ಪಹಲ್ಗಾಮ್ ಉಗ್ರ ದಾಳಿಯ ನಂತರ, ಭಾರತ-ಪಾಕಿಸ್ತಾನದ ನಡುವೆ ಯುದ್ಧದ ಭೀತಿ ಹೆಚ್ಚಾಗಿದೆ. ಕರ್ನಾಟಕ ರಾಜ್ಯ ಗುಪ್ತಚರ ಇಲಾಖೆ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲು ಸೂಚನೆ ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಸಾರ್ವಜನಿಕರ ರಕ್ಷಣೆ ಮತ್ತು ಸುರಕ್ಷತೆಗಾಗಿ ವಿವಿಧ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.
ಬೆಂಗಳೂರು, ಮೇ 09: ಪಹಲ್ಗಾಮ್ ಉಗ್ರರ ದಾಳಿಗೆ ಭಾರತೀಯ ಸೇನೆಯಿಂದ (Indian Army) ಆಪರೇಷನ್ ಸಿಂದೂರ್ ಮೂಲಕ ಪ್ರತ್ಯುತ್ತರ ನೀಡಿದೆ. ಸದ್ಯ ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಯುದ್ಧದ ಭೀತಿ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲು ರಾಜ್ಯ ಗುಪ್ತಚರ ಇಲಾಖೆ ಸುತ್ತೋಲೆ ಹೊರಡಿಸಿದೆ.
ಉಗ್ರ ಕೃತ್ಯಗಳಂತಹ ಪ್ರಕರಣಗಳಲ್ಲಿ ಭಾಗಿಯಾದವರು, ಶಿಕ್ಷೆಗೊಳಗಾದವರು, ಭಯೋತ್ಪಾದನೆ ಮಾಡುವಂತಹ ಕೃತ್ಯಗಳಲ್ಲಿ ಭಾಗಿಯಾದವರು, ಡಿಟೋನೇಟರ್ ನಂತಹ ಉಪಕರಣಗಳ ತಯಾರು ಮಾಡುವ ಸ್ಥಳ, ಮೂಲಭೂತವಾದದ ಮೂಲಕ ಮಾಡುವಂತಹ ಕೃತ್ಯದಲ್ಲಿ ಭಾಗಿಯಾದವರು, ಭಾಷಣ, ಘೋಷಣೆಗಳ ಮೂಲಕ ಶಾಂತಿ ಭಂಗವನ್ನುಂಟು ಮಾಡುವವರು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವವರು, ನಿಮ್ಮ ವ್ಯಾಪ್ತಿಯ ನಗರ ಅಥವಾ ಜಿಲ್ಲೆಗಳಿಗೆ ಭೇಟಿ ನೀಡುವ ಅಪರಿಚಿತರು, ಅನುಮಾನಾಸ್ಪದ ವ್ಯಕ್ತಿಗಳ ಚಲನವಲನ ಮತ್ತು ಅವರು ತಂಗುವ ಸ್ಥಳ ಹಾಗೂ ಹೋಟೆಲ್ಗಳ ಮೇಲೆ ದೇಶದ ಭದ್ರತೆಯ ದೃಷ್ಟಿಯಿಂದ ನಿಗಾ ವಹಿಸಲು ಗುಪ್ತಚರ ಇಲಾಖೆ ಸೂಚನೆ ನೀಡಿದೆ.
ಏನೆಲ್ಲ ಕ್ರಮ ಕೈಗೊಳ್ಳಬೇಕು
- ಸಾರ್ವಜನಿಕ ರಕ್ಷಣೆಯ ಬಗ್ಗೆ, ಅಭ್ಯಾಸ ಮತ್ತು ತಾಲೀಮುಗಳನ್ನು ಏರ್ಪಡಿಸುವುದು.
- ಗ್ರಾಮ ಮತ್ತು ಪಟ್ಟಣಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿರುವ ಸಿವಿಲ್ ಡಿಫೆನ್ಸ್ ವಾರ್ಡನ್ಸ್ ವಾಲೆಂಟಿಯರ್ಸ್, ಹೋಂಗಾರ್ಡ್, ಎನ್.ಸಿ.ಸಿ, ಎನ್.ಎಸ್.ಎಸ್. ಎನ್.ವೈ.ಕೆ.ಎಸ್, ಮತ್ತಿತರೆ ವಿದ್ಯಾರ್ಥಿ ಸಂಘಟನೆಗಳು ಜನರನ್ನು ಜಾಗೃತಗೊಳಿಸುವುದು ಮತ್ತು ಅವರನ್ನು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯಗೊಳಿಸುವುದು.
- ಸಾರ್ವಜನಿಕರಲ್ಲಿ ಶಾಂತವಾಗಿರುವಂತೆ, ಜಾಗೃತವಾಗಿರುವಂತೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ತಮ್ಮೊಂದಿಗೆ ಹಾಗೂ ಮನೆಗಳಲ್ಲಿ ನಿಗಧಿತ ನಗದು, ಇಂಧನ ತುಂಬಿದ ವಾಹನಗಳು, ಸಾಕಷ್ಟು ಔಷಧಿಗಳು, ಕೆಡದೇ ಇರುವಂತಹಹೊದಿಕೆಗಳು ಮತ್ತು ತಮ್ಮ ಮೊಬೈಲ್‌ಗಳನ್ನು ಸದಾ ಜಾರ್ಜ್‌ನಲ್ಲಿ ಇಟ್ಟುಕೊಳ್ಳುವಂತೆ ಹಾಗೂ ಮುಖ್ಯವಾದ ದಾಖಲೆಗಳನ್ನು ಇಟ್ಟುಕೊಳ್ಳುವಂತೆ ಎಚ್ಚರಿಸುವುದು.
- ಘಟಕಾಧಿಕಾರಿಗಳು, ನಿಮ್ಮ ಅಧೀನದಲ್ಲಿರುವ ಅಧಿಕಾರಿಗಳಿಗೆ ಹಾಗೂ ಠಾಣಾಧಿಕಾರಿಗಳಿಗೆ ಈ ಮೇಲ್ಕಂಡ ಎಲ್ಲಾ ಅಂಶಗಳ ಪಾಲನೆ ಮಾಡಲು ನಿರ್ದೇಶನ ನೀಡುವುದು ಹಾಗೂ ಅರಿವು ಮೂಡಿಸುವುದು.
- ಘಟಕಾಧಿಕಾರಿಗಳು ತಮ್ಮ ಘಟಕಗಳಲ್ಲಿನ ವೈರ್‌ಲೆಸ್ ಉಪಕರಣಗಳು, ಕಂಪ್ಯೂಟರ್‌ಗಳನ್ನು ಮತ್ತು ವಾಹನಗಳನ್ನು ಸುಸಜ್ಜಿತವಾಗಿ ಇಟ್ಟುಕೊಳ್ಳುವುದು. ಶಸ್ತ್ರಾಗಾರದಲ್ಲಿನ ಶಸ್ತ್ರಗಳನ್ನು ಮತ್ತು ಮದ್ದುಗುಂಡುಗಳನ್ನು ಸುಸಜ್ಜಿತವಾಗಿ ಇಟ್ಟುಕೊಳ್ಳುವುದು.
ಎಲ್ಲೆಲ್ಲಿ ಕಟ್ಟೆಚ್ಚರ
ಆಡಳಿತ ಕಟ್ಟಡಗಳು, ರಕ್ಷಣಾ ಸ್ಥಾವರಗಳು, ಏರ್ಪೋರ್ಟ್ಗಳು, ವಿಜ್ಞಾನ ಸಂಶೋಧನಾ ಕೇಂದ್ರಗಳು, ಅಣೆಕಟ್ಟುಗಳು, ಉಪಗ್ರಹ ಕೇಂದ್ರ, ಜಲವಿದ್ಯುತ್ ಸ್ಥಾವರಗಳು, ಥರ್ಮಲ್ ಸ್ಥಾವರಗಳು, ಸಾಫ್ಟ್ವೇರ್ ಕಂಪನಿಗಳು, ಪೈಪ್ಲೈನ್ ಕೇಂದ್ರಗಳು, ಕೈಗಾರಿಕೆಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕೇಂದ್ರಗಳು, ಜನಸಂದಣಿ ಸೇರುವ ಶಾಪಿಂಗ್ ಮಾಲ್ಗಳು ಮತ್ತು ಹೋಟೆಲ್ಗಳು, ವಿದೇಶಿ ರಾಜತಾಂತ್ರಿಕ ಕಚೇರಿಗಳು, ವಸತಿ ಮತ್ತಿತರ ಕಟ್ಟಡಗಳು, ಜನ ಸಂದಣಿ ಸೇರುವ ದೇವಾಲಯಗಳು, ಮಸೀದಿ, ಚರ್ಚ್ಗಳು ಮತ್ತು ಜನಸಂದಣಿ ಸೇರುವ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲು ಆದೇಶ ಹೊರಡಿಸಿದೆ.