ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆಯ ನಂತರ ಮಂಗಳೂರಿನಲ್ಲಿ ಪ್ರತೀಕಾರದ ಬೆದರಿಕೆಗಳು ಹೆಚ್ಚಾಗಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂ ಮುಖಂಡರನ್ನು ಹಾಗೂ ಮುಸ್ಲಿಂ ನಾಯಕರನ್ನು ಕೊಲ್ಲುವ ಬೆದರಿಕೆಗಳು ಹೆಚ್ಚುತ್ತಿವೆ. ಇದರಿಂದಾಗಿ ಪೊಲೀಸರು ಹೈ ಅಲರ್ಟ್ ಆಗಿದ್ದು, ರಾತ್ರಿ 9:30 ರ ನಂತರ ಅಂಗಡಿಗಳು ಮತ್ತು ವ್ಯಾಪಾರ ಮಳಿಗೆಗಳನ್ನು ಮುಚ್ಚಿಸುವಂತೆ ಆದೇಶಿಸಿದ್ದಾರೆ. ಕೆಲವು ದಿನಗಳ ಕಾಲ ಈ ಕ್ರಮ ಮುಂದುವರಿಯಬಹುದು ಎನ್ನಲಾಗಿದೆ.

ಮಂಗಳೂರು, ಮೇ 6: ಕರಾವಳಿಯಲ್ಲಿ, ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (Dakshina Kannada) ರೌಡಿ ಶೀಟರ್ ಸುಹಾಸ್ ಶೆಟ್ಟಿ (Suhas Shetty) ಕೊಲೆಯ ಬಳಿಕ ಪ್ರತೀಕಾರದ ಹತ್ಯೆ ಬಗ್ಗೆ ಜಾಲತಾಣದಲ್ಲಿ ಪೋಸ್ಟ್ಗಳನ್ನು ಪ್ರಕಟಿಸಿರುವ ಕಾರಣ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ‘ಎರಡೂ ಧರ್ಮದ ನಾಯಕರನ್ನು ಟಾರ್ಗೆಟ್ ಮಾಡಿ ಸಂದೇಶ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರದಾದ್ಯಂತ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಸೋಮವಾರ ರಾತ್ರಿ 9.30ರೊಳಗೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗಿದೆ

ಹೋಟೆಲ್, ಪಬ್, ಬಾರ್ಗಳು, ಫುಟ್ಪಾತ್ ವ್ಯಾಪಾರವನ್ನು ರಾತ್ರಿ 9.30 ರ ಒಳಗೆ ಬಂದ್ ಮಾಡಿಸಲಾಗುತ್ತಿದೆ. ಜನರನ್ನು ಬೇಗನೆ ಮನೆ ಸೇರಿಸುವ ಯತ್ನದಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲವು ದಿನಗಳ ಕಾಲ ಇದನ್ನೇ ಮುಂದುವರಿಸುವ ಸಾಧ್ಯತೆ ಇದೆ ಎಂದೂ ಮೂಲಗಳು ತಿಳಿಸಿವೆ.

ಪ್ರತೀಕಾರ ಯತ್ನ: ರೌಡಿಶೀಟರ್ ಕೋಡಿಕೆರೆ ಲೋಕೇಶ್ ಬಂಧನ
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯಾದ ದಿನ ರಾತ್ರಿ ರೌಡಿಶೀಟರ್ ಕೋಡಿಕೆರೆ ಲೋಕೇಶ್ ಹಾಗೂ ಗ್ಯಾಂಗ್ ಪ್ರತೀಕಾರಕ್ಕೆ ಯತ್ನಿಸಿತ್ತು. ಕುಂಟಿಕಾನ ಬಳಿ ಉಳ್ಳಾಲ ನಿವಾಸಿ ಲುಕ್ಮಾನ್ ಎಂಬ ಮೀನಿನ ವ್ಯಾಪಾರಿಯನ್ನು ಅಟ್ಟಾಡಿಸಿ ಕೊಲೆಗೆ ಯತ್ನಿಸಿತ್ತು. ಇನ್ನೋವಾ ಕಾರಿನಲ್ಲಿ ಬಂದು ದಾಳಿ ಮಾಡಿತ್ತು. ಇದೀಗ ಕಾವೂರು ಪೊಲೀಸರು ಲೋಕೇಶ್ನನ್ನು ಬಂಧಿಸಿದ್ದಾರೆ.
ಸುಹಾಸ್ ಶೆಟ್ಟಿ ಕೊಲೆ ನಂತರ ಮಂಗಳೂರಿನ ಮೂರು ಕಡೆ ಚಾಕು ಇರಿತ ಪ್ರಕರಣಗಳು ವರದಿಯಾಗಿದ್ದವು. ಒಟ್ಟಾರೆಯಾಗಿ 7 ಮಂದಿಯನ್ನು ಬಂಧಿಸಲಾಗಿತ್ತು.