✍🏻 ಹಂಝ ಮಲಾರ್
ಪ್ರತಿಯೊಂದು ಧರ್ಮದ ಆಚರಣೆಗೆ ಅದರದ್ದೇ ಆದ ನೀತಿ-ನಿಯಮ, ಇತಿಮಿತಿಗಳಿವೆ. ಧರ್ಮದ ವಿಧಿ-ವಿಧಾನಗಳ ಪ್ರಕಾರ ಹಬ್ಬಗಳ ಆಚರಣೆ ನಡೆಯುತ್ತದೆ. ಧರ್ಮಗಳು ವಿಶ್ವವ್ಯಾಪಿಯಾದರೂ, ಧಾರ್ಮಿಕ ಇತಿಮಿತಿಗಳು ಇದ್ದರೂ ಕೂಡ ಅದರಾಚೆಗೂ ಮೀರಿ ಸ್ಥಳೀಯ ಸಂಸ್ಕೃತಿ, ಕಟ್ಟುಪಾಡುಗಳಿಗೆ ಆದ್ಯತೆ ನೀಡುವುದನ್ನು ಕಾಣಬಹುದಾಗಿದೆ. ಇಸ್ಲಾಮ್ ಧರ್ಮ ಇಂದು ಜಗತ್ತಿನಾದ್ಯಂತ ಬೆಳೆದು ನಿಂತಿವೆ. ಧಾರ್ಮಿಕ ನೀತಿ-ನಿಯಮಗಳ ಅನುಸಾರ ಧರ್ಮದ ಅನುಯಾಯಿಗಳು ಕ್ರಿಯೆಗಳನ್ನು ಪಾಲಿಸುತ್ತಾರೆ. ಆದರೂ ಕೂಡ ಹಬ್ಬಗಳಿಗೆ ಸಾಂಸ್ಕೃತಿಕ ಸ್ಪರ್ಶ ನೀಡುವುದು ಸಾಮಾನ್ಯವಾಗಿದೆ.

ರಮಝಾನ್‌ನ 29 ಅಥವಾ 30 ಉಪವಾಸ ಅಥವಾ ವೃತ ಅನುಷ್ಠಾನದ ಬಳಿಕ ಅಂದರೆ ಶವ್ವಾಲ್‌ನ ಪ್ರಥಮ ಚಂದ್ರದರ್ಶನವಾಗುತ್ತಲೇ “ಈದುಲ್ ಫಿತ್ರ್” ಆಚರಣೆಗೆ ಅಣಿಯಾಗುತ್ತಾರೆ. ಹಬ್ಬ ಅಂದ ಬಳಿಕ ಹೊಸ ಬಟ್ಟೆಬರೆ ತೊಡುವುದು, ವಿಶೇಷ ಅಡುಗೆ ಮಾಡುವುದು, ಆಚೀಚೆ ಹಂಚಿ ತಿನ್ನುವುದು, ಪರಸ್ಪರ ಕುಟುಂಬಸ್ಥರು, ಸ್ನೇಹಿತರ ಮನೆಗೆ ಸೌಹಾರ್ದ ಭೇಟಿ ನೀಡುವುದು ಸಾಮಾನ್ಯವಾಗಿದೆ. ಕರಾವಳಿ ಕರ್ನಾಟಕದ ಅದರಲ್ಲೂ ಮುಖ್ಯವಾಗಿ ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಮರು ರಮಝಾನ್‌ನ ಆರಂಭದಲ್ಲೇ ಹೊಸ ಬಟ್ಟೆಬರೆ (ರೆಡಿಮೇಡ್) ಖರೀದಿಸುವುದು ಅಥವಾ ಹೊಲಿಯಲು ಕೊಡುತ್ತಾರೆ. ಕುಟುಂಬದ ಯಜಮಾನ ತನಗೆ ಮಾತ್ರವಲ್ಲದೆ ತಂದೆ- ತಾಯಿ, ಸಹೋದರ- ಸಹೋದರಿಯರು, ಪತ್ನಿ- ಮಕ್ಕಳು ಹೀಗೆ ಎಲ್ಲರಿಗೂ ಹೊಸ ಬಟ್ಟೆಬರೆ ಖರೀದಿಸುತ್ತಾರೆ. ಇನ್ನು ನವ ವಧು-ವರರು ಅತ್ತೆ- ಮಾವಂದಿರಿಗೆ, ಮನೆಯ ಹಿರಿಯ ಸದಸ್ಯರಿಗೆ (ಅಜ್ಜ- ಅಜ್ಜಿಯಂದಿರು), ವರನು ತನ್ನ ಭಾವಂದಿರು-ನಾದಿನಿಯರಿಗೂ ಹೊಸ ಬಟ್ಟೆಬರೆ ಖರೀದಿಸುತ್ತಾರೆ.

ಶವ್ವಾಲ್‌ನ ಪ್ರಥಮ ಚಂದ್ರದರ್ಶನವಾಗುತ್ತಲೇ “ಅಲ್ಲಾಹು ಅಕ್ಬರ್” ಎಂಬ ತಕ್ಬೀರ್‌ನ ಧ್ವನಿಯು ಮೈಕ್ ಮೂಲಕ ಮೊಳಗುತ್ತದೆ. “ಅಲ್ಲಾಹು ಅಕ್ಬರ್” ಎಂಬ ಧ್ವನಿ ಮೊಳಗದಿದ್ದರೆ ಹಬ್ಬಕ್ಕೆ ಕಳೆಯೇ ಇಲ್ಲ. ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ “ಅಲ್ಲಾಹು ಅಕ್ಬರ್” ಎಂದು ಧ್ವನಿ ಎತ್ತರಿಸಿ ಹೇಳುತ್ತಾರೆ. ಶವ್ವಾಲ್‌ನ ಚಂದ್ರದರ್ಶನದಿಂದ ಹಿಡಿದು ಮರುದಿನ ಬೆಳಗ್ಗೆ ಈದ್ ನಮಾಝ್ ಮಾಡುವವರೆಗೂ ತಕ್ಬೀರ್‌ನ ಧ್ವನಿ ಎತ್ತುತ್ತಾರೆ. ಇದು ಹಬ್ಬದ ವಿಶೇಷ ಮಹತ್ವಗಳಲ್ಲಿ ಒಂದಾಗಿದೆ. ರಮಝಾನ್‌ನ ಕೊನೆಯ ವೃತದೊಡನೆ ಪುರುಷರು ತಲೆಗೂದಲು ಕತ್ತರಿಸುವುದು, ಪುರುಷರ ಸಹಿತ ಎಲ್ಲರೂ ಉಗುರುಗಳನ್ನು ಕತ್ತರಿಸುವುದು, ಮನೆಯ ಹೆಂಗಸರು ಬಗೆ ಬಗೆಯ ತಿಂಡಿ ತಿನಿಸು, ಪಾನೀಯ, ವಿಶೇಷ ಅಡುಗೆ ತಯಾರಿಯಲ್ಲಿ ತೊಡಗಿಸಿಕೊಂಡರೆ, ಇನ್ನು ಕೆಲವರು ಮೊಯ್ಲಾಂಜಿ (ಮೆಹಂದಿ) ಹಚ್ಚುವುದು, ಹೊಸ ಬಟ್ಟೆಬರೆಗೆ ಇಸ್ತ್ರಿ ಹಾಕುವುದು, ಮನೆಯನ್ನು ಗುಡಿಸಿ, ಒರೆಸಿ, ತೊಳೆದು ಶುಚಿಗೊಳಿಸುವುದು…. ಮುಂಜಾವ ಬೇಗನೆ ಎದ್ದು ಬಿಸಿ ನೀರಿಗಾಗಿ ಹಂಡೆಗೆ ಬೆಂಕಿ ಕಾಯಿಸುವುದು (ಗ್ರಾಮೀಣ ಪ್ರದೇಶದಲ್ಲಿ ಈ ಚಿತ್ರಣ ಈಗಲೂ ಇದೆ), ಮಕ್ಕಳನ್ನೆಲ್ಲಾ ಎಬ್ಬಿಸಿ ಸ್ನಾನ ಮಾಡಿಸುವುದು ಬಳಿಕ ತಾವೂ ಸ್ನಾನ ಮಾಡುವುದು, ಹೊಸ ಬಟ್ಟೆಬರೆ ಧರಿಸುವುದು, ಸುಗಂಧ ಹಚ್ಚುವುದು ಸಾಮಾನ್ಯವಾಗಿದೆ.

ಹಬ್ಬದ ದಿನದಂದು ನವನವೀನ ವಸ್ತ್ರ ಧರಿಸುವುದು ಕೂಡ ಪುಣ್ಯದಾಯಕವಾಗಿದೆ. ಹೊಸ ಬಟ್ಟೆಬರೆ ಧರಿಸಿದ ಬಳಿಕ ಮಸೀದಿ ಅಥವಾ ಈದ್ಗಾಕ್ಕೆ ತೆರಳಬೇಕಾಗುತ್ತದೆ. ಮನೆಯಿಂದ ಹೊರಡುವ ಮುನ್ನ ಸಿಹಿ ಪಾನಕ ಕುಡಿಯುವುದು, ಸಿಹಿ ತಿಂಡಿ (ವಿಶೇಷವಾಗಿ ಖರ್ಜೂರ) ತಿನ್ನುವುದು, ಹೊರಡುವಾಗ “ಅಸ್ಸಲಾಂ ಅಲೈಕುಂ” ಎನ್ನುವುದು, ಅಂಗಳಕ್ಕೆ ಇಳಿದೊಡನೆ ಸಾಮೂಹಿಕವಾಗಿ ಹೆಜ್ಜೆ ಹಾಕುವಾಗ ಅಥವಾ ವಾಹನಗಳಲ್ಲಿ ಪ್ರಯಾಣಿಸುವಾಗಲೂ “ಅಲ್ಲಾಹು ಅಕ್ಬರ್” ಎಂದು ತಕ್ಬೀರ್ ಮೊಳಗಿಸುವುದು ಅನಿವಾರ್ಯವಾಗಿದೆ. ಹಿಂದೆ ಮಸೀದಿಗೆ ಹೋಗುವಾಗ ಒಂದು ದಾರಿ ಮತ್ತು ಬರುವಾಗ ಇನ್ನೊಂದು ದಾರಿಯನ್ನು ಬಳಸುತ್ತಿದ್ದರು. ಆದರೆ ಈಗ ಆ ಪದ್ದತಿ ಇಲ್ಲವಾಗಿದೆ.

ಈ ಸಂದರ್ಭ ಅಕ್ಕಪಕ್ಕದಲ್ಲಿ ಯಾರಾದರು ಹಬ್ಬದ ಸಂಭ್ರಮದಿಂದ ವಂಚಿತರಾಗುತ್ತಿದ್ದಾರೆಯೇ ಎಂಬುದನ್ನೂ ತಿಳಿದುಕೊಳ್ಳಬೇಕಿದೆ. ತಾನು ಅಥವಾ ತನ್ನ ಮನೆಯವರು ಹೊಸ ಬಟ್ಟೆ ಬರೆ ಧರಿಸಿದರೆ, ಹೊಸ ಬಗೆಯ ಅಡುಗೆ ತಯಾರಿಸಿ ತಿಂದುಂಡರೆ ಸಾಲದು. ತನ್ನ ನೆರೆಯ ಮನೆಯವರಿಗೆ ಹೊಸ ಬಟ್ಟೆ ಧರಿಸದಿದ್ದರೆ, ವಿಶೇಷ ಅಡುಗೆ ತಯಾರಿಸದಿದ್ದರೆ ಅದಕ್ಕೆ ವ್ಯವಸ್ಥೆ ಕಲ್ಪಿಸಬೇಕಿದೆ. ಒಂದು ವೇಳೆ ಹಾಗೇ ಮಾಡದಿದ್ದರೆ ಹಬ್ಬದ ಸಂಭ್ರಮ ಅಥವಾ ವಾತಾವರಣ ಕಾಣಲು ಸಿಗುವುದಿಲ್ಲ.

ಮಸೀದಿಗೆ ಅಥವಾ ಈದ್ಗಾಕ್ಕೆ ಹೋದೊಡನೆ ಎಲ್ಲರಿಗೂ ಕೇಳಿಸುವ ಹಾಗೆ ಎತ್ತರದ ಧ್ವನಿಯಲ್ಲಿ “ಅಸ್ಸಲಾಂ ಅಲೈಕುಂ” ಎನ್ನುವುದು, ಎರಡು ರಕಾಅತ್ ಸುನ್ನತ್ ನಮಾಝ್ ಮಾಡುವುದು, ಬಳಿಕ ಸಾಮೂಹಿಕವಾಗಿ ಈದ್ ನಮಾಝ್ ಮಾಡುವುದು, ನಂತರ ಖುತ್ಬಾ ಆಲಿಸುವುದು ಬಳಿಕ ಪರಸ್ಪರ ಆಲಿಂಗಿಸಿ ಶುಭಾಶಯ ಕೋರುವುದು, ಮಸೀದಿಯ ಇಮಾಮರಿಗೆ ಗೌರವಧನ ಹಸ್ತಾಂತರಿಸುವುದು, ಹಳೆಯ ದ್ವೇಷ-ಕೋಪಗಳಿಗೆ ತೀಲಾಂಜಲಿ ನೀಡುವ ಸಲುವಾಗಿ ಯಾರೊಡನೆ ಮಾತು ಬಿಡಲಾಗಿದೆಯೋ ಅವರನ್ನು ಹುಡುಕಿಕೊಂಡು ಹೋಗಿ “ಅಸ್ಸಲಾಂ ಅಲೈಕುಂ” ಎನ್ನುತ್ತಾ ಕ್ಷಮೆ ಕೋರಿ ಮುಗುಳ್ನಕ್ಕು ಸ್ನೇಹದ ಹಸ್ತ ಚಾಚುವುದು, ಆಲಿಂಗಿಸುವುದು, ಸಂಬಂಧಿಕರು ಮತ್ತು ಸ್ನೇಹಿತರನ್ನು ಮನೆಗೆ ಆಹ್ವಾನಿಸುವುದು, ಇತರರ ಆಹ್ವಾನ ಮನ್ನಿಸಿ ಅವರ ಮನೆಗೆ ಹೋಗುವುದು, ಅಲ್ಲಿ ಪಾನಕ ಕುಡಿಯುವುದು, ವಿಶೇಷ ಅಡುಗೆಯ ರುಚಿ ಸವಿಯುವುದು… ಹೀಗೆ ಸಂಭ್ರಮ ಮುಂದುವರಿಯಲಿದೆ.
ಈ ಮಧ್ಯೆ ದಫನ ಭೂಮಿಗೆ ತೆರಳಿ ತಮ್ಮಿಂದ ಅಗಲಿದವರ ಕಬರ್ ಬಳಿ ತೆರಳುವುದು, ಅವರ ಪರಲೋಕ ಜೀವನಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವುದು, ಮಕ್ಕಳಿಗೆ ತಮ್ಮ ಅಜ್ಜ-ಅಜ್ಜಿಯ “ಕಬರ್” ಪರಿಚಯಿಸುವುದು ಸಾಮಾನ್ಯವಾಗಿದೆ.

“ಈದುಲ್ ಫಿತ್ರ್”ನ ಇನ್ನೊಂದು ವಿಶೇಷತೆ ಅಂದರೆ ಫಿತ್ರ್ ಝಕಾತ್ ಕಡ್ಡಾಯವಾಗಿ ನೀಡುವುದಾಗಿದೆ. ಸ್ವದಕಾ (ದಾನ) ಯಾರು, ಯಾರಿಗೆ ಬೇಕಾದರೂ ನೀಡಬಹುದು. ಆದರೆ ಫಿತ್ರ್ ಝಕಾತ್ ಅರ್ಹರಿಗೆ ಕಡ್ಡಾಯವಾಗಿದೆ. ಇದನ್ನು ಶ್ರೀಮಂತರು ಮಾತ್ರ ಕೊಡಬೇಕು ಎಂದೇನಿಲ್ಲ. ಈದ್‌ನ ಹಗಲು ಮತ್ತು ರಾತ್ರಿಯ ಖರ್ಚಿಗೆ ಬೇಕಾದುದಕ್ಕಿಂತ ಹೆಚ್ಚು ಸೊತ್ತು ಉಳ್ಳ ಎಲ್ಲರಿಗೂ ಫಿತ್ರ್ ಝಕಾತ್ ಕಡ್ಡಾಯವಾಗಿದೆ. ಅಂದರೆ ಪ್ರತಿಯೊಂದು ಕುಟುಂಬದ ಯಜಮಾನನು ಆಯಾ ದಿನದ ತನ್ನ ಖರ್ಚು ವೆಚ್ಚವನ್ನು ಹೊರತುಪಡಿಸಿ ತನ್ನ, ತನ್ನ ಪತ್ನಿ, ಸಂಪಾದನೆ ಮಾಡಲಾಗದ ತನ್ನ ಮಕ್ಕಳ ಮತ್ತು ತಾನು ಖರ್ಚು ನೀಡುವುದು ಕಡ್ಡಾಯವಾಗಿರುವ ತನ್ನ ತಂದೆ-ತಾಯಿಯ ಸಹಿತ ಕುಟುಂಬದ ಪ್ರತಿಯೊಬ್ಬ ಸದಸ್ಯನ ತಲಾ 2600 ಗ್ರಾಂ ತೂಕದಂತೆ ಆಯಾ ಪ್ರದೇಶದಲ್ಲಿ ಹೆಚ್ಚು ಬಳಕೆಯಲ್ಲಿರುವ ಆಹಾರ ವಸ್ತು (ಕರಾವಳಿಯಲ್ಲಿ ಸಾಮಾನ್ಯವಾಗಿ ಅಕ್ಕಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ) ವನ್ನು ನೀಡಬೇಕಾಗುತ್ತದೆ. ಶವ್ವಾಲ್‌ನ ಪ್ರಥಮ ಚಂದ್ರದರ್ಶನದೊಂದಿಗೆ ಈದ್ ನಮಾಝ್ ಮಾಡುವ ಮುಂಚೆ ಈ “ಫಿತ್ರ್ ಝಕಾತ್” ಎಂಬ ಕಡ್ಡಾಯ ದಾನವನ್ನು ಅರ್ಹರಿಗೆ ನೀಡಬೇಕಾಗುತ್ತದೆ. ಹಿಂದೆ ಗ್ರಾಮೀಣ ಪ್ರದೇಶದಲ್ಲಿ “ಫಿತ್ರ್ ಝಕಾತ್” ಎಂಬ ಈ ಕಡ್ಡಾಯ ದಾನದ ಅಕ್ಕಿಯನ್ನು ಪಡೆಯಲು ಕೆಲವೇ ಕೆಲವು ಶ್ರೀಮಂತರ ಮನೆಬಾಗಿಲಿಗೆ ಇತರರು ಅಲೆಯುವ, ಸಾಲುಗಟ್ಟಿ ನಿಲ್ಲುವ ಪದ್ಧತಿ ಇತ್ತು. ವರ್ಷ ಕಳೆಯುತ್ತಲೇ, ಧಾರ್ಮಿಕ ಅರಿವು ಮೂಡುತ್ತಲೇ ಕ್ರಮೇಣ ಈ ಪದ್ಧತಿಯನ್ನು ಕೈ ಬಿಡಲಾಗಿದೆ. ಈ ಮಧ್ಯೆ ಮನೆಯ ಮಕ್ಕಳ ಖುಷಿಗಾಗಿ ಹಿರಿಯರು, ನೆಂಟರು, ಅಕ್ಕಪಕ್ಕದ ಮನೆಯವರು “ಪುಡಿಗಾಸು” ಕೊಡುವ ಕ್ರಮ ಹಿಂದೆಯೂ ಇತ್ತು. ಈಗಲೂ ಗ್ರಾಮೀಣ ಭಾಗದಲ್ಲಿ ಕಾಣಬಹುದಾಗಿದೆ. ಇದಕ್ಕೆ ಬಡವ-ಬಲ್ಲಿದ ಎಂಬ ವ್ಯತ್ಯಾಸವಿಲ್ಲ. ಮಕ್ಕಳೆಲ್ಲರೂ ತಮ್ಮ ಮನೆಯವರು, ಕುಟುಂಬದ ಸದಸ್ಯರು, ಹಿರಿಯರು, ಆಸುಪಾಸಿನವರು ನೀಡುವ ಹಣಕ್ಕಾಗಿ ದುಂಬಾಲು ಬೀಳುತ್ತಾರೆ. ತನಗೆ ಎಷ್ಟಾಯಿತು? ತಾನೆಷ್ಟು ಸಂಗ್ರಹಿಸಿದೆ ಎಂದು ಮಕ್ಕಳು ಲೆಕ್ಕಾಚಾರ ಹಾಕುವುದನ್ನೇ ನೋಡಲು ತುಂಬಾ ಖುಷಿಯಾಗಿರುತ್ತದೆ.
ಮಸೀದಿ ಅಥವಾ ಈದ್ಗಾದಲ್ಲಿ ಈದ್ ನಮಾಝ್ ಮಾಡಿದ ಬಳಿಕ, ದಫನ ಭೂಮಿಗೆ ತೆರಳಿ ವಿಶೇಷ ಪ್ರಾರ್ಥನೆ ಮಾಡಿದ ಬಳಿಕ, ನೆಂಟರು, ಅಕ್ಕಪಕ್ಕದವರ ಮನೆಗೆ ತೆರಳಿದ ಬಳಿಕ ನವ ವರನು ತನ್ನ ಪತ್ನಿಯ (ಅತ್ತೆ-ಮಾವ) ಮನೆಗೆ ಹೋಗುವುದು ಸಾಮಾನ್ಯವಾಗಿದೆ.
ನವ ವಧುವು ತನ್ನ ಅತ್ತೆ ಮಾವಂದಿರ ಬಳಿ ತೆರಳಿ ವಿಶೇಷ ಅನುಮತಿ ಪಡೆದು ಅವರನ್ನೂ ತನ್ನ ಮನೆಗೆ ಆಹ್ವಾನಿಸುವ ಪದ್ಧತಿಯೂ ಇದೆ. ಅತ್ತ ವಧುವಿನ ತಂದೆ-ತಾಯಿಯು ತನ್ನ ಅಳಿಯನ, ಮಗಳ ಆಗಮನಕ್ಕಾಗಿ ಕಾಯುತ್ತಿರುತ್ತಾರೆ. ನವ ವಧು-ವರರು ಅತ್ತೆ-ಮಾವನ ಮನೆಯನ್ನು ಪ್ರವೇಶಿಸಿದ ಬಳಿಕವೇ ಆ ಮನೆಯ ಸೊಸೆಯಂದಿರು ತಮ್ಮ ಮನೆಗೆ ತೆರಳುವುದು ಸಾಮಾನ್ಯವಾಗಿದೆ. ಮಗಳು-ಅಳಿಯ ಬಾರದೆ ಸೊಸೆಯಂದಿರು ಅವರ ಮನೆಗೆ ತೆರಳಲು ಅತ್ತೆ- ಮಾವಂದಿರು ಸಮ್ಮತಿ ನೀಡುವುದಿಲ್ಲ.

“ಈದುಲ್ ಫಿತ್ರ್” ದಿನದಂದು ಯಾವ ಕಾರಣಕ್ಕೂ ಉಪವಾಸ/ವೃತ ಅನುಷ್ಠಾನ ಮಾಡುವಂತಿಲ್ಲ. ಆ ದಿನ ರಮಝಾನ್ ಉಪವಾಸ ಅನುಷ್ಠಾನದ ಪ್ರತೀಕವಾಗಿ ಸಂಭ್ರಮಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಹಬ್ಬದ ಮರುದಿನದಿಂದಲೇ ಅಥವಾ ಶವ್ವಾಲ್‌ನಲ್ಲಿ ಸತತ 6 ಉಪವಾಸವನ್ನು ಅನುಷ್ಠಾನಗೊಳಿಸಬೇಕಿದೆ. ಆದರೆ ಇದು ರಮಝಾನ್ ಉಪವಾಸದಂತೆ ಕಡ್ಡಾಯವಲ್ಲ. ಬದಲಾಗಿ ಐಚ್ಛಿಕವಾಗಿದೆ. ಹಾಗಾಗಿ ಈ ಉಪವಾಸವನ್ನು ಹೆಚ್ಚಾಗಿ ಹಿರಿಯರು ಅನುಷ್ಠಾನಗೊಳಿಸುತ್ತಾರೆ.
ಒಟ್ಟಿನಲ್ಲಿ ಮುಸ್ಲಿಮರ ಪಾಲಿಗೆ ಅತ್ಯಂತ ಶ್ರೇಷ್ಠವಾದ “ರಮಝಾನ್ ಉಪವಾಸ-ಈದುಲ್ ಫಿತ್ರ್” ಆಚರಣೆಯು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಸ್ಥಳೀಯ ಕಟ್ಟುಪಾಡುಗಳ ಸಮ್ಮಿಲನವು ವಿಶೇಷ ಸಂಭ್ರಮಕ್ಕೆ ಕಾರಣವಾಗುತ್ತದೆ.