆ ಕಾರ್ಯಪ್ರವರ್ತರಾದ ಬಂದೋಬಸ್ತ್‌ನಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ತಡೆದು, ವ್ಯಾನ್‌ನಲ್ಲಿ ಹಾಕಿ ಹೊರಗೆ ಕರೆದುಕೊಂಡು ಹೋಗಿದ್ದಾರೆ.
ಸಿಎಂ ಬರುವ ಮೊದಲೇ ದಾರಿ ಯೆಯ್ಯಾಡಿ ಬಳಿ ಕಪ್ಪು ಬಾವುಟ ಪ್ರದರ್ಶನ ಯತ್ನ ಮಾಡಲಾಗಿತ್ತು. ನೂತನ ಡಿಸಿ ಕಚೇರಿ ಉದ್ಘಾಟನೆ ಹಾಗೂ ಉಳ್ಳಾಲ ದರ್ಗಾ ಉರುಸ್ ನಲ್ಲಿ ಭಾಗವಹಿಸಲು ಸಿಎಂ ಆಗಮಿಸಿದ್ದರು. ಮಂಗಳೂರು ಏರ್ಪೋರ್ಟ್ ನಿಂದ ಉರ್ವಾ ಮಾರ್ಕೆಟ್ ಕಡೆಗೆ ಸಿದ್ಧರಾಮಯ್ಯ ಅವರ ಬೆಂಗಾವಲು ಪಡೆ ಸಾಗುತ್ತಿತ್ತು. ಈ ವೇಳೆ ಸಿದ್ದರಾಮಯ್ಯ ದಾರಿಯಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ