ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ನಡುವೆ ಪಾಕಿಸ್ತಾನ ಮೂಲದ ವೆಬ್-ಸರಣಿ, ಚಲನಚಿತ್ರ, ಪಾಡ್‌ಕಾಸ್ಟ್ ಸೇರಿದಂತೆ ಎಲ್ಲ ರೀತಿಯ ಕಂಟೆಂಟ್‌ಗಳನ್ನು ತಕ್ಷಣವೇ ನಿಲ್ಲಿಸುವಂತೆ ಒಟಿಟಿ ವೇದಿಕೆಗಳಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (ಐ & ಬಿ) ಗುರುವಾರ ಆದೇಶಿಸಿದೆ.
ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಒಟಿಟಿ ವೇದಿಕೆಗಳು, ಮಾಧ್ಯಮ ಸ್ಟ್ರೀಮಿಂಗ್ ವೇದಿಕೆಗಳು, ಮಧ್ಯವರ್ತಿಗಳ ವೆಬ್-ಸಿರೀಸ್, ಚಲನಚಿತ್ರ, ಹಾಡುಗಳು, ಪಾಡ್‌ಕಾಸ್ಟ್‌ಗಳು ಸೇರಿದಂತೆ ಪಾಕ್ ಮೂಲದ ವಿಷಯಗಳ ಪ್ರಸಾರವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಉಪ ನಿರ್ದೇಶಕ (ಡಿಜಿಟಲ್ ಮಾಧ್ಯಮ) ಕ್ಷಿತಿಜ್ ಅಗರ್ವಾಲ್ ಹೊರಡಿಸಿದ ಆದೇಶದಲ್ಲಿ, ಭಾರತದಲ್ಲಿ ನಡೆದ ಹಲವಾರು ಭಯೋತ್ಪಾದಕ ದಾಳಿಗಳು ಪಾಕಿಸ್ತಾನ ಮೂಲದ ಸರ್ಕಾರ ಮತ್ತು ಸರ್ಕಾರೇತರ ಸಂಪರ್ಕವನ್ನು ಹೊಂದಿವೆ ಆರೋಪಿಸಲಾಗಿದೆ.

ಆದೇಶದಲ್ಲಿ 26 ಪ್ರವಾಸಿಗರನ್ನು ಹತ್ಯೆಗೈದ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ
ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ 26 ಪ್ರವಾಸಿಗರನ್ನು ಹತ್ಯೆಗೈದಿದ್ದರು. ಅದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿ ಮೇ.7ರಂದು ತಡರಾತ್ರಿ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಭಾರತೀಯ ಸೇನೆ ಕ್ಷಿಪಣಿ ದಾಳಿ ನಡೆಸಿದೆ.