

ಉಳ್ಳಾಲ: ಪಶ್ಚಿಮ ಬಂಗಾಳ ಮೂಲದ ಯುವತಿಯ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣದ ಮೂವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಇಂದು ಸರಕಾರಿ ರಜಾ ದಿನದ ಕಾರಣ ಮ್ಯಾಜಿಸ್ಟ್ರೇಟ್ ಮನೆಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಪಡೆದಿದ್ದಾರೆ.
ಆರೋಪಿಗಳಾದ ಆಟೋ ರಿಕ್ಷಾ ಚಾಲಕ ಮುಲ್ಕಿ ಕಾರ್ನಾಡು ಲಿಂಗಪ್ಪಯ್ಯಕಾಡು ನಿವಾಸಿ ಪ್ರಭುರಾಜ್ (38), ಪೈಂಟರ್ ಕಮ್ ಎಲೆಕ್ಟ್ರೀಷಿಯನ್ ಕೆಲಸದ ಕುಂಪಲ, ಚಿತ್ರಾಂಜಲಿ ನಗರ ನಿವಾಸಿ ಮಿಥುನ್ (37), ಡೆಲಿವರಿ ಬಾಯ್ ಆಗಿರುವ ಪಡೀಲ್ ಕೊಡಕ್ಕಲ್ ನಿವಾಸಿ ಮನೀಶ್ (30) ಎಂಬವರನ್ನು ಶುಕ್ರವಾರದಂದು ಉಳ್ಳಾಲ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆ ಗಾಗಿ ಕಸ್ಟಡಿಗೆ ತೆಗೆದಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಯುವತಿಗೆ ಕೆಲಸ ಕೊಡಿಸುವ ಅಮಿಷವೊಡ್ಡಿ, ಆಕೆಗೆ ಮದ್ಯ ಕುಡಿಸಿ ಕುತ್ತಾರು ರಾಣಿಪುರ ಬಳಿಯ ನದಿ ತೀರದಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ್ದ ಆರೋಪದಡಿ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು.

ಸುಳಿವು ನೀಡಿದ್ದು ಗೂಗಲ್ ಪೇ ! : ಕೇರಳದ ಫ್ಲೈವುಡ್ ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದ ಸಂತ್ರಸ್ತ ಯುವತಿ ತನ್ನ ಪ್ರಿಯಕರನೊಂದಿಗೆ ಗಲಾಟೆ ಮಾಡಿ ಬುಧವಾರ ಕೆಲಸ ಅರಸಿ ಮಂಗಳೂರಿಗೆ ರೈಲಿನಲ್ಲಿ ಬಂದಿದ್ದಳು. ರೈಲ್ವೇ ನಿಲ್ದಾಣದಲ್ಲಿ ಸಂತ್ರಸ್ತೆಯ ಸ್ನೇಹ ಸಂಪಾದಿಸಿದ ಆರೋಪಿ ರಿಕ್ಷಾ ಚಾಲಕ ಪ್ರಭುರಾಜ್ ಆಕೆಯ ಮೊಬೈಲ್ ರಿಪೇರಿ ಮಾಡಿಸಿದ್ದ. ಯುವತಿ ಈ ವೇಳೆ ಪಶ್ಚಿಮ ಬಂಗಾಳದಲ್ಲಿರುವ ತನ್ನ ಸಹೋದರಿಗೆ ಕರೆ ಮಾಡಿದ್ದಳು. ಯುವತಿಯ ಮೊಬೈಲಲ್ಲಿ ಗೂಗಲ್ ಪೇ ಆ್ಯಪ್ ಇಲ್ಲದ ಕಾರಣ ಪಶ್ಚಿಮ ಬಂಗಾಳದ ಸಹೋದರಿಯು ಆರೋಪಿ ರಿಕ್ಷಾ ಚಾಲಕನ ಗೂಗಲ್ ಪೇ ಖಾತೆಗೆ 2000 ರೂಪಾಯಿ ಕಳಿಸಿ, ತನ್ನ ಸೋದರಿಯನ್ನ ಪಶ್ಚಿಮ ಬಂಗಾಳದ ರೈಲು ಹತ್ತಿಸುವಂತೆ ಕೋರಿದ್ದರು. ಆದರೆ ಪ್ರಭುರಾಜ್ ಯುವತಿಗೆ ರೊಟ್ಟಿ ಕಂಪನಿಯೊಂದರಲ್ಲಿ ಕೆಲಸ ಕೊಡಿಸುವ ಆಮಿಷ ಒಡ್ಡಿ ತನ್ನ ಸ್ನೇಹಿತರ ಜೊತೆ ಸೇರಿ ಯುವತಿಯನ್ನ ದುರ್ಬಳಕೆ ಮಾಡಿದ್ದ. ಗೂಗಲ್ ಪೇ ನಂಬರಿನ ಜಾಡು ಹಿಡಿದ ಪೊಲೀಸರು ಮೂವರು ಆರೋಪಿಗಳನ್ನು ಸುಲಭದಲ್ಲಿ ಹೆಡೆಮುರಿ ಕಟ್ಟಿದ್ದಾರೆ.