ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ 28 ಜನರು ಪ್ರಾಣ ಕಳೆದುಕೊಂಡಿರುವ ಹಿನ್ನೆಲೆ, ಭಯೋತ್ಪಾದನೆ ವಿರುದ್ಧ ಬಲವಾದ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ಜಮ್ಮು ಕಾಶ್ಮೀರದ ಹಲವಾರು ರಾಜಕೀಯ ಪಕ್ಷಗಳು ಬುಧವಾರ (ಏ.23) ‘ಕಾಶ್ಮೀರ ಬಂದ್’ಗೆ ಕರೆ ನೀಡಿವೆ.

ಆಡಳಿತರೂಢ ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (ಜೆಕೆಎನ್‌ಸಿ) ಪಕ್ಷವು ಭಯೋತ್ಪಾದಕ ದಾಳಿಯಲ್ಲಿ ಸಾವಿಗೀಡಾದವರು ಮತ್ತು ಅವರ ದುಖಃತಪ್ತ ಕುಟುಂಬಗಳಿಗೆ ಬೆಂಬಲ ಸೂಚಿಸುವ ಸಂಕೇತವಾಗಿ ಬಂದ್ ಘೋಷಣೆ ಮಾಡಲಾಗಿದೆ. ಅದನ್ನು ಸಂಪೂರ್ಣ ಯಶಸ್ವಿಗೊಳಿಸುವಂತೆ ಜನರಿಗೆ ಮನವಿ ಮಾಡಿದೆ.
“ಈ ಬಂದ್ ಕೇವಲ ಒಂದು ಪ್ರತಿಭಟನೆಯಲ್ಲ, ಬದಲಾಗಿ ಅರ್ಥಹೀನ ಹಿಂಸಾಚಾರದ ವಿರುದ್ಧ ನೋವು ಮತ್ತು ಆಕ್ರೋಶದ ಸಾಮೂಹಿಕ ಅಭಿವ್ಯಕ್ತಿಯಾಗಿದೆ” ಎಂದು ಜೆಕೆಎನ್‌ಸಿ ಒತ್ತಿ ಹೇಳಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಪಕ್ಷವು ತೀವ್ರವಾಗಿ ಖಂಡಿಸುತ್ತದೆ. ಅಧ್ಯಕ್ಷರ ಸೂಚನೆಯ ಮೇರೆಗೆ, ಪಕ್ಷವು ಕಾಶ್ಮೀರ ಬಂದ್ ಅನ್ನು ಬೆಂಬಲಿಸುತ್ತದೆ. ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರು ಕರೆ ನೀಡಿರುವ ಈ ಬಂದ್ ಸಂಪೂರ್ಣ ಯಶಸ್ವಿಯಾಗುವಂತೆ ಸಹಕರಿಸಲು ನಾವು ಜಮ್ಮು ಕಾಶ್ಮೀರದ ಜನರಿಗೆ ಮನವಿ ಮಾಡುತ್ತೇವೆ” ಎಂದು ಜೆಕೆಎನ್‌ಸಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದೆ
ಜಮ್ಮು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕೂಡ ಭಯೋತ್ಪಾದಕ ದಾಳಿಯಲ್ಲಿ ಸಾವಿಗೀಡಾದವರ ಕುಟುಂಬಗಳೊಂದಿಗೆ ಒಗ್ಗಟ್ಟು ವ್ಯಕ್ತಪಡಿಸಿದ್ದಾರೆ ಮತ್ತು ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ.

“ಇದು ನಮ್ಮೆಲ್ಲರ ಮೇಲಿನ ದಾಳಿ” ಎಂದು ಕರೆದಿರುವ ಮೆಹಬೂಬಾ ಮುಫ್ತಿ “ದಿ ಚೇಂಬರ್ ಅಂಡ್ ಬಾರ್ ಅಸೋಸಿಯೇಷನ್ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲಿನ ಭೀಕರ ಭಯೋತ್ಪಾದಕ ದಾಳಿಯನ್ನು ಖಂಡಿಸಿ ನಾಳೆ ಸಂಪೂರ್ಣ ಬಂದ್‌ಗೆ ಕರೆ ನೀಡಿದೆ. ಕ್ರೂರ ದಾಳಿಯಲ್ಲಿ ಸಾವನ್ನಪ್ಪಿದ ಮುಗ್ಧ ಜೀವಗಳಿಗೆ ಗೌರವ ಸಲ್ಲಿಸುವ ಸಂಕೇತವಾಗಿ ಈ ಬಂದ್‌ಗೆ ಬೆಂಬಲ ನೀಡಲು ಎಲ್ಲಾ ಕಾಶ್ಮೀರಿಗಳಿಗೆ ನಾನು ಮನವಿ ಮಾಡುತ್ತೇನೆ. ಇದು ಕೇವಲ ಕೆಲವು ಆಯ್ದ ಜನರ ಮೇಲಿನ ದಾಳಿಯಲ್ಲ, ಇದು ನಮ್ಮೆಲ್ಲರ ಮೇಲಿನ ದಾಳಿ. ಜನರ ದುಃಖ ಮತ್ತು ಆಕ್ರೋಶದ ಜೊತೆ ನಾವೂ ಇದ್ದೇವೆ. ಅಮಾಯಕರ ಹತ್ಯಾಕಾಂಡವನ್ನು ಖಂಡಿಸಿ ಈ ಬಂದ್‌ಗೆ ಸಂಪೂರ್ಣ ಬೆಂಬಲ ನೀಡುತ್ತೇವೆ” ಎಂದು ಮುಫ್ತಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜಮ್ಮು ಕಾಶ್ಮೀರ ವಿದ್ಯಾರ್ಥಿ ಸಂಘ (ಜೆಕೆಎಸ್ಎ) ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ‘ಜಮ್ಮು ಮತ್ತು ಕಾಶ್ಮೀರದ ಆತ್ಮದ ಮೇಲಿನ ದಾಳಿ’ ಎಂದು ಕರೆದಿದ್ದು, ಬಂದ್‌ಗೆ ತನ್ನ ಬೆಂಬಲ ವ್ಯಕ್ತಪಡಿಸಿದೆ.

“ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ, ದಿ ಚೇಂಬರ್ ಅಂಡ್ ಬಾರ್ ಅಸೋಸಿಯೇಷನ್ ಜಮ್ಮು ನಾಳೆ ಕರೆ ನೀಡಿರುವ ಬಂದ್‌ಗೆ ಜೆಕೆಎಸ್ಎ ಸಂಪೂರ್ಣ ಬೆಂಬಲ ನೀಡುತ್ತದೆ. ಈ ದುರಂತ ದಾಳಿ ಕೇವಲ ಕೆಲವು ವ್ಯಕ್ತಿಗಳ ಮೇಲಿನ ದಾಳಿಯಲ್ಲ; ಇದು ಜಮ್ಮು ಮತ್ತು ಕಾಶ್ಮೀರದ ಆತ್ಮದ ಮೇಲಿನ ದಾಳಿಯಾಗಿದೆ” ಎಂದು ಜೆಕೆಎಸ್ಎ ಎಕ್ಸ್‌ನಲ್ಲಿ ಬರೆದುಕೊಂಡಿದೆ.