ಉಡುಪಿಯ ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದ ಮೇಲೆ ವಿಜಯನಗರ ಜಿಲ್ಲೆ ಮೂಲದ ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಮಹಿಳೆ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ತನಿಖೆ ನಡೆಸಿದ ಮಲ್ಪೆ ಪೊಲೀಸರು, ಹಲ್ಲೆಗೊಳಗಾದ ಮಹಿಳೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಉಡುಪಿ ಎಸ್ಪಿ ಡಾ.ಕೆ ಅರುಣ್, “ವಿಜಯನಗರ ಜಿಲ್ಲೆಯಿಂದ ಬಂದ ಮಹಿಳೆ ಮೀನು ಕದ್ದಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಮಹಿಳೆ ಲಕ್ಷ್ಮಿಬಾಯಿ ಮೊದಲು ಹಲ್ಲೆ ನಡೆಸಿದ್ದಾರೆ. ಬಳಿಕ ಸ್ಥಳೀಯರನ್ನು ಸೇರಿಸಿ ಮರಕ್ಕೆ ಕಟ್ಟಿಹಾಕಿದ್ದಾರೆ ಎನ್ನಲಾಗಿದೆ. ಮಹಿಳೆಯನ್ನು ಮರಕ್ಕೆ ಕಟ್ಟಿ ಕೆಲವರು ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದೆ.

ಈ ಸಂಬಂಧ ಹಲ್ಲೆಗೊಳಗಾದ ಮಹಿಳೆ ಕಡೆಯವರು ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಆರೋಪಿಗಳ ವಿರುದ್ದ ಬಿಎನ್‌ಎಸ್ 74, 115, 351,352, ಮತ್ತು ದಲಿತ ದೌರ್ಜನ್ಯ (ತಡೆ) ಕಾಯ್ದೆಯ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳಾದ ಲಕ್ಷ್ಮಿಬಾಯಿ, ಸುಂದರ್, ಶಿಲ್ಪಾ ಮತ್ತು ಇನ್ನೊಬ್ಬರನ್ನು ಬಂಧಿಸಿದ್ದಾರೆ. ವಿಡಿಯೋ ಪರಿಶೀಲಿಸಿ, ಪ್ರಕರಣದಲ್ಲಿ ಇನ್ನು ಯಾರದ್ದಾದರು ಪಾತ್ರ ಇದ್ದರೆ ಆದಷ್ಟು ಬೇಗ ಅವರ ಮೇಲೆಯೂ ಕಾನೂನು ಕ್ರಮ ಕೈಗೊಳ್ಳುತ್ತೇವೆ” ಎಂದಿದ್ದಾರೆ.

ಮಹಿಳೆಗೆ ಥಳಿಸಿದ್ದು ಅನಾಗರಿಕ ವರ್ತನೆ ಎಂದು ಸಿಎಂ ಕಿಡಿ
ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಕದ್ದಳೆಂದು ಮಹಿಳೆಗೆ ಥಳಿಸಿದ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ
ಮೀನುಗಾರಿಕೆಗೆ ತೆರಳಿದ ಬೋಟಿನಿಂದ ಬಂದರಿನಲ್ಲಿ ಮೀನು ಖಾಲಿ ಮಾಡುತ್ತಿದ್ದ ಸಂದರ್ಭ, ಮಹಿಳೆ ದುಬಾರಿ ಸಿಗಡಿ ಮೀನನ್ನು ಕದ್ದಿದ್ದಾಳೆ. ಮೀನು ಕದ್ದಿದ್ದನ್ನು ವಿಚಾರಣೆ ಮಾಡಿದಾಗ ಆಕೆ ಒಪ್ಪಿಕೊಂಡಿಲ್ಲ. ಸ್ಥಳದಲ್ಲಿದ್ದ ಮರಕ್ಕೆ ಕಟ್ಟಿ ಹಾಕಿ ಬೋಟಿಗೆ ಸಂಬಂಧಪಟ್ಟವರು ಥಳಿಸಿದ್ದಾರೆ.

ಘಟನೆಗೆ ಸಿಎಂ ಸಿದ್ದರಾಮಯ್ಯ ಖಂಡನೆ ವ್ಯಕ್ತಪಡಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಸಿಎಂ, ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಮೀನು ಕಳ್ಳತನ ಮಾಡಿದ್ದಾರೆಂದು ಆರೋಪಿಸಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಅಮಾನುಷವಾಗಿ ತಳಿಸಿದ ವೀಡಿಯೋ ಕಂಡು ದಿಗ್ಭ್ರಮೆಯಾಯಿತು. ಕಾರಣವೇನೇ ಇರಲಿ ಒಬ್ಬ ಮಹಿಳೆಯನ್ನು ಈ ರೀತಿ ಕೈಕಾಲು ಕಟ್ಟಿ ಹಲ್ಲೆ ಮಾಡುವುದು ಅಮಾನವೀಯ ಮಾತ್ರವಲ್ಲ, ಗಂಭೀರ ಅಪರಾಧವೂ ಹೌದು. ಇಂತಹ ಅನಾಗರಿಕ ವರ್ತನೆ ಕರ್ನಾಟಕದಂತಹ ಸುಸಂಸ್ಕೃತ ನಾಡಿಗೆ ತಕ್ಕುದಾದುದ್ದಲ್ಲ. ಕಳ್ಳತನ, ಮೋಸ, ವಂಚನೆಯಲ್ಲಿ ತೊಡಗಿರುವವರ ವಿರುದ್ಧ ಕ್ರಮಕ್ಕೆ ನಮ್ಮಲ್ಲಿ ಪೊಲೀಸ್ ಇಲಾಖೆ, ಕಾನೂನು ವ್ಯವಸ್ಥೆ ಎಲ್ಲವೂ ಇದೆ. ದೂರು ದಾಖಲಿಸಿದರೆ ಪೊಲೀಸರು ತನಿಖೆ ನಡೆಸಿ, ಕಾನೂನಿನಡಿಯಲ್ಲಿ ಶಿಕ್ಷಿಸಲು ಸಮರ್ಥರಿರುವಾಗ ಹೀಗೆ ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳುವುದನ್ನು ಸರ್ಕಾರ ಸಹಿಸುವುದಿಲ್ಲ. ಈ ಘಟನೆಯ ಕುರಿತು ಸೂಕ್ತ ತನಿಖೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಉಡುಪಿ ಎಸ್ಪಿ ಡಾ.ಅರುಣ್ ಕುಮಾರ್ ಮಾತನಾಡಿ, ಕಟ್ಟಿಹಾಕಿ ಹಲ್ಲೆ ಮಾಡುವ ವಿಡಿಯೋ ವೈರಲ್ ಆಗಿದೆ. ಹಲ್ಲೆಗೊಳಗಾದ ಮಹಿಳೆ ವಿಜಯನಗರ ಜಿಲ್ಲೆಯವರು. ಮೀನು ಕದ್ದಿದ್ದಾರೆಂದು ಸ್ಥಳೀಯ ಲಕ್ಷ್ಮೀಬಾಯಿ ಎಂಬ ಮಹಿಳೆ ಹಲ್ಲೆ ಮಾಡಿದ್ದಾರೆ. ಸ್ಥಳೀಯರನ್ನು ಸೇರಿಸಿ ಮರಕ್ಕೆ ಕಟ್ಟಿ ಹೊಡೆದಿದ್ದಾರೆ. ಹಲ್ಲೆ ಮಾಡಿದ ಮಹಿಳೆ ಮೇಲೆ ಅಟ್ರಾಸಿಟಿ ಕೇಸು ದಾಖಲಾಗಿದೆ. ಹಲ್ಲೆಗೊಳಗಾದ ಮಹಿಳೆಯಿಂದ ದೂರು ತೆಗೆದುಕೊಂಡಿದ್ದೇವೆ. ಆರೋಪಿ ಲಕ್ಷ್ಮಿ ಬಾಯಿ, ಸುಂದರ್, ಶಿಲ್ಪಾ ಸೇರಿ 4 ಜನರನ್ನು ಬಂಧಿಸಲಾಗಿದೆ. ವಿಡಿಯೋ ಪರಿಶೀಲಿಸಿ ಇತರರ ಪಾತ್ರ ಇದ್ದರೆ ಕ್ರಮಕೈಗೊಳ್ಳುತ್ತೇವೆಂದು ತಿಳಿಸಿದ್ದಾರೆ.