ಮಂಗಳೂರು:ಮೇ ,02 : ಕೀರ್ತಿ ಮತ್ತು ಫಾಝಿಲ್ ಕೊಲೆ ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳ ಪ್ರಮುಖ ಆರೋಪಿ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಯ ನಂತರ ಬಿಜೆಪಿ ಹಾಗೂ ಸಂಘಪರಿವಾರದ ಕಿಡಿಗೇಡಿ ಗೂಂಡಾಗಳು ಅಲ್ಲಲ್ಲಿ ಚೂರಿ ಇರಿತ ನಡೆಸಿ ಮುಸ್ಲಿಮರ ಕೊಲೆ ನಡೆಸಿ ಜಿಲ್ಲೆಯಲ್ಲಿ ಭಯದ ವಾತಾವರಣ ನಿರ್ಮಿಸಲು ಪ್ರಯತ್ನ ಮಾಡುತ್ತಿದೆ. ಜಿಲ್ಲೆಯಲ್ಲಿ ನಿಷೇದಾಜ್ಞೆ ಜಾರಿಯಿದ್ದರೂ ಗಲಭೆಗೆ ಪ್ರಚೋದಿಸುವ ಕೆಲಸ ನಡೆಯುತ್ತಿದೆ. ಆದರೂ ಯಾವುದೇ ಕ್ರಮ ಕೈ ಗೊಳ್ಳಲಾಗದೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಂಪೂರ್ಣ ವೈಫಲ್ಯತೆ ಕಂಡಿದೆ ಎಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ರಾತ್ರಿ ಫಾಝಿಲ್ ಕೊಲೆ ಆರೋಪಿ ರೌಡಿಶೀಟರ್ ಸುಹಾಸ್ ಶೆಟ್ಟಿಯ ಕೊಲೆ ನಡೆದಿದೆ. ಕೊಲೆಯನ್ನು ಯಾರು ಮಾಡಿದರೂ ಒಪ್ಪತಕ್ಕದಲ್ಲ. ಕಾನೂನು ರೀತಿಯಲ್ಲಿ ಶಿಕ್ಷೆ ಆಗಬೇಕೇ ಹೊರತು ಕೊಲೆಗೆ ಪ್ರತಿ ಕೊಲೆ ಮಾಡುತ್ತಾ ಹೋದರೆ ಏನಾಗಬಹುದು? ಕೊಲೆ ನಡೆದ ಕೂಡಲೇ ಬಿಜೆಪಿ ಸಂಘಪರಿವಾರ ನಾಯಕರು ಮಾಧ್ಯಮದ ಮೂಲಕ ಕೊಲೆಯನ್ನು ಎಸ್‌ಡಿಪಿಐ ತಲೆಗೆ ಹಾಕಲು ಪ್ರಯತ್ನಿಸಿರುವುದು ಖಂಡನೀಯ. ಯಾವುದೇ ಘಟನೆ ನಡೆದರೂ ಅದನ್ನು ಎಸ್‌ಡಿಪಿಐ ತಲೆಗೆ ಹಾಕುವುದು ಅವರಿಗೆ ವಾಡಿಕೆಯಾಗಿ ಬಿಟ್ಟಿದೆ ಎಂದು ಅವರು ಕಿಡಿಕಾರಿದರು.

ಕೊಲೆಯ ನಂತರ ಜಿಲ್ಲಾ ಬಂದ್ ಗೆ ಕರೆ ನೀಡಿದ್ದ ಹಿಂದುತ್ವವಾದಿ ಸಂಘಟನೆಗಳು ಕಣ್ಣೂರು, ಕಲ್ಲಾಪು, ಕೊಂಚಾಡಿ, ಅತ್ರಾಡಿ ಸೇರಿದಂತೆ ಹಲವಾರು ಕಡೆಗಳಲ್ಲಿ ಮುಸ್ಲಿಮರ ಮೇಲೆ ಚೂರಿ ಇರಿತ, ಕೊಲೆ ಯತ್ನ ನಡೆಸಿದೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಬಿಜೆಪಿ ಶಾಸಕರಾದ ವೇದವ್ಯಾಸ್ ಕಾಮತ್, ಹರೀಶ್ ಪೂಂಜಾ, ಭರತ್ ಶೆಟ್ಟಿ, ಕಲ್ಲಡ್ಕ ಭಟ್, ಶರಣ್ ಪಂಪ್‌ವೆಲ್, ಪುತ್ತಿಲ ನಂತಹ ಹಿಂದುತ್ವವಾದಿ ನಾಯಕರು ಪ್ರಚೋದನಕಾರಿ ಭಾಷಣ ಹಾಗೂ ಹೇಳಿಕೆ ಮೂಲಕ ಜಿಲ್ಲೆಯ ಶಾಂತಿ ಸುವ್ಯವಸ್ಥೆಯನ್ನು ಕದಡಲು ಇನ್ನಿಲ್ಲದ ಪ್ರಯತ್ನ ಪಡುತ್ತಿದ್ದಾರೆ. ಹಲವಾರು ಭಜರಂಗದಳದ ಕಾರ್ಯಕರ್ತರು ತಲ್ವಾರ್ ಹಿಡಿದುಕೊಂಡು ಸಾರ್ವಜನಿಕವಾಗಿ ಸುತ್ತುವುದು, ಅಮಾಯಕರ ಮೇಲೆ ದಾಳಿ ನಡೆಸುವುದು, ಮಾತ್ರವಲ್ಲದೆ ಪೋಲಿಸರ ಸಮ್ಮುಖದಲ್ಲಿ ಬಲಾತ್ಕಾರದ ಬಂದ್, ವಾಹನಗಳ ಮೇಲೆ ಕಲ್ಲು ತೂರಾಟ ಮಾಡುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಜಿಲ್ಲೆಯನ್ನು ಸಂಘಪರಿವಾರಕ್ಕೆ ಬೇಕಾದ ಹಾಗೆ ಉಪಯೋಗಿಸಲು ಬಿಟ್ಟಂತೆ ಕಾಣುತ್ತಿದೆ. ಅದಲ್ಲದೇ ಪೊಲೀಸ್ ಇಲಾಖೆಯ ನಿಷೇದಾಜ್ಞೆ ನಡುವೆಯೂ ಸುಹಾಸ್ ಶೆಟ್ಟಿಯ ಶವ ಯಾತ್ರೆ ನಡೆದಿದೆ. ಹಾಗಾದರೆ ಪೊಲೀಸ್ ಇಲಾಖೆಯ ನಿಷೇದಾಜ್ಞೆ ಸಂಘಪರಿವಾರಕ್ಕೆ ಅನ್ವಯಾವುದಿಲ್ವಾ ಎಂದು ಅವರು ಪ್ರಶ್ನಿಸಿದ್ದಾರೆ.

ಕಳೆದ ಹತ್ತದಿನೈದು ದಿನಗಳಿಂದ ಸಂಘಪರಿವಾರ ನಾಯಕರು ಪ್ರಚೋದನಕಾರಿ ಭಾಷಣ, ಹೇಳಿಕೆ ನೀಡುತ್ತಿದ್ದರೂ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಅದರ ನಡುವೆ ಕುಡುಪುವಿನಲ್ಲಿ ಮುಸ್ಲಿಂ ಯುವಕನ ಮೇಲೆ ಗುಂಪು ದಾಳಿ ನಡೆಸಿ ಸಂಘ ಪರಿವಾರ ಹತ್ಯೆ ನಡೆಸಿದೆ. ಇದೀಗ ಬೀದಿ ರೌಡಿಯೊಬ್ಬನ ಕೊಲೆ ನಡೆದಿದೆ. ದ.ಕ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ಪೊಲೀಸ್ ಇಲಾಖೆ ಹೆಚ್ಚುವರಿ ಸಿಬ್ಬಂದಿಗಳನ್ನು ಕರೆಸಿ ನಾಕಾಬಂದಿ ಅಧಿಕಗೊಳಿಸಿ ಪ್ರತೀ ವಾಹನಗಳನ್ನು ಪರಿಶೀಲನೆ ನಡೆಸಬೇಕು. ನಿಷೇದಾಜ್ಞೆ ನಡುವೆ ನಡೆದ ಎಲ್ಲಾ ಪ್ರಕರಣಗಳ ವಿರುದ್ಧ ಪೊಲೀಸ್ ಇಲಾಖೆ ಸುಮೊಟೊ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಬಂದ್ ನಡೆಸಿ ಅದರಿಂದ ಅನಾಹುತಗಳಾದರೆ ಅದಕ್ಕೆ ಅದರ ಆಯೋಜಕರನ್ನೇ ಹೊಣೆಯಾಗಿಸಿ ಅವರಿಂದಲೇ ನಷ್ಟ ಪರಿಹಾರ ಬರಿಸಬೇಕೆಂದು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಆದೇಶವೇ ನೀಡಿದೆ. ಈ ನಿಟ್ಟಿನಲ್ಲಿ ಕೂಡ ಪೊಲೀಸ್ ಇಲಾಖೆ ಕಾರ್ಯಪ್ರವೃತರಾಗಬೇಕು. ಅದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ಸಂಘಪರಿವಾರ ಕಾರ್ಯಕರ್ತರು ಪ್ರಚೋದನಕಾರಿ ಪೋಸ್ಟ್, ಕಾಮೆಂಟ್, ಹಾಗೂ ಕೊಲೆ ಬೆದರಿಕೆಗಳನ್ನು ಹಾಕುತ್ತಿದ್ದಾರೆ ಅಂತಹವರ ವಿರುದ್ಧ ಸೈಬರ್ ಕ್ರೈಮ್ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕು. ಬಂದ್ ಹೆಸರಲ್ಲಿ ನಡೆಸಿದ ಎಲ್ಲಾ ಅಹಿತಕರ ಘಟನೆಯಲ್ಲಿ ಭಾಗಿಯಾದವರ ಮೇಲೂ, ಕೊಲೆ ಯತ್ನ ನಡೆಸಿದವರನ್ನು ಪತ್ತೆ ಹಚ್ಚಿ ಅವರ ಮೇಲೆ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಿ ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
