ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿರುವ ಮಲಯಾಳಂ ಚಿತ್ರ ‘ಎಲ್2 : ಎಂಪುರಾನ್’ ಅನ್ನು ತಕ್ಷಣ ನಿಷೇಧಿಸುವಂತೆ ಕೋರಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ವಿವಿ ವಿಜೀಶ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಮಧ್ಯಂತರ ಆದೇಶ ನೀಡಲು ಕೇರಳ ಹೈಕೋರ್ಟ್ ಮಂಗಳವಾರ (ಏ.1) ನಿರಾಕರಿಸಿದೆ ಎಂದು barandbench.com ವರದಿ ಮಾಡಿದೆ.

ನ್ಯಾಯಮೂರ್ತಿ ಸಿ.ಎಸ್. ಡಯಾಸ್ ಅವರು ಅರ್ಜಿದಾರರ ಪ್ರಾಮಾಣಿಕತೆಯನ್ನು ಅನುಮಾನಿಸಿದ್ದು, ಈ ಅರ್ಜಿ ಪ್ರಚಾರಕ್ಕಾಗಿ ಸಲ್ಲಿಸಿದಂತೆ ತೋರುತ್ತಿದೆ ಎಂದು ಹೇಳಿದ್ದಾಗಿ ವರದಿ ತಿಳಿಸಿದೆ.
ನೀವು ಈ ಎಂಪುರಾನ್ ಚಿತ್ರವನ್ನು ನೋಡಿದ್ದೀರಾ? ನಿಮ್ಮ ಆಕ್ಷೇಪಣೆ ಏನು? ಇದನ್ನು ಸೆನ್ಸಾರ್ ಮಂಡಳಿ ಪ್ರಮಾಣೀಕರಿಸಿದೆಯಲ್ವಾ? ನಿಮ್ಮ ಪ್ರಾಮಾಣಿಕತೆಯ ಬಗ್ಗೆ ನನಗೆ ಅನುಮಾನವಿದೆ. ಈ ಚಲನಚಿತ್ರದಿಂದಾಗಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಲಾಗಿದೆ ಎಂಬ ಒಂದು ದೂರನ್ನು ನನಗೆ ತೋರಿಸಿ. ಪೊಲೀಸರು ದಾಖಲಿಸಿರುವ ಎಫ್‌ಐಆರ್ ಅನ್ನು ನನಗೆ ತೋರಿಸಿ. ಇವೆಲ್ಲವೂ ಪ್ರಚಾರ ಆಧಾರಿತ ಅರ್ಜಿಗಳು, ಅಲ್ಲದೆ ಬೇರೇನೂ ಅಲ್ಲ” ಎಂದು ನ್ಯಾಯಾಲಯ ಹೇಳಿದೆ.

ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಈಗಾಗಲೇ ಚಿತ್ರವನ್ನು ಪ್ರದರ್ಶನಕ್ಕೆ ಅನುಮತಿಸಿದೆ ಎಂಬ ರಾಜ್ಯ ಸರ್ಕಾರದ ಪರ ವಕೀಲರ ವಾದವನ್ನು ನ್ಯಾಯಾಲಯ ಗಮನಿಸಿದೆ.
ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ನ್ಯಾಯಾಲಯ ಈ ವಿಷಯವನ್ನು ಆದ್ಯತೆಯ ಮೇರೆಗೆ ವಿಚಾರಣೆಗೆ ಪಟ್ಟಿ ಮಾಡಲು ಮತ್ತು ಯಾವುದೇ ಮಧ್ಯಂತರ ಪರಿಹಾರ ಅಥವಾ ಆದೇಶ ನೀಡಲು ನಿರಾಕರಿಸಿದೆ. ನ್ಯಾಯಾಲಯದ ಬೇಸಿಗೆ ರಜೆಯ ನಂತರ ಈ ಪ್ರಕರಣದ ವಿಚಾರಣೆ ಮುಂದುವರೆಸಲಿದೆ.
ಭಾರತದ ಉಪ ಸಾಲಿಸಿಟರ್ ಜನರಲ್ (ಡಿಎಸ್‌ಜಿಐ) ಅವರು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮತ್ತು ಪೊಲೀಸ್ ಮಹಾನಿರ್ದೇಶಕರ ರಾಜ್ಯ ಅಟಾರ್ನಿ ಪರವಾಗಿ ವಿಚಾರಣೆಗೆ ಹಾಜರಾಗಿದ್ದರು.

ನ್ಯಾಯಾಲಯ ನಟ ಮೋಹನ್ ಲಾಲ್, ಪೃಥ್ವಿರಾಜ್ ಮತ್ತು ಚಿತ್ರದ ನಿರ್ಮಾಪಕರು ಸೇರಿದಂತೆ ಪ್ರಕರಣದ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಎಂಪುರಾನ್ ಚಿತ್ರದಲ್ಲಿ 2002ರ ಗೋಧ್ರಾ ಗಲಭೆಯನ್ನು ಉಲ್ಲೇಖಿಸುವ ದೃಶ್ಯಗಳು ಇವೆ. ಭಾರತದ ರಕ್ಷಣಾ ಸಚಿವಾಲಯದ ಬಗ್ಗೆ ಅನಗತ್ಯ ಹೇಳಿಕೆಗಳು ನೀಡಲಾಗಿದೆ. ಕೇಂದ್ರ ತನಿಖಾ ಸಂಸ್ಥೆಗಳ ವಿಶ್ವಾಸಾರ್ಹತೆ ಮತ್ತು ಸಮಗ್ರತೆಯನ್ನು ದುರ್ಬಲಗೊಳಿಸುವ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಅರ್ಜಿದಾರ ವಿಜೀಶ್ ಆರೋಪಿಸಿದ್ದರು.
ಈ ಚಿತ್ರ ಕೋಮು ಅಶಾಂತಿಗೆ ಕಾರಣವಾಗಬಹುದು. ಮತ್ತಷ್ಟು ವಿವಾದಗಳನ್ನು ತಡೆಗಟ್ಟಲು ಮತ್ತು ಯಾವುದೇ ಸಂಭಾವ್ಯ ಕೋಮು ಅಶಾಂತಿಯನ್ನು ತಪ್ಪಿಸಲು ಚಿತ್ರದ ಮುಂದಿನ ಪ್ರದರ್ಶನವನ್ನು ತಕ್ಷಣವೇ ಸ್ಥಗಿತಗೊಳಿಸಲು ನಿರ್ದೇಶನ ನೀಡಬೇಕು ಎಂದು ಕೋರಿದ್ದರು

‘ಎಂಪುರಾನ್’ ಚಿತ್ರದಲ್ಲಿ ನಟ ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ನಟ ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿದ್ದು, ಅವರೂ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರವು 2019 ರ ‘ಲೂಸಿಫರ್’ ಚಿತ್ರದ ಮುಂದುವರಿದ ಭಾಗವಾಗಿದೆ.
ಗೋಧ್ರಾ ಗಲಭೆಯ ಬಗ್ಗೆ ಚಿತ್ರದಲ್ಲಿ ಉಲ್ಲೇಖಿಸಿದ್ದಕ್ಕೆ ಚಿತ್ರ ಬಿಜೆಪಿ, ಆರ್‌ಎಸ್‌ಎಸ್ ಸೇರಿದಂತೆ ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿದೆ. ಚಿತ್ರದ ಬರಹಗಾರ ಮುರಳಿ ಗೋಪಿ ಮತ್ತು ನಿರ್ಮಾಪಕ ಆಂಥೋನಿ ಪೆರುಬ್ಮಾವೂರ್ (ಚಿತ್ರದಲ್ಲಿ ಸಣ್ಣ ಪಾತ್ರವನ್ನು ನಿರ್ವಹಿಸಿದ್ದಾರೆ) ಸೇರಿದಂತೆ ಇಡೀ ಚಿತ್ರತಂಡ ಟೀಕೆಗೆ ಗುರಿಯಾಗಿದೆ. ಅವರನ್ನು ‘ಹಿಂದೂ ವಿರೋಧಿ’ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ.

ವಿವಾದದ ನಂತರ ಚಿತ್ರದ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಲು ನಿರ್ಮಾಪಕರು ಸ್ವಯಂ ಪ್ರೇರಿತರಾಗಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಬದಲಾವಣೆಗಳೊಂದಿಗೆ ಈ ವಾರ ಚಿತ್ರ ಪ್ರದರ್ಶನಗೊಳ್ಳುವ ಸಾಧ್ಯತೆ ಇದೆ. ಮೋಹನ್ ಲಾಲ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದು, ವಿವಾದಾತ್ಮಕ ದೃಶ್ಯಗಳನ್ನು ಚಿತ್ರದಿಂದ ತೆಗೆದುಹಾಕಲಾಗುವುದು ಎಂದು ಹೇಳಿದ್ದಾರೆ.