ಚಿಕ್ಕಮಗಳೂರಿನ ವಿವಾದಿತ ಕೇಂದ್ರ ಬಾಬಾಬುಡನ್ಗಿರಿ ದರ್ಗಾದಲ್ಲಿ ಔದುಂಬರ ವೃಕ್ಷಕ್ಕೆ ಪೂಜೆ ಸಲ್ಲಿಸಲು ಬಜರಂಗದಳ ಪಟ್ಟು ಹಿಡಿದಿದೆ. ಜಿಲ್ಲಾಡಳಿತ ಬೇಲಿ ಹಾಕಿ ಪೂಜೆಗೆ ಅವಕಾಶ ನಿರಾಕರಿಸಿರುವುದರಿಂದ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಔದುಂಬರ ವೃಕ್ಷಕ್ಕೆ ಪೂಜೆಗೆ ಅವಕಾಶ ನೀಡುವಂತೆ ಬಜರಂಗದಳ ಒತ್ತಾಯಿಸಿದೆ.
ಚಿಕ್ಕಮಗಳೂರು, ಮೇ 15: ಸದಾ ಒಂದಿಲ್ಲೊಂದು ವಿವಾದದಿಂದಲೇ ಸುದ್ದಿಯಲ್ಲಿರುವ ವಿವಾದಿತ ಕೇಂದ್ರ ಇನಾಂ ಬಾಬಾ ಬುಡನ್ ದರ್ಗಾದಲ್ಲಿ (Bababudangiri Inam Datta Peetha) ಮತ್ತೊಂದು ವಿವಾದ ಮುನ್ನೆಲೆಗೆ ಬಂದಿದೆ. ಗೋರಿಗಳ ನಡುವಿನ ಔದುಂಬರ ವೃಕ್ಷ ಪೂಜೆಗೆ ಅವಕಾಶ ನೀಡುವಂತೆ ಬಜರಂಗದಳ ಪಟ್ಟು ಹಿಡಿದಿದ್ದು, ಸದ್ಯ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಹೊಸ ಟೆನ್ಶನ್ ಶುರುವಾಗಿದೆ.
ಔದುಂಬರ ವೃಕ್ಷಕ್ಕೆ ಪೂಜೆ ಸಲ್ಲಿಸದಂತೆ ಬೇಲಿ: ಜಿಲ್ಲಾಡಳಿತದ ವಿರುದ್ಧ ಹಿಂದೂ ಕಾರ್ಯಕರ್ತರು ಅಸಮಾಧಾನ
ಚಿಕ್ಕಮಗಳೂರು ತಾಲೂಕಿನ ಬಾಬಾ ಬುಡನ್ ದರ್ಗಾದ ವಿವಾದವು ಮತ್ತೆ ಮುನ್ನೆಲೆಗೆ ಬಂದಿದೆ. ಪೀಠದಲ್ಲಿರುವ ಔದುಂಬರ ವೃಕ್ಷಕ್ಕೆ ಪೂಜೆ ಸಲ್ಲಿಸದಂತೆ ಮರದ ಸುತ್ತಲೂ ಜಿಲ್ಲಾಡಳಿತ ಬೇಲಿ ಹಾಕಿದೆ ಅಂತ ಹಿಂದೂ ಪರ ಸಂಘಟನೆಗಳು ಆರೋಪ ಮಾಡುತ್ತಿವೆ. ಇಲ್ಲಿ ಪೂಜೆ ಸಲ್ಲಿಸಲು ನ್ಯಾಯಾಲಯ ಅಥವಾ ಧಾರ್ಮಿಕ ದತ್ತಿ ಇಲಾಖೆ ನಿಷೇಧ ಹೇರಿಲ್ಲ ಆದರೂ ನಮಗೆ ಜಿಲ್ಲಾಡಳಿತ ಪೂಜೆಗೆ ಅವಕಾಶ ನೀಡಿಲ್ಲ ಅಂತ ಹಿಂದೂ ಕಾರ್ಯಕರ್ತರು ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದಾರೆ.
ಇದೇ ಸ್ಥಳದಲ್ಲಿದರ್ಗಾ ದವರಿಗೆ ಮಾತ್ರ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ.ಅವರಿಗೆ ದರ್ಗಾ ಪೂಜಿಸಲು ಅವಕಾಶವಿದೆ, ಆದರೆ ನಮಗೆ ಪೂಜೆ ಸಲ್ಲಿಸಲು ಯಾಕೆ ಅವಕಾಶ ಇಲ್ಲ? ಇದು ಯಾವ ನ್ಯಾಯ ಅಂತ ಪ್ರಶ್ನಿಸುತ್ತಿದ್ದಾರೆ. ಜೊತೆಗೆ ದತ್ತ ಪೀಠದಲ್ಲಿ ಮುಜರಾಯಿ ಇಲಾಖೆ ಹೊರತುಪಡಿಸಿ ಬೇರೆ ಯಾರು ಕಾಣಿಕೆ ಡಬ್ಬ ಇಡುವಂತಿಲ್ಲ ಆದರೂ ಅಲ್ಲಿ ಹಸಿರು ಬಟ್ಟೆ ಹಾಸಿ ಕಾಣಿಕೆ ಡಬ್ಬ ಇಟ್ಟು ಹಣ ಸಂಗ್ರಹಿಸಲಾಗುತ್ತಿದೆ. ಇದರಿಂದ ದತ್ತಪೀಠದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ ಎಂದು ಬಜರಂಗದಳ ಮುಖಂಡ ರಂಗನಾಥ್ ಹೇಳಿದ್ದಾರೆ.
ಇನ್ನು ದರ್ಗಾ ದಲ್ಲಿರುವ ಮಾಣಿಕ್ಯಧಾರಾ ಬಳಿ ಅನಧಿಕೃತ ಅಂಗಡಿಗಳು ಹೆಚ್ಚಾಗಿವೆ. ಅಲ್ಲಿ ಮಾಂಸಹಾರವನ್ನು ತಯಾರಿಸುತ್ತಿರುವುದರಿಂದ ಮಾಣಿಕ್ಯಧಾರಾದಲ್ಲಿ ಸ್ನಾನ ಮಾಡುವವರ ಧಾರ್ಮಿಕ ನಂಬಿಕೆಗೆ ಧಕ್ಕೆ ತರಲಾಗುತ್ತಿದೆ. ಜೊತೆಗೆ ಬಾಬಾ ಬುಡನ್ ದರ್ಗಾ ಕ್ಕೆ ಬರುವ ಪ್ರವಾಸಿಗರನ್ನು ಅಲ್ಲಿನ ಜೀಪ್ ಚಾಲಕರು ಹೆಚ್ಚಿನ ಜನರನ್ನು ಕೂರಿಸಿಕೊಂಡು ಓವರ್ ಲೋಡ್ ಮಾಡಿ ಪ್ರವಾಸಿಗರಿಂದ ಹೆಚ್ಚಿನ ವಸೂಲಿ ಮಾಡಲಾಗುತ್ತಿದೆ. ಇದಕ್ಕೆಲ್ಲಾ ಜಿಲ್ಲಾಡಳಿತ ಕಡಿವಾಣ ಹಾಕಬೇಕೆಂದು ಹಿಂದೂ ಪರ ಸಂಘಟನೆಯ ಕಾರ್ಯಕರ್ತರ ಒತ್ತಾಯಿಸಿದ್ದಾರೆ.
ಒಟ್ಟಾರೆ ದಶಕಗಳಿಂದ ಕರ್ನಾಟಕದ ಅಯೋಧ್ಯೆಯಲ್ಲಿ ನಡೆಯುತ್ತಿರುವ ವಿವಾದ ನ್ಯಾಯಾಲಯದಲ್ಲಿದ್ದು, ಇದಕ್ಕೆ ಬ್ರೇಕ್ ಬೀಳುವ ಲಕ್ಷಣವಂತೂ ಗೋಚರಿಸುತ್ತಿಲ್ಲ. ಇದೀಗ ಹಿಂದೂ ಪರ ಕಾರ್ಯಕರ್ತರು ಔದುಂಬರ ವೃಕ್ಷದ ಪೂಜೆಯ ವಿಚಾರವಾಗಿ ಜಿಲ್ಲಾಡಳಿತದ ಕಡೆಗೆ ಬೊಟ್ಟು ಮಾಡುತ್ತಿದ್ದು, ಇದು ಎಲ್ಲಿಗೆ ಹೋಗಿ ನಿಲ್ಲುತ್ತೆ ಅಂತ ಕಾದು ನೋಡಬೇಕಿದೆ.