ಬೆಳ್ತಂಗಡಿ (ಏ.20): ಹಿಂದೂ ಸಮಾಜವನ್ನು ವಿಸ್ತರಿಸುವ ಕೆಲಸ ಆಗಬೇಕಾಗಿದೆ. ಅದಕ್ಕಾಗಿ ಹಿಂದೂಗಳು ಮತಾಂತರದ ಕಾನೂನನ್ನು ಸಮರ್ಥವಾಗಿ ಬಳಸಿಕೊಳ್ಳೋಣ ಎಂದು ಜನರನ್ನು ಕೋಮು ಭಾವನೆ ಮೂಲಕ ವಿಭಜಿಸುವ ಕೋಮುವ್ಯಾದಿ ಸೂಲಿಬೆಲೆ ಹೇಳಿದರು

ಅವರು ಉಜಿರೆಯಲ್ಲಿ ಶನಿವಾರ ನಡೆದ ಶ್ರೀರಾಮೋತ್ಸವದಲ್ಲಿ ಮಾತನಾಡಿದರು.ಧರ್ಮಕ್ಕೆ ಆಘಾತವಾದಾಗ ಸುಮ್ಮನೆ ಕುಳಿತುಕೊಳ್ಳುವವರು ಧರ್ಮದ್ರೋಹಿಗಳು. ದುಷ್ಟ ಶಕ್ತಿಗಳ ನಾಶಕ್ಕೆ ಹನುಮಂತನಂತೆ ಬಲವಾಗಿ ನಿಲ್ಲಬೇಕಾದ ಅವಶ್ಯಕತೆ ಇದೆ. ಸನಾತನ ಧರ್ಮವೆಂಬುದು ಕೇವಲ ಪ್ರಾಚೀನವಾದಷ್ಟೇ ಅಲ್ಲ, ಜಗತ್ತಿನ ಹಳೆಯ ಧರ್ಮವಾಗಿದೆ. ಹೀಗಾಗಿ ಹಿಂದು ಧರ್ಮದ ತಂಟೆಗೆ ಬಂದರೆ ಅದಕ್ಕೆ ಸದಾ ಉತ್ತರಿಸಲು ಸಿದ್ಧವಾಗಬೇಕಾಗಿದೆ ಎಂದರು.

ಹಿಂದು ಸಂಖ್ಯೆ ಕಡಿಮೆಯಾದಂತೆ ದೇಶದ ಮೂಲ ಸತ್ವ ಕಡಿಮೆಯಾಗುತ್ತದೆ. ಹೀಗಾಗಿ ಹಿಂದೂ ಸಂಖ್ಯೆಯನ್ನು, ಹಿಂದೂ ಸಮಾಜವನ್ನು ವಿಸ್ತಾರಗೊಳಿಸಲು ಸರ್ಕಾರ ನೀಡಿರುವ ಮತಾಂತರವೆಂಬ ಅಸ್ತ್ರವನ್ನು ಸಮರ್ಥವಾಗಿ ಬಳಸಿಕೊಳ್ಳೋಣ. ಸಮಾಜದ ವಿವಿಧ ಜಾತಿಯ ಸ್ವಾಮೀಜಿಗಳು, ಮುಖಂಡರು ಹಿಂದೂ ಧರ್ಮದ ವಿಶೇಷತೆಗಳನ್ನು ಮನವರಿಕೆ ಮಾಡಿ ಒಲಿಸು ಸೇರಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಅದಕ್ಕಾಗಿ ನಮ್ಮ ಹೃದಯ ವಿಶಾಲವಾಗಬೇಕು ಎಂದ ಅವರು ಬಜರಂಗದಳದ ಈ ಯೋಜನೆಯನ್ನು ಎಲ್ಲರೂ ಬೆಂಬಲಿಸುವಂತೆ ಮನವಿ ಮಾಡಿದರು.

ಜನಸಂಖ್ಯೆ ಜಾಸ್ತಿಯಾಗಲು ನಮ್ಮ ಜನ ಎರಡು ಮೂರು ಮಕ್ಕಳನ್ನ ಮಾಡ್ತಾರೇನ್ರೀ? ನಮ್ಮ ಜನರಿಗೆ ಅವರ ಮಕ್ಕಳನ್ನು ಪಂಚರ್ ಹಾಕಲು ಕಳುಹಿಸಲು ಇಷ್ಟ ಇಲ್ಲ, ಅವರಿಗೆ ನಮ್ಮ ಮಕ್ಕಳು ಚೆನ್ನಾಗಿ ಓದಿ ಡಾಕ್ಟರ್, ಇಂಜಿನಿಯರ್ ಆಗಬೇಕು ಅಷ್ಟೇ. ಹಾಗಾಗಿ ಓದಿಸೋ ಕೆಪಾಸಿಟಿ ಇಲ್ಲದ ಕಾರಣ ಒಂದು ಸಾಕು, ಎರಡು ಸಾಕು ಅಂತಾರೆ. ಹೀಗಾಗಿ ಧರ್ಮ ವಿಸ್ತರಿಸಲು ಮಕ್ಕಳೇ ಆಗಬೇಕಂತೇನಿಲ್ಲ. ಸರ್ಕಾರ ನಮಗಾಗಿ ಮಾಡಿರೋ ಕಾನೂನುಗಳನ್ನು ಬಳಸಿಕೊಳ್ಳೋಣ. ಪೊಲೀಸರಿಗೂ ಹೇಳ್ತಾ ಇದೀನಿ, ಇದು ಸರ್ಕಾರ ಕೊಟ್ಟಿರೋ ಕಾನೂನು, ನಾವು ಹೇಳ್ತಿರೋದಲ್ಲ. ಬಿಜೆಪಿ ಸರ್ಕಾರ ಇದ್ದಾಗ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿತು, ಹೊಸ ಸರ್ಕಾರ ಬಂದು ಆ ಕಾನೂನು ತೆಗೆದು ಹಾಕಿತು. ಅಂದರೆ ಅದರ ಅರ್ಥ ನೀವು ಮತಾಂತರ ಮಾಡಬಹುದು ಅಂತಾಯ್ತಲ್ಲ? ಸರ್ಕಾರವೇ ಧೈರ್ಯವಾಗಿ ಹೇಳಿದೆ, ಮತಾಂತರ ಮಾಡಿ ಅಂತ, ಹಾಗಿದ್ದಾಗ ನಾವು ಮಾಡಬೇಕಲ್ವಾ? ಎಂದರು.

ಸೇವೆ ಮಾಡೋದು ನಿಮ್ಮ ಸಮಾಜ ಮಾತ್ರ ಅಲ್ಲ, ನಮ್ಮ ಸಮಾಜ ಮಾಡೋ ಸೇವೆ ಯಾವ ಧರ್ಮ ಮಾಡಿದೆ ಅಂತಾ ಕೇಳಿ. ಇಂಥ ಸೇವೆ ಮಾಡೋ ಸಮಾಜ ಮತ್ತೊಂದಿಲ್ಲ ಅಂತ ಹೇಳಿ ನಮ್ಮ ಸಮಾಜಕ್ಕೆ ಕರೆಯಿರಿ. ನಮ್ಮ ಸಮಾಜದ ಎಲ್ಲಾ ಪ್ರಮುಖರು ಈ ಬಗ್ಗೆ ಒಂದು ಘೋಷಣೆ ಹೊರಡಿಸಿ. ಯಾರಾದರೂ ನಮಗೆ ಮತಾಂತರ ಆಗಬೇಕು ಅಂದರೆ ನಮ್ಮ ಸಮಾಜ ಅವರನ್ನ ಪ್ರೀತಿಯಿಂದ ಸ್ವಾಗತಿಸುತ್ತೆ ಬನ್ನಿ ಅಂತ ಕರೀರಿ. ಸಮಾಜದ ಸ್ವಾಮೀಜಿಗಳ ಮೂಲಕ ಘೋಷಣೆ ಕೊಡಲಿ, ಯಾರಾದ್ರೂ ಬರ್ತೀರ ಅಂತಾದರೆ ಜಾತಿ ಕೇಳದೇ ಕರೆಯಿರಿ. ನೀವು ಒಂದು ಸಲ ಮುಕ್ತ ಕಂಠದಿಂದ ಕರೀರಿ, ಎಷ್ಟು ಜನ ಸೈಲೆಂಟಾಗಿ ಸೇರಿಕೊಳ್ತಾರೆ ನೋಡಿ. ಜನಸಂಖ್ಯೆ ಜಾಸ್ತಿ ಮಾಡಲು ಸರ್ಕಾರವೇ ಕೊಟ್ಟ ಇಂಥ ಕಾನೂನುಗಳು ನಮ್ಮಲ್ಲಿವೆ. ಹಾಗಾಗಿ ಸಂಖ್ಯೆ ವಿಸ್ತರಿಸಲು ಈ ರೀತಿಯಲ್ಲಿ ನಾವು ಕೆಲಸ ಮಾಡಬೇಕಿದೆ. ಮುಂದಿನ ಪೀಳಿಗೆಗೆ ಭಾರತ ಬಿಟ್ಟು ಕೊಟ್ಟು ಹೋಗುವಾಗ ಅದಕ್ಕೆ ಸ್ವಲ್ಪ ಪಾಕಿಸ್ತಾನ, ಬಾಂಗ್ಲಾದೇಶ, ಅಗತ್ಯ ಬಿದ್ದರೆ ನೇಪಾಳವನ್ನೂ ಸೇರಿಸೋಣ ಎಂದು ಕರೆ ನೀಡಿದ್ದಾರೆ