ಪಾಕಿಸ್ತಾನದ ಮೇಲೆ ಭಾರತ ಸೇನೆಯಿಂದ ಏರ್‌ಸ್ಟ್ರೈಕ್ ಹಿನ್ನೆಲೆ, ಮುಂಜಾಗ್ರತ ಕ್ರಮವಾಗಿ ಬೆಂಗಳೂರಿನಿಂದ ಬೇರೆ ರಾಜ್ಯಗಳಿಗೆ ತೆರಳಬೇಕಿದ್ದ ವಿಮಾನಗಳನ್ನು ರದ್ದು ಮಾಡಲಾಗಿದೆ. ಈ ಬಗ್ಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಹಾಗಾದರೆ ಯಾವೆಲ್ಲಾ ರಾಜ್ಯಗಳ ವಿಮಾನಗಳನ್ನು ರದ್ದು ಮಾಡಲಾಗಿದೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು, ಮೇ 07: ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ಕ್ಷಿಪಣಿ ದಾಳಿ ಮಾಡುವ ಮೂಲಕ ಪಹಲ್ಗಾಮ್ನ ಉಗ್ರರ ದಾಳಿ ಪ್ರತೀಕಾರವನ್ನು ತೀರಿಸಿಕೊಂಡಿದೆ. ಈ ಮಧ್ಯೆ ಕೇಂದ್ರ ಸರ್ಕಾರದಿಂದ ಸೂಚನೆ ಹಿನ್ನೆಲೆ ಭಾರತದ ವಿವಿಧೆಡೆ ವಿಮಾನ ಸಂಚಾರ ರದ್ದು (Flights Cancelled) ಮಾಡಲಾಗಿದೆ. ಅದೇ ರೀತಿಯಾಗಿ ಬೆಂಗಳೂರಿನಿಂದ ಬೇರೆ ರಾಜ್ಯಗಳಿಗೆ ತೆರಳಬೇಕಿದ್ದ ವಿಮಾನಗಳನ್ನು ರದ್ದು ಮಾಡಲಾಗಿದೆ.
ಸದ್ಯ ದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಿಂದ ಜಮ್ಮು-ಕಾಶ್ಮೀರ, ರಾಜಸ್ಥಾನದ ಜೋಧಪುರ್, ಯುಪಿಯ ಅಯೋಧ್ಯೆ, ಲಖನೌ ಮತ್ತು ಘಾಜಿಯಾಬಾದ್ಗೆ ತೆರಳಬೇಕಿದ್ದ ವಿಮಾನಗಳ ಸಂಚಾರ ರದ್ದು ಮಾಡಲಾಗಿದೆ.
ಈ ಬಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಟ್ವೀಟ್ ಮಾಡಿದ್ದು, ಕೆಲವು ವಾಯುಯಾನ ಪ್ರದೇಶಗಳಲ್ಲಿ ವಿಮಾನ ಹಾರಾಟಕ್ಕೆ ನಿರ್ಬಂಧ ಜಾರಿಯಲ್ಲಿದ್ದು, ಇದು ನಮ್ಮ ಸಂಪರ್ಕ ಜಾಲದಲ್ಲಿನ ಕೆಲವು ವಿಮಾನಗಳ ಸೇವೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ
ಈ ಕಾರಣ, ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುನ್ನ, ತಾವು ಪ್ರಯಾಣ ಮಾಡಲಿರುವ ವಿಮಾನಗಳ ವೇಳಾಪಟ್ಟಿಗಳ ಕುರಿತು ಆಯಾ ವಿಮಾನಯಾನ ಸಂಸ್ಥೆಗಳ ಜೊತೆಗೆ ಸಂಪರ್ಕಿಸಿ ಪರಿಶೀಲಿಸಲು ವಿನಂತಿಸಲಾಗಿದೆ. ಪ್ರಯಾಣಿಕರು ತಮ್ಮ ವಿಮಾನಗಳ ವೇಳಾಪಟ್ಟಿಯಲ್ಲಿನ ಬದಲಾವಣೆಗಳನ್ನು ಆಯಾ ವಿಮಾನಯಾನ ಸಂಸ್ಥೆಗಳ ಅಧಿಕೃತ ಟ್ವಿಟರ್ (ಎಕ್ಸ್) ಖಾತೆಗಳ ಮೂಲಕ ಪಡೆಯಬಹುದಾಗಿದೆ ಎಂದು ತಿಳಿಸಿದೆ.
ಮಂಗಳೂರು ಏರ್ಪೋರ್ಟ್ನಿಂದ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ
ಕ್ಷಿಪಣಿ ದಾಳಿ ಹಿನ್ನೆಲೆ ಕೆಲ ವಾಯು ಮಾರ್ಗಗಳಲ್ಲಿ ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ ಎಂದು ಮಂಗಳೂರು ಏರ್ಪೋರ್ಟ್ ಪ್ರಯಾಣಿಕರಿಗೆ ಸೂಚನೆ ನೀಡಿದೆ. ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು ಪರಿಶೀಲನೆ ಮಾಡಿ ತೆರಳುವಂತೆ ಮಂಗಳೂರು ವಿಮಾನ ನಿಲ್ದಾಣದ ಆಡಳಿತ ವಿಭಾಗದಿಂದ ಪ್ರಕಟಣೆ ಹೊರಡಿಸಲಾಗಿದೆ