ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam) ಭಯೋತ್ಪಾದಕರು ಗುಂಡಿನ ದಾಳಿಯಲ್ಲಿ ಸ್ಥಳೀಯ ಕುದುರೆ ರೈಡರ್ (Horse Rider) ಒಬ್ಬರು ಬಲಿಯಾಗಿದ್ದಾರೆ.
ಸೈಯದ್ ಆದಿಲ್ ಹುಸೇನ್ ಶಾ (Syed Adil Hussain Shah) ಮೃತಪಟ್ಟ ವ್ಯಕ್ತಿ. ಪ್ರವಾಸಿಗರ ಮೇಲೆ ದಾಳಿ ನಡೆಸುತ್ತಿದ್ದಾ ಸೈಯದ್ ಧೈರ್ಯ ಮಾಡಿ ಓರ್ವನ ಉಗ್ರನಿಂದ ರೈಫಲ್ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಸೈಯದ್ ಮೇಲೆ ಗುಂಡು ಹಾರಿಸಿದ್ದಾರೆ.

ಸೈಯದ್ ಆದಿಲ್ ಪಹಲ್ಗಾಮ್ ಕಾರು ಪಾರ್ಕಿಂಗ್ ಸ್ಥಳದಿಂದ ಕುದುರೆಯ ಮೇಲೆ ಪ್ರವಾಸಿಗರನ್ನು ಬೈಸರನ್‌ಗೆ ಕರೆದುಕೊಂಡು ಬರುವ ಕೆಲಸ ಮಾಡುತ್ತಿದ್ದರು. ನರಮೇಧದಲ್ಲಿ ಸೈಯದ್ ಜೊತೆ 25 ಪುರುಷ ಪ್ರವಾಸಿಗರನ್ನು ಉಗ್ರರು ಹತ್ಯೆ ಮಾಡಿದ್ದಾರೆ

ಕುಟುಂಬದ ಏಕೈಕ ಜೀವನಾಧಾರ ಸೈಯದ್ ಆಗಿದ್ದರು. ಇವರು ವೃದ್ಧ ಪೋಷಕರು, ಹೆಂಡತಿ ಮತ್ತು ಮಕ್ಕಳನ್ನು ಅಗಲಿದ್ದಾರೆ.

ಸೈಯದ್ ತಂದೆ ಹೈದರ್ ಸುದ್ದಿ ಸಂಸ್ಥೆಯ ಜೊತೆ ಮಾತನಾಡಿ, ನನ್ನ ಮಗ ನಿನ್ನೆ ಕೆಲಸಕ್ಕೆಂದು ಪಹಲ್ಗಾಮ್‌ಗೆ ಹೋಗಿದ್ದ ಮಧ್ಯಾಹ್ನ 3 ಗಂಟೆ ಸುಮಾರಿಗೆ ದಾಳಿಯ ಬಗ್ಗೆ ನಮಗೆ ತಿಳಿಯಿತು. ನಾವು ಅವನಿಗೆ ಕರೆ ಮಾಡಿದೆವು, ಆದರೆ ಅವನ ಫೋನ್ ಸ್ವಿಚ್ ಆಫ್ ಆಗಿತ್ತು. ನಂತರ ಸಂಜೆ 4:40ಕ್ಕೆ ಅವನ ಫೋನ್ ಆನ್ ಆಯ್ತು. ಆದರೆ ಯಾರೂ ಉತ್ತರಿಸಲಿಲ್ಲ. ನಾವು ಪೊಲೀಸ್ ಠಾಣೆಗೆ ಧಾವಿಸಿದೆವು. ಆಗ ಅವನು ಮೃತ ಆಗಿದ್ದು ಗೊತ್ತಾಯಿತು ಎಂದು ತಿಳಿಸಿದರು.
