ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ಭಯಾನಕ ಡಬಲ್ ಮರ್ಡರ್ ನಡೆದಿದೆ. ದಲಿತ ಮುಖಂಡ ಮತ್ತು ಆತನ ಸಹಚರನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಮೊದಲು ದಲಿತ ಮುಖಂಡನನ್ನು ಹತ್ಯೆ ಮಾಡಲಾಗಿದ್ದು, ನಂತರ ಭಯದಿಂದ ಓಡಿಹೋಗಿದ್ದ ಸಹಚರನನ್ನು ಕೊಲೆ ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಯಾದಗಿರಿ, ಮಾರ್ಚ್ 16: ಎರಡು ಪ್ರತ್ಯೇಕ ಗ್ಯಾಂಗ್ನಿಂದ ದಲಿತ ಮುಖಂಡ ಹಾಗೂ ಆತನ ಸಹಚರನ ಹತ್ಯೆ ಮಾಡಿರುವಂತಹ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಸಾದ್ಯಾಪುರ ಗ್ರಾಮದ ಬಳಿ ನಡೆದಿದೆ. ಮದ್ದರಕಿ ಗ್ರಾಮದ ಮಾಪಣ್ಣ ಹಾಗೂ ಅಲಿಸಾಬ್ ಹತ್ಯೆಯಾದವರು . ಬೈಕ್ನಲ್ಲಿ ತೆರಳುತ್ತಿದ್ದಾಗ ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರ ಹತ್ಯೆ ಮಾಡಲಾಗಿದೆ. ಕೊಲೆ ಮಾಡಿದವರ ಮಾಹಿತಿ ಮತ್ತು ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಭೀಮರಾಯನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬೈಕ್ನಲ್ಲಿ ಅಲಿಸಾಬ್ ಜೊತೆಗೆ ತೆರಳುತ್ತಿದ್ದ ಮಾಪಣ್ಣನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಇದರಿಂದ ಭಯಭೀತಗೊಂಡು ಅಲಿಸಾಬ್ ಓಡಿಹೋಗಿ ಮನೆ ಸೇರಿದ್ದ. ತಮ್ಮ ತಂದೆಯ ಮಾಹಿತಿ ಅಲಿಸಾಬ್ ನೀಡಿದ್ದಾನೆಂದು ಮಾಪಣ್ಣನ ಮಕ್ಕಳಿಂದ ಅಲಿಸಾಬ್ ನನ್ನು ಬರ್ಬರ ಕೊಲೆ ಮಾಡಲಾಗಿದೆ.

ಎಸ್ಪಿ ಪೃಥ್ವಿಕ್ ಶಂಕರ್ ಹೇಳಿದ್ದಿಷ್ಟು
ಪ್ರಕರಣ ಬಗ್ಗೆ ಶಹಾಪುರದಲ್ಲಿ ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಮಾತನಾಡಿದ್ದು, ಸಾದ್ಯಾಪುರ ಕ್ರಾಸ್ ಬಳಿ ಬೆಳಗ್ಗೆ 9.30ರ ಸುಮಾರಿಗೆ ಕೊಲೆ ನಡೆದಿದೆ. ಬೈಕ್ನಲ್ಲಿ ಅಲಿಸಾಬ್ ಜೊತೆಗೆ ತೆರಳುತ್ತಿದ್ದ ಮಾಪಣ್ಣನ ಹತ್ಯೆಯಾಗಿದೆ. ಇದರಿಂದ ಭಯಭೀತಗೊಂಡು ಅಲಿಸಾಬ್ ಓಡಿಹೋಗಿ ಮನೆ ಸೇರಿದ್ದ. ಊರು ಸೇರಿಕೊಂಡಿದ್ದ ಅಲಿಸಾಬ್ನನ್ನು ಹತ್ಯೆ ಮಾಡಿದ್ದಾರೆ. ಮಾಪಣ್ಣನನ್ನು ರೌಡಿಶೀಟರ್ ಹುಸೇನಿ ಕೊಂದಿದ್ದಾನೆ ಎಂದು ಮಾಹಿತಿ ಇದೆ. ಅದೇ ರೀತಿಯಾಗಿ ಅಲಿಸಾಬ್ನನ್ನು ಮಾಪಣ್ಣನ ಮಕ್ಕಳು ಕೊಂದಿದ್ದಾರೆ ಎನ್ನಲಾಗುತ್ತಿದೆ ಎಂದು ಹೇಳಿದ್ದಾರೆ.

ಶೀಘ್ರವೇ ಎರಡು ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುತ್ತೇವೆ. 2014ರಲ್ಲಿ ಮಾಪಣ್ಣನ ಮೇಲೆ ರೌಡಿಶೀಟರ್ ಹುಸೇನಿ ದಾಳಿ ಮಾಡಿದ್ದ. ಭೀಮರಾಯನಗುಡಿ ಠಾಣೆಯಲ್ಲಿ ಮಾಪ್ಪಣ್ಣ ವಿರುದ್ಧ 9 ಕೇಸ್ ದಾಖಲಾಗಿದ್ದವು ಎಂದಿದ್ದಾರೆ.
