ಸುಹಾಸ್ ಶೆಟ್ಟಿ ಹತ್ಯೆ ಸಂಬಂಧ ಹಿಂದೂ ಜಾಗರಣ ವೇದಿಕೆ ಗಂಭೀರ ಆರೋಪಗಳನ್ನು ಮಾಡಿದೆ. 50 ಲಕ್ಷ ರೂಪಾಯಿಗೂ ಅಧಿಕ ಫಂಡ್‌ನಿಂದ ನಡೆದ ಈ ಕೃತ್ಯದಲ್ಲಿ ಬಜ್ಪೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ರಶೀದ್ ಅವರ ಪಾತ್ರದ ಬಗ್ಗೆಆರೋಪ ಮಾಡಿದೆ

ಮಂಗಳೂರು, ಮೇ 5: ಮಂಗಳೂರು ನಗರದ ಬಜ್ಪೆ ಬಳಿ ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ಹಿಂದೂ ಜಾಗರಣ ವೇದಿಕೆ (Hindu Jagaran Vedike) ಗಂಭೀರ ಆರೋಪ ಮಾಡಿದೆ. ಕೊಲೆಯ ಹಿಂದೆ ಕಾಣದ ಕೈಗಳ ಕುತಂತ್ರ ಇದೆ. 50 ಲಕ್ಷ ರೂಪಾಯಿಗೂ ಹೆಚ್ಚು ಫಂಡ್ ಮಾಡಲಾಗಿದೆ. ಬಜ್ಪೆ ಠಾಣೆಯ ಹೆಡ್ ಕಾನ್ಸ್ಟೇಬಲ್ ರಶೀದ್ ಕೂಡ ಕೃತ್ಯದಲ್ಲಿ ಪರೋಕ್ಷವಾಗಿ ಕೈಜೋಡಿಸಿದ ಅನುಮಾನವಿದೆ ಎಂದು ಹಿಂದೂ ಜಾಗರಣ ವೇದಿಕೆಯ ಮುಖಂಡ ಕೆಟಿ ಉಲ್ಲಾಸ್ ಆರೋಪ ಮಾಡಿದ್ದಾರೆ.

ಸುಹಾಸ್ ಕೊಲೆ ಸಂಬಂಧ ಬಂಧನವಾಗಿರುವ ಆರೋಪಿಗಳು ನೈಜ ಆರೋಪಿಗಳು ಹೌದೇ ಎಂಬ ಬಗ್ಗೆ ಸುಹಾಸ್ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣ ಸಂಬಂಧ ನಮಗೂ ಒಂದಿಷ್ಟು ಅನುಮಾನಗಳಿವೆ. ಈ ಹತ್ಯೆ ಫಾಜಿಲ್ ಕೊಲೆಗೆ ಪ್ರತೀಕಾರ ಎಂದು ಪೊಲೀಸ್ ಇಲಾಖೆ ಹೇಳಿದೆ. ಆದರೆ, ಈ ಪ್ರಕರಣದ ಹಿಂದೆ ಕೇವಲ ಫಾಜಿಲ್ ತಮ್ಮ ಮಾತ್ರ ಇಲ್ಲ. ದೊಡ್ಡ ಶಕ್ತಿಯೊಂದು ಇದಕ್ಕೆ 50 ಲಕ್ಷ ರೂಪಾಯಿಗೂ ಹೆಚ್ಚು ಫಂಡ್ ಮಾಡಿರುವ ಅನುಮಾನ ಇದೆ. ನಿಷೇಧಿತ ಪಿಎಫ್ಐ ಸಂಘಟನೆ ಮೇಲೆ ಅನುಮಾನ ಇದೆ. ಈ ಹಿಂದೆ ಮಾಡುತ್ತಿದ್ದ ಟಾರ್ಗೆಟ್ ಕಿಲ್ಲಿಂಗ್ ಈ ಕೇಸ್ನಲ್ಲೂ ಗೋಚರಿಸುತ್ತಿದೆ ಎಂದು ಕೆಟಿ ಉಲ್ಲಾಸ್ ಹೇಳಿದ್ದಾರೆ.

ಬಜ್ಪೆ ಹೆಡ್ಕಾನ್ಸ್ಟೇಬಲ್ ರಶೀದ್ ವಿರುದ್ಧ ಗಂಭೀರ ಆರೋಪ
ಮಂಗಳೂರಿನ ಬಜ್ಪೆ ಠಾಣೆಯ ಹೆಡ್ ಕಾನ್ಸ್ಟೇಬಲ್ ರಶೀದ್ ಈ ಕೃತ್ಯದ ಹಿಂದೆ ಇರುವ ಅನುಮಾನವಿದೆ. ಸುಹಾಸ್ ಶೆಟ್ಟಿ ಸ್ನೇಹಿತರು ಆ ಬಗ್ಗೆ ಆರೋಪ ಮಾಡುತ್ತಿದ್ದಾರೆ ಎಂದು ಕೆಟಿ ಉಲ್ಲಾಸ್ ಹೇಳಿದ್ದಾರೆ. ಸುಹಾಸ್ ಶೆಟ್ಟಿಗೆ ರಶೀದ್ ಬಹಳಷ್ಟು ಟಾರ್ಚರ್ ಕೊಡುತ್ತಿದ್ದರು. ಮೂರು ದಿನದ ಹಿಂದಷ್ಟೇ ಶಸ್ತ್ರಾಸ್ತ್ರ ತೆಗೆಸಿದ್ದರು. ಆ ಸುದ್ದಿ ಆರೋಪಿಗಳಿಗೆ ಹೇಗೆ ಗೊತ್ತಾಯಿತು? ಬಲವಾದ ಮಾಹಿತಿಯನ್ನು ರಶೀದ್ ಆರೋಪಿಗಳಿಗೆ ನೀಡಿರಬೇಕು. ರಶೀದ್ ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಉಲ್ಲಾಸ್ ಆಗ್ರಹಿಸಿದ್ದಾರೆ.

ರಂಜಿತ್ ಮತ್ತು ನಾಗರಾಜ್ ಅವರನ್ನು ಈ ಪ್ರಕರಣದಲ್ಲಿ ಸೇರಿಸಿದ್ದಾರೆ. ಸುಹಾಸ್ಗೂ ಇವರಿಗೂ ಯಾವುದೇ ಸಂಬಂಧವಿಲ್ಲ. ಕ್ರಿಮಿನಲ್ ಚಟುವಟಿಕೆಯಲ್ಲಿ ಇವರು ಭಾಗವಹಿಸಿದ ನಿದರ್ಶನ ಇಲ್ಲ. ಸುಳ್ಳು ಹೇಳಿ ಅವರನ್ನು ಕರೆಸಿರುವ ಸಾಧ್ಯತೆಯಿದೆ. ಹಿಂದುಗಳು ಇದ್ದಾರೆ ಎಂದು ತೋರಿಸಲು ಅವರನ್ನು ಕರೆಸಿರುವ ಸಾಧ್ಯತೆಯಿದೆ. ಪಿಎಫ್ಐ ಬ್ಯಾನ್ ಬಳಿಕ ಹಿಂದೂಗಳ ಜೊತೆ ಸೇರಿ ಈ ರೀತಿ ಹತ್ಯೆ ಮಾಡುತ್ತಾರೆ ಎಂಬ ಮಾಹಿತಿ ಇತ್ತು. ಎನ್ಐಎಗೆ ಈ ಪ್ರಕರಣಗಳು ಹೋಗಬಾರದೆಂದು ಈ ರೀತಿ ಮಾಡುವ ಅನುಮಾನವಿದೆ. ಇದು ಕೇವಲ ಪಾಜಿಲ್ ಹತ್ಯೆಗೆ ಪ್ರತಿಕಾರ ಅಲ್ಲ. ಇದು ನಿಷೇಧಿತ ಪಿಎಫ್ಐ ಸಂಘಟನೆಯ ಸಂಚಿನ ಭಾಗ.ಎನ್ಐ ತನಿಖೆ ಆಗಬೇಕು. ಕರ್ನಾಟಕ ಸರ್ಕಾರದ ತನಿಖೆ, ಗೃಹಸಚಿವರ ಶ್ರದ್ಧೆ ಬಗ್ಗೆ ನಮಗೆ ವಿಶ್ವಾಸವಿಲ್ಲ ಎಂದು ಅವರು ಹೇಳಿದ್ದಾರೆ