ಅದೊಂದು ಅಪಘಾತದ ದೃಷ್ಯಾವಳಿಯನ್ನು ನೋಡಿ ಕಡಲನಗರಿ ಮಂಗಳೂರು ಬೆಚ್ಚಿ ಬಿದ್ದಿತ್ತು. ಅರೆ ಇದೆಂಥಾ ಅಪಘಾತ. ಇದನ್ನು ನೋಡಲಾಗದೇ ಕಣ್ಣಮುಚ್ಚಿಕೊಳ್ಳಬೇಕು ಎನ್ನಿಸುವ ಅಪಘಾತವಾಗಿತ್ತು. ಈ ಅಪಘಾತದ ಮಸಲತ್ತು ಹತ್ಯೆಯ ಸ್ಕೆಚ್ ಆಗಿತ್ತು. ಅದು ಅಪಘಾತವಲ್ಲ. ಅಪಘಾತದ ಸೋಗಿನ ಕೊಲೆಯತ್ನ. ತಲೆತಿರುಕನ ಮಸಲತ್ತು ಏನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ .

ಮಂಗಳೂರು, (ಮಾರ್ಚ್ 15): ಅದು ಎದುರು ಬದುರು ಮನೆಯವರ ತಕರಾರು. ಹಲವಾರು ವರ್ಷಗಳಿಂದ ಇರೋ ತಕರಾರು ಆಗಾಗ ವಾಗ್ವಾದ ಗಲಾಟೆಗೆ ಕಾರಣವಾಗುತ್ತಿತ್ತು. ಅದೇ ವ್ಯಾಜ್ಯ ಅತಿರೇಕಕ್ಕೆ ಹೋಗಿದ್ದು ಕೊಲೆಯತ್ನ ತಲುಪಿದೆ. ಆದ್ರೆ ಅಲ್ಲಿ ಇದಕ್ಕೆ ಸಂಬಂಧವೇ ಇಲ್ಲದ ಅಮಾಯಕ ಮಹಿಳೆಯೊಬ್ಬಳು ಆಸ್ಪತ್ರೆ ಪಾಲಾಗಿದ್ದಾಳೆ. ಮೊನ್ನೇ ಮಂಗಳೂರಿನ ಬಿಜೈ ಕಾಪಿಪಾಡಿನಲ್ಲಿ ಸಂಭಿಸಿದ ಭೀಕರ ಅಪಘಾತದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಎದೆ ಝಲ್ ಎನಿಸೋ ಈ ದೃಷ್ಯ ನೋಡಲು ಭಯವಾಗುತ್ತೆ. ಆ ರೀತಿ ಅಪಘಾತವಾಗಿತ್ತು. ಕಾರು ಗುದ್ದಿದ ರಭಸಕ್ಕೆ ಮಹಿಳೆ ಕಪೌಂಡ್ ಮೇಲಿನ ಗ್ರಿಲ್ಗೆ ಸಿಲುಕಿ ನೇತಾಡಿದ್ದಾಳೆ. ಹೀಗಿದ್ದಾಗ ಅಕ್ಕಪಕ್ಕದ ಮನೆಯವರು ಓಡೋಡಿ ಬಂದು ಆಕೆಯನ್ನು ರಕ್ಷಿಸಿದ್ದಾರೆ. ಮೇಲ್ನೋಟಕ್ಕೆ ಇದು ಅಪಘಾತದ ಹಾಗೆ ಕಂಡು ಬಂದಿತ್ತು. ಇಂತದ್ದೊಂದು ಅಪಘಾತ ಚಾಲಕನ ಅಜಾಗರುಕತೆಯಿಂದ ಆಗಿದ್ದು ಎಂದು ಜನರು ಮಾತನಾಡಿಕೊಳ್ಳುತ್ತಿರುವಾಗಲೇ ಅದು ಅಪಘಾತವಲ್ಲ. ಕೊಲೆಯತ್ನ ಎನ್ನುವ ಶಾಕಿಂಗ್ ವಿಚಾರವನ್ನು ಪೊಲೀಸರು ಬಿಚ್ಚಿಟ್ಟಿದ್ದಾರೆ.

ಹೌದು.. ಸತೀಶ್ ಕುಮಾರ್ ಎನ್ನುವಾತ ಕಾರಿನಲ್ಲಿ ಬಂದು ಬೈಕ್ ಗೆ ಗುದ್ದಿ, ಪಾದಚಾರಿ ಮಹಿಳೆಗೆ ಗುದ್ದಿಸಿ ಪರಾರಿಯಾದ್ದ. ಈತನ ಎದುರು ಮನೆಯ ನಿವಾಸಿ ಮುರಳಿ ಪ್ರಸಾದ್. ಈತನಗೂ ಬಿಎಸ್ಎನ್ಎಲ್ ನಿವೃತ್ತ ಉಧ್ಯೋಗಿ ಸತೀಶ್ ಕುಮಾರ್ ಗೂ ತಂಟೆ ತಕರಾರು. ಅವಾಚ್ಯ ಶಬ್ಧಗಳಿಂದ ಇಬ್ಬರು ಬೈದಾಡಿಕೊಳ್ಳುತ್ತಿದ್ದರು. ಹೀಗಾಗಿ ಮುರಳಿ ಪ್ರಸಾದ್ ನನ್ನು ಕೊಲ್ಲುವ ಉದ್ದೇಶದಿಂದ ಆತನ ಮನೆಯಿಂದ ಹೊರಡುವುದನ್ನು ಕಾದು ಕುಳಿತಿದ್ದ. ಮುರುಳಿ ಪ್ರಸಾದ್ ಬೈಕ್ ನಲ್ಲಿ ಮನೆಯಿಂದ ಹೋಗುತ್ತಿರುವಾಗ ಕಾರಿನಲ್ಲಿ ಹೋಗಿ ಗುದ್ದಿದ್ದಾನೆ. ಈ ವೇಳೆ ಪಾದಚಾರಿ ಮಹಿಳೆಗೂ ಗುದ್ದಿದ್ದಾನೆ.

ಇನ್ನು ಈ ಸತೀಶ್ ಕುಮಾರ್ ನ ಚಾಳಿ ಇದು ಹೊಸತಲ್ಲ. 2023 ರಲ್ಲಿ ಮುರಳಿ ಪ್ರಸಾದ್ ನ ತಂದೆ ನಡೆದುಕೊಂಡು ಹೋಗುತ್ತಿದ್ದಾಗ ಉದ್ದೇಶಪೂರ್ವಕವಾಗಿ ಬೈಕ್ ನಲ್ಲಿ ಗುದ್ದಿಸಿದ್ದ. ಉರ್ವಾ ಪೊಲೀಸ್ ಠಾಣೆಯಲ್ಲಿ ಅಂದು ಪ್ರಕರಣ ದಾಖಲಾಗಿತ್ತು. ಇದೇ ಚಾಳಿಯನ್ನು ಈಗ ಮತ್ತೆ ಮುಂದುವರೆಸಿದ್ದಾನೆ. ಸದ್ಯ ಸತೀಶ್ ಕುಮಾರ್ ಮೇಲೆ ಉರ್ವಾ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಮತ್ತು ಮಂಗಳೂರು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಅಜಾಗರೂಕ ಚಾಲನೆ, ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಅಪಘಾತವಲ್ಲ.. ಕೊಲೆಯತ್ನ..!
ಇದೊಂದು ಕೊಲೆಯತ್ನವಾಗಿತ್ತು. ಕಾರು ಚಲಾಯಿಸಿಕೊಂಡು ಬಂದಿದ್ದು ಸತೀಶ್ ಕುಮಾರ್. 67 ವರ್ಷ ವಯಸ್ಸಿನ ಸತೀಶ್ ಕುಮಾರ್ ಇದೇ 6 ನೇ ಅಡ್ಡರಸ್ತೆಯ ನಿವಾಸಿ. ಇನ್ನು ಬೈಕ್ ನಲ್ಲಿ ಹೋಗುತ್ತಿದ್ದಿದ್ದು ಮುರಳಿ ಪ್ರಸಾದ್. ಮುರಳಿ ಪ್ರಸಾದ್, ಸತೀಶ್ ಕುಮಾರ್ ನ ಎದುರ ಮನೆಯವನು. ಸತೀಶ್ ಕುಮಾರ್ ಹಾಗೂ ಮುರಳಿ ಪ್ರಸಾದ್ ಇಬ್ಬರು ಎದುರು ಬದರು ಮನೆಯ ನಿವಾಸಿಗಳು. ಅವತ್ತು ಬೆಳಗ್ಗೆ 8.30 ಸುಮಾರು. ಕೆಲಸಕ್ಕೆಂದು ಮುರಳಿಪ್ರಸಾದ್ ತನ್ನ ಬೈಕ್ ನಲ್ಲಿ ಮನೆಯಿಂದ ಹೊರಡುತ್ತಾನೆ. ಮನೆಯಿಂದ ಹೊರಟು 50 ಮೀಟರ್ ಕೂಡ ಹೋಗಿಲ್ಲ. ಆಗಲೇ ಈತ ಹೊರಡುವುದನ್ನೇ ಕಾದು ಕುಳಿತಿದ್ದ ಸತೀಶ್ ಕುಮಾರ್ ತನ್ನ ಮಾರುತಿ ಆಲ್ಟೋ ಕಾರಿನಲ್ಲಿ ವೇಗವಾಗಿ ಬಂದು ಮುರಳಿ ಪ್ರಸಾದ್ ನ ಬೈಕ್ ಗೆ ಗುದ್ದಿದ್ದಾನೆ. ಆದ್ರೆ, ಎದುರಿನಿಂದ ಪಾದಚಾರಿ ಮಹಿಳೆ ಯಲ್ಲವ್ವಗೆ ಕಾರು ಗುದ್ದಿದೆ.
ಟ್ರಾಫಿಕ್ ಠಾಣೆಗೆ ಹೋಗಿ ನಾಟಕ..!
ಇನ್ನು ಅಪಘಾತ ಮಾಡಿದ ಬಳಿಕ ಸತೀಶ್ ಕುಮಾರ್ ನೇರವಾಗಿ ಟ್ರಾಫಿಕ್ ಪೊಲೀಸ್ ಠಾಣೆಗೆ ಹೋಗಿ ಅಲ್ಲಿ ತಾನು ಒಂದು ಅಪಘಾತ ಮಾಡಿ ಬಂದಿದ್ದೇನೆ. ಸಂಚಾರಿ ನಿಯಮದ ಪ್ರಕಾರ ಅಪಘಾತ ಆದ ಬಳಿಕ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ನೀವು ನನ್ನ ಹೇಳಿಕ ದಾಖಲಸಿಕೊಳ್ಳಿ ಎಂದು ಪೊಲೀಸರಿಗೆ ಕಾನೂನಿನ ಪಾಠ ಮಾಡಿದ್ದಾನೆ. ಹೀಗೆ ಹೇಳಿದ ಸತೀಶ್ ಕುಮಾರ್ ನನ್ನು ಪೊಲೀಸರು ಠಾಣೆಯಲ್ಲೇ ಕೂರಿಸಿಕೊಂಡಿದ್ದಾರೆ. ನಂತರ ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿದಾಗ ಈತನ ಅಸಲಿಯತ್ತು ಬಯಲಾಗಿದೆ. ಆತ ಮಾಡಿದ್ದು ಅಪಘಾತವಲ್ಲ. ಕೊಲೆ ಯತ್ನ ಎನ್ನುವುದು ಗೊತ್ತಾಗಿದೆ.

ಕಿಷ್ಕಿಂಧೆ ರಸ್ತೆ ಕಿರಿಕಿರಿ..!
ಸತೀಶ್ ಕುಮಾರ್. ಬಿಎಸ್ಎನ್ಎಲ್ ನ ನಿವೃತ್ತ ಉದ್ಯೋಗಿ. ಮದುವೆಯಾಗದೇ ತಿರುಗಾಡಿಕೊಂಡಿರೋ ಗುಂಡರಗೋವಿ. ಮುರಳಿ ಪ್ರಸಾದ್ ತಂದೆ ವಸಂತ್ ಹಾಗೂ ಸತೀಶ್ ಕುಮಾರ್ ಇದೇ ಏರಿಯಾದಲ್ಲಿ 40-50 ವರ್ಷದಿಂದ ವಾಸ ಮಾಡುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಇವರಿಬ್ಬರ ಮನೆಗಳ ನಡುವೆ ಇದ್ದಿದ್ದು ಮೂರು ಫೀಟ್ ಕಾಲುದಾರಿ ಮಾತ್ರ. ಸಿಟಿ ಬೆಳೆಯುತ್ತಿದ್ದಂತೆ ನಿವಾಸಿಗಳೇ ತಮ್ಮ ತಮ್ಮ ಸ್ವಂತ ಜಾಗವನ್ನು ರಸ್ತೆಗೆ ಬಿಟ್ಟುಕೊಟ್ಟು 5 ಫೀಟ್ ನ ಕಿರಿಯದಾದ ರಸ್ತೆಯನ್ನು ಮಾಡಿಕೊಂಡಿದ್ದಾರೆ. ವಸಂತ್ ಕೂಡ ತಮ್ಮ ಸೈಟ್ ನಲ್ಲಿ ಮೂರು ಫೀಟ್ ರಸ್ತೆಗೆ ಅಂತಾ ಬಿಟ್ಟಿದ್ದಾರೆ. ಆದ್ರೆ ಸತೀಶ್ ಕುಮಾರ್ ಜಾಸ್ತಿ ಜಾಗ ಬಿಟ್ಟಿರಲಿಲ್ಲ. ಆದ್ರು ತನ್ನ ಮನೆ ಒಳಗೆ ಹೋಗಲು-ಬರಲು ಕಾರನ್ನು ತಿರುಗಿಸಲು ಕಷ್ಟ ಆಗುತ್ತೆ ಅಂತಾ ನಿತ್ಯ ಕಿರಿಕ್ ಮಾಡುತ್ತಿರುತ್ತಾನೆ. ಹೀಗೆ ಸ್ವಲ್ಫ ಶಬ್ಧ ಆದ್ರು, ಏನೆ ಆದ್ರು ಕಿರಿಕ್ ಮಾಡೊದು, ಜಗಳ ಆಡೋದು, ಅವಾಚ್ಯ ಶಬ್ಧಗಳಿಂದ ನಿಂಧಿಸೋದು ಮಾಡುತ್ತಿರುತ್ತಾನೆ. ಇನ್ನು ಇವರ ನಿತ್ಯ ಕಿರಿಕಿರಿಗೆ ಮುರಳಿ ಪ್ರಸಾದ್ ಗೆ ಮದುವೆಗೆ ಹುಡುಗಿ ಹುಡುಕೋದು ಕೂಡ ತೊಂದರೆಯಾಗಿರುತ್ತೆ. ಹುಡುಗಿ ಮನೆಯವರು ಮನೆ ನೋಡಲು ಬಂದ್ರೆ ಅವಾಚ್ಯ ಶಬ್ಧಗಳಿಂದ ಕಿರುಚುತ್ತಿದ್ದನಂತೆ. ಆದ್ರಿಂದ ಹೆಣ್ಣು ಸಿಗೋದು ತಡಲಾಯ್ತು ಅನ್ನೊದು ವಸಂತ್ ಕುಟುಂಬಸ್ಥರ ಆರೋಪ. ಹೀಗೆ ಈ ತಂಟೆ ತಕರಾರು ಕಳೆದ 6 ವರ್ಷದಿಂದಲೂ ಇರುತ್ತೆ.

ಅಪಘಾತ ಮಾಡಿ ಕೊಲೆಯತ್ನ..!
ಮುರಳಿ ಪ್ರಸಾದ್ ಮನೆಯಿಂದ ಹೊರಡುವುದನ್ನು ತನ್ನ ಶೆಡ್ ನಲ್ಲಿದ್ದ ಕಾರನಲ್ಲೇ ಕುಳಿತು ಗಮನಿಸುತ್ತಿದ್ದ ಸತೀಶ್ ಕುಮಾರ್ ಬಳಿಕ ರಭಸವಾಗಿ ಹೋಗಿ ಕೊಲೆ ಮಾಡವ ಸಲುವಾಗಿ ಗುದ್ದಿದ್ದಾನೆ. ಆದ್ರೆ ಬೈಕ್ ಕೆಳಗೆ ಬಿದ್ದಿದ್ದು, ಮುರಳಿ ಪ್ರಸಾದ್ ಸೈಡ್ ಗೆ ಬಿದ್ದಿದ್ದಾರೆ. ಇದರಿಂದ ಮುರಳಿ ಪ್ರಸಾದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದ್ರೆ ಕೈಕಾಲುಗಳಿಗೆ ಪೆಟ್ಟಾಗಿದೆ. ಇನ್ನು ಅಮಾಯಕಿ ಯಲ್ಲವ್ವ ಉತ್ತರ ಕರ್ನಾಟಕದ ಮೂಲದವಳು. ಈ ಎರಡು ಮನೆಯ ವ್ಯಾಜ್ಯಕ್ಕೂ ಆಕೆಗೂ ಸಂಬಂಧನೇ ಇರಲಿಲ್ಲ. ಆದ್ರೆ ಆಕೆ ಇಲ್ಲಿ ಬಲಿಪಶುವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
2023 ರಲ್ಲೂ ಅಪಘಾತ ಮಾಡೋ ಯತ್ನ..!
ಸತೀಶ್ ಕುಮಾರ್ ನ ಈ ಚಾಳಿ ಹೊಸದಲ್ಲ. 2023 ರಲ್ಲಿ ವಾಕಿಂಗ್ ಹೋಗುತ್ತಿದ್ದ ಮುರಳಿ ಪ್ರಸಾದ್ ನ ತಂದೆ ವಸಂತ್ ಗೆ ತನ್ನ ಬೈಕ್ ನಿಂದ ಗುದ್ದುವ ಯತ್ನ ಮಾಡಿದ್ದಾನೆ. ಅಂದು ಈ ಬಗ್ಗೆ ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆದ್ರೆ ಅಂದು ಪೊಲೀಸರು ಸಂಧಾನ ಮಾಡಿ ಕಳುಹಿಸಿದ್ರು. ಆಗಿನಿಂದ ವಸಂತ್ ಮನೆಯವರಿಗೆ ಈ ಭಯ ಇದ್ದೇ ಇತ್ತು. ಆದ್ರಿಂದ ಇವರು ಮನೆಯಿಂದ ಹೊರಹೋಗುವಾಗ ಸತೀಶ್ ಕುಮಾರ್ ಅಲ್ಲಿ ಇದ್ದಾನಾ ಇಲ್ವಾ ಅನ್ನೊದನ್ನು ಚೆಕ್ ಮಾಡಿಕೊಂಡು ಹೋಗುತ್ತಿದ್ರು. ಜೋಪಾನವಾಗಿರುವಂತೆ ಪರಸ್ಪರ ಎಚ್ಚರಿಕೆಯನ್ನು ಕೊಟ್ಟುಕೊಳ್ಳುತ್ತಿದ್ರು. ಆದ್ರು ಕೂಡ ಸತೀಶ್ ದಾಳಿ ಮಾಡಿದ್ದಾನೆ.

ಇನ್ನು ಮುರಳಿ ಪ್ರಸಾದ್ ಒಂದು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದಾರೆ. ಯಲ್ಲವ್ವ ಇನ್ನು ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಉರ್ವಾ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಮತ್ತು ಮಂಗಳೂರು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಅಜಾಗರೂಕ ಚಾಲನೆ ಮತ್ತು ದುಡುಕುತನದ ದೂರು ದಾಖಲಾಗಿದ್ದು, ಸತೀಶ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಅದೇನೆ ಇರಲಿ ಇಬ್ಬರ ಜಗಳದಲ್ಲಿ ಅಮಾಯಕ ಪಾದಚಾರಿ ಮಹಿಳೆ ಮಾತ್ರ ಗಂಭೀರ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದು ನಿಜಕ್ಕೂ ದುರಂತ.