ಗಾಜಾ ಮೇಲೆ ಇಸ್ರೇಲ್ ತನ್ನ ದಾಳಿಯನ್ನು ಮತ್ತೆ ಆರಂಭಿಸಿದ್ದಕ್ಕೆ ಪ್ಯಾಲೆಸ್ತೀನ್ ಹೋರಾಟಗಾರ ಸೇನೆ ಹಮಾಸ್ ಗುರುವಾರ ಮೊದಲ ತಿರುಗೇಟು ನೀಡಿದ್ದು, ವಸಾಹತುಗಾರ ಇಸ್ರೇಲ್‌ನ ರಾಜಧಾನಿ ಟೆಲ್ ಅವೀವ್ ಕಡೆಗೆ ರಾಕೆಟ್ ದಾಳಿ ನಡೆಸಿದೆ ಎಂದು ಎಎಫ್‌ಪಿ ವರದಿ ಮಾಡಿದೆ. ಗಾಜಾ ಮೇಲಿನ ದಾಳಿಗೆ

ಪ್ಯಾಲೆಸ್ತೀನ್ ಹೋರಾಟಗಾರ ಹಮಾಸ್‌ನ ಸಶಸ್ತ್ರ ವಿಭಾಗವಾದ ಎಜ್ಜೆಡೈನ್ ಅಲ್-ಕಸ್ಸಾಮ್ ಬ್ರಿಗೇಡ್ಸ್ ಈ ಬಗ್ಗೆ ಪ್ರತಿಕ್ರಿಯಿಸಿ, ಗಾಜಾದಲ್ಲಿ ನಾಗರಿಕರ ಮೇಲೆ ಇಸ್ರೇಲ್ ನಡೆಸಿದ “ಹತ್ಯಾಕಾಂಡ” ಕ್ಕೆ ಪ್ರತಿಕ್ರಿಯೆಯಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿದೆ. ಗಾಜಾದಿಂದ ಹಾರಿಸಲಾದ ಒಂದು ರಾಕೆಟ್ ಅನ್ನು ತಡೆಹಿಡಿಯಲಾಗಿದ್ದು, ಇತರ ಎರಡು ರಾಕೆಟ್‌ಗಳು ಜನವಸತಿಯಿಲ್ಲದ ಪ್ರದೇಶಕ್ಕೆ ಬಿದ್ದಿದೆ ಎಂದು ಇಸ್ರೇಲ್ ಹೇಳಿದೆ

ಮಂಗಳವಾರ ಗಾಜಾ ಮೇಲಿನ ತನ್ನ ದಾಳಿಯನ್ನು ಇಸ್ರೇಲ್ ಮತ್ತೆ ಆರಂಭಿಸಿದೆ. ಈ ದಾಳಿಯಲ್ಲಿ ಕನಿಷ್ಠ 330 ಪ್ಯಾಲೆಸ್ತೀನಿಯನ್ನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಸ್ಥಳೀಯ ಸಮಯ ಬೆಳಗಿನ ಜಾವ 2 ಗಂಟೆಗೆ ಈ ದಾಳಿಗಳು ಪ್ರಾರಂಭವಾಗಿದ್ದು, ಜನವರಿ 19 ರಂದು ಕದನ ವಿರಾಮ ಜಾರಿಗೆ ಬಂದ ನಂತರ ಪ್ಯಾಲೆಸ್ತೀನಿ ಪ್ರದೇಶದ ಮೇಲೆ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಒಂದಾಗಿದೆ.

ದಾಳಿಗಳಿಗೆ ಪ್ರತಿಕ್ರಿಯಿಸಿರುವ ಹಮಾಸ್, ಇಸ್ರೇಲ್ ತಮ್ಮ ನಡುವಿನ ಕದನ ವಿರಾಮವನ್ನು ಏಕಪಕ್ಷೀಯವಾಗಿ ಕೊನೆಗೊಳಿಸಿದೆ ಎಂದು ಹೇಳಿದೆ. ಇಸ್ರೇಲ್ ನಡೆಸಿದ ಇತ್ತೀಚಿನ ದಾಳಿಗಳಲ್ಲಿ 190 ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ 504 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ಗುರುವಾರ ತಿಳಿಸಿದೆ.
ಹಗಲಿ ವೇಳೆ ಇಸ್ರೇಲ್ ಸೇನೆಯು ಮಧ್ಯ ಮತ್ತು ದಕ್ಷಿಣ ಗಾಜಾದಲ್ಲಿ ತನ್ನ ಭೂ ಕಾರ್ಯಾಚರಣೆಯನ್ನು ವಿಸ್ತರಿಸಿದೆ ಎಂದು ಹೇಳಿದೆ. “ಕಳೆದ 24 ಗಂಟೆಗಳಲ್ಲಿ, ಉತ್ತರ ಮತ್ತು ದಕ್ಷಿಣ ಭಾಗಗಳ ನಡುವಿನ ಭದ್ರತಾ ವಲಯವನ್ನು ವಿಸ್ತರಿಸುವ ಸಲುವಾಗಿ, ಇಸ್ರೇಲ್ ರಕ್ಷಣಾ ಪಡೆಗಳ ಸೈನಿಕರು ಮಧ್ಯ ಮತ್ತು ದಕ್ಷಿಣ ಗಾಜಾ ಪಟ್ಟಿಯಲ್ಲಿ ಗುರಿಯಿಟ್ಟುಕೊಂಡು ಭೂ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ” ಎಂದು ಸೇನಾ ವಕ್ತಾರ ಅವಿಚೇ ಅಡ್ರೇಯಿ ಹೇಳಿದ್ದಾರೆ.

ಇಸ್ರೇಲ್ ತನ್ನ ಮಿಲಿಟರಿ ದಾಳಿಯನ್ನು ಪುನರಾರಂಭಿಸಿದಾಗಿನಿಂದ, ಗಾಜಾದ ನಾಗರಿಕರ ಮೇಲೆ ಅತ್ಯಂತ ಅಮಾನವೀಯ ಅಗ್ನಿಪರೀಕ್ಷೆಗಳನ್ನು ಅಂತ್ಯವಿಲ್ಲದೆ ನಡೆಸಲಾಗುತ್ತಿದೆ ಎಂದು ಪ್ಯಾಲೆಸ್ತೀನ್ ನಿರಾಶ್ರಿತರಿಗಾಗಿ ಕೆಲಸ ಮಾಡುವ ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯ ಸಂಸ್ಥೆಯ ಮುಖ್ಯಸ್ಥ ಫಿಲಿಪ್ ಲಝಾರಿನಿ ಹೇಳಿದ್ದಾರೆ.
“ಮೂರನೇ ದಿನವೂ ಇಸ್ರೇಲ್ ಪಡೆಗಳು ವಾಯು ಮತ್ತು ಸಮುದ್ರದಿಂದ ಬಾಂಬ್ ದಾಳಿ ಮುಂದುವರೆಸಿದೆ. ನಮ್ಮ ದೈನಂದಿನ ಕಣ್ಗಾವಲಿನಲ್ಲಿ, ಗಾಜಾದಲ್ಲಿ ಜನರು ಮತ್ತೆ ಮತ್ತೆ ತಮ್ಮ ಕೆಟ್ಟ ದುಃಸ್ವಪ್ನವನ್ನು ಎದುರಿಸುತ್ತಿದ್ದಾರೆ.” ಎಂದು ಅವರು ಘಟನೆಯನ್ನು ಖಂಡಿಸಿದ್ದಾರೆ.

ಗಾಜಾ ಮೇಲಿನ ದಾಳಿಯನ್ನು ಮಂಗಳವಾರ ಸಮರ್ಥಿಸಿಕೊಂಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಪದೇ ಪದೇ ನಿರಾಕರಿಸುವುದು ಮತ್ತು ಕದನ ವಿರಾಮವನ್ನು ವಿಸ್ತರಿಸುವ ಮಾತುಕತೆಗಳಲ್ಲಿ ಪ್ರಗತಿಯ ಕೊರತೆಯ ಕಾರಣಕ್ಕೆ ವಾಯುದಾಳಿಗಳಿಗೆ ಆದೇಶಿಸಿದ್ದೇನೆ ಎಂದು ಹೇಳಿದ್ದಾರೆ.
“ಇನ್ನು ಮುಂದೆ, ಇಸ್ರೇಲ್ ಹಮಾಸ್ ವಿರುದ್ಧ ಹೆಚ್ಚಿನ ಮಿಲಿಟರಿ ಬಲದೊಂದಿಗೆ ಕ್ರಮ ಕೈಗೊಳ್ಳುತ್ತದೆ. ಕಾರ್ಯಾಚರಣಾ ಯೋಜನೆಯನ್ನು ಸೇನೆ ವಾರಾಂತ್ಯದಲ್ಲಿ ಮಂಡಿಸಿದ್ದು, ಅದಕ್ಕೆ ರಾಜಕೀಯ ನಾಯಕತ್ವವು ಅನುಮೋದಿಸಿತು.” ಎಂದು ನೆತನ್ಯಾಹು ಹೇಳಿದ್ದರು.