ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ವಿಡಿಯೋ ಮಾಡಿದ್ದ ಯೂಟ್ಯೂಬರ್ ಎಂ.ಡಿ.ಸಮೀರ್ ವಿರುದ್ಧ ದಾಖಲಾದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ ನೀಡಿದೆ.
ಬೆಂಗಳೂರು: ಬೆಳ್ತಂಗಡಿ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ವಿಡಿಯೋ ಪ್ರಸಾರ ಮಾಡಿದ್ದ ಯೂಟ್ಯೂಬರ್ ಎಂ.ಡಿ.ಸಮೀರ್ ವಿರುದ್ಧ ಬಳ್ಳಾರಿಯ ಕೌಲ್ ಬಜಾರ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ಮಂಗಳವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಬೆಂಗಳೂರಿನ ಸಮೀರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಸಮೀರ್ ಪರ ವಕೀಲರು, ”ಎಫ್‌ಐಆರ್ ದಾಖಲಿಸಿರುವುದು ಕಾನೂನು ಬಾಹಿರ. ಇದು ನಾಗರಿಕರಿಗೆ ಸಾಂವಿಧಾನಿಕವಾಗಿ ಕೊಡಮಾಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು 19(1) ಮತ್ತು 21ನೇ ವಿಧಿಗೆ ವಿರುದ್ಧ” ಎಂದು ಪೀಠಕ್ಕೆ ತಿಳಿಸಿದರು.

”ಧಾರ್ಮಿಕ ವ್ಯಕ್ತಿಯ ಹೇಳಿಕೆ ಧರ್ಮದ ವಿರುದ್ಧ ಹೇಳಿಕೆ ಆಗುವುದಿಲ್ಲ. ಅದರ ವ್ಯಾಪ್ತಿ ಸೀಮಿತವಾದುದು. ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಆರೋಪಗಳು ಈ ಪ್ರಕರಣದಲ್ಲಿ ಅನ್ವಯ ಆಗುವುದಿಲ್ಲ. ಹಾಗೇನಾದರೂ ಇದ್ದರೆ ನಿತ್ಯಾನಂದ ಸ್ವಾಮಿ ವಿರುದ್ಧ ಪ್ರಕರಣ ದಾಖಲಿಸುವುದಕ್ಕೇ ಸಾಧ್ಯವಿರುತ್ತಿರಲಿಲ್ಲ” ಎಂದು ಪೀಠಕ್ಕೆ ತಿಳಿಸಿದರು.
”ಅಲ್ಲದೆ, ಅರ್ಜಿದಾರರನ್ನು ಬಂಧಿಸುವುದಕ್ಕೆ ತಡೆ ನೀಡಿದರೆ ಸಾಲದು. ಸಂಪೂರ್ಣ ಎಫ್‌ಐಆರ್‌ಗೆ ತಡೆ ನೀಡಬೇಕು” ಎಂದು ಮನವಿ ಮಾಡಿದರು.

ವಾದವನ್ನು ಮಾನ್ಯ ಮಾಡಿದ ಪೀಠ, ಎಫ್‌ಐಆರ್‌ಗೆ ತಡೆ ನೀಡಿ ಆದೇಶಿಸಿತು. ಅಂತೆಯೇ, ರಾಜ್ಯ ಪ್ರಾಸಿಕ್ಯೂಷನ್ ಮತ್ತು ತನಿಖಾಧಿಕಾರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ, ವಿಚಾರಣೆಯನ್ನು ಮುಂದೂಡಿತು.

ಇದೇ ಆರೋಪ ಸಂಬಂಧ ಯೂಟ್ಯೂಬರ್ ಸಮೀರ್‌ಗೆ ಬಳ್ಳಾರಿ ಪೊಲೀಸರು ತಡರಾತ್ರಿ ನೋಟಿಸ್ ಜಾರಿ ಮಾಡಿ, ಬೆಳಗ್ಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದ ಕ್ರಮಕ್ಕೆ ಈ ಹಿಂದೆ ಹೈಕೋರ್ಟ್ ತಡೆ ನೀಡಿ ಆದೇಶಿಸಿತ್ತು.